ಕಾರ್ಕಳ ಎಸ್‌ಎನ್‌ವಿಎಚ್ ತಂಡಕ್ಕೆ ಕೆಆರ್‌ಎಸ್ ಟ್ರೋಫಿ

ಮಣಿಪಾಲ, ಮೇ 4: ಕಟಪಾಡಿಯ ಕೆಆರ್‌ಎಸ್ ಕ್ರಿಕೆಟ್ ಅಕಾಡಮಿ ಆಶ್ರಯದಲ್ಲಿ ಉಡುಪಿ ಜಿಲ್ಲಾ ಕ್ರಿಕೆಟ್ ಸಂಸ್ಥೆ ವತಿಯಿಂದ ಮಣಿಪಾಲದಲ್ಲಿ ನಡೆದ ಅಂತರ್ ಹೈಸ್ಕೂಲ್ ಲೆದರ್‌ಬಾಲ್ ಕ್ರಿಕೆಟ್ ಪಂದ್ಯಾವಳಿಯ ಅಂತಿಮ ಪಂದ್ಯದಲ್ಲಿ ಉಡುಪಿಯ ವಿದ್ಯೋದಯ ಪಬ್ಲಿಕ್ ಸ್ಕೂಲ್ ತಂಡವನ್ನು 7 ವಿಕೆಟ್‌ಗಳ ಅಂತರದಿಂದ ಸೋಲಿಸಿದ ಕಾರ್ಕಳದ ಸ್ವಸ್ತಿಶ್ರೀ ನೇಮಿಸಾಗರ ವರ್ಣಿಜಿ ಪ್ರೌಢ ಶಾಲಾ ತಂಡ ಕೆಆರ್‌ಎಸ್ ಟ್ರೋಫಿಯನ್ನು ಗೆದ್ದುಕೊಂಡಿತು.
ಹದಿನೈದು ಹೈಸ್ಕೂಲು ತಂಡಗಳು ಭಾಗವಹಿಸಿದ ಈ ಪಂದ್ಯಾವಳಿಯ ಅಂತಿಮ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ವಿದ್ಯೋದಯ ತಂಡ 74 ರನ್‌ಗಳಿಗೆ ಆಲೌಟಾಯಿತು. ಇದಕ್ಕೆ ಉತ್ತರಿಸಿದ ಎಸ್‌ಎನ್‌ಎಚ್‌ವಿ ತಂಡ ಕೇವಲ 3 ವಿಕೆಟ್‌ಗಳ ನಷ್ಟಕ್ಕೆ ವಿಜಯದ ಗೆರೆ ದಾಟಿತು. ವಿದ್ಯೋದಯ ತಂಡದ ನಾಗಾರ್ಜುನ ಸರಣಿ ಶ್ರೇಷ್ಠ ಮತ್ತು ಉತ್ತಮ ದಾಂಡಿಗ, ಎಸ್‌ಎನ್‌ವಿಎಚ್‌ನ ಸುಮಂತ್ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ಪಡೆದರು. ಇದರೊಂದಿಗೆ ನಡೆದ ಮಹಿಳಾ ಕ್ರಿಕೆಟ್ ಪಂದ್ಯಾಟದ ಅಂತಿಮ ಪಂದ್ಯದಲ್ಲಿ ಮಣಿಪಾಲ ವಿವಿ ತಂಡವನ್ನು 88 ರನ್‌ಗಳಿಂದ ಸೋಲಿಸಿದ ಕೆಆರ್‌ಎಸ್ ಕಟಪಾಡಿ ತಂಡ ಪ್ರಶಸ್ತಿಯನ್ನು ಗೆದ್ದುಕೊಂಡಿತು.
ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಸಂಚಾಲಕ ಮನೋಹರ್ ಅಮೀನ್ ಬಹುಮಾನ ವಿತರಿಸಿದರು. ಉಡುಪಿ ಜಿಲ್ಲಾ ಕ್ರಿಕೆಟ್ ಸಂಸ್ಥೆಯ ಕಾರ್ಯದರ್ಶಿ ಬಾಲಕೃಷ್ಣ ಪರ್ಕಳ, ಶುಕೂರ್ ಸಾಹೇಬ್, ನ್ಯಾಯವಾದಿ ಗಣೇಶ ಮಟ್ಟು, ಕ್ರೀಡಾ ನಿರ್ದೇಶಕರಾದ ಶ್ರೀಧರ್ ಮತ್ತು ಶಾಂತಿ ಉಪಸ್ಥಿತರಿದ್ದರು.
ಡಾ.ಗಣೇಶ್ ಕಾಮತ್ ಸ್ವಾಗತಿಸಿ, ಉದಯಕುಮಾರ್ ವಂದಿಸಿದರು.





