ದಿಲ್ಲಿ: ಜೈಶ್ ಭಯೋತ್ಪಾದನಾ ಗುಂಪು ಪತ್ತೆ
12 ಶಂಕಿತರು ವಶಕ್ಕೆ
ಹೊಸದಿಲ್ಲಿ, ಮೇ 4: ಮಹತ್ತ್ವದ ಬೆಳವಣಿಗೆಯೊಂದರಲ್ಲಿ ಗುಪ್ತಚರ ಬ್ಯೂರೊ (ಐಬಿ) ಹಾಗೂ ದಿಲ್ಲಿ ಪೊಲೀಸ್‌ನವಿಶೇಷ ಘಟಕಗಳು ದೇಶದ ರಾಜಧಾನಿಯಲ್ಲಿ ಸಕ್ರಿಯವಾಗಿದ್ದ, ಜೈಶ್ ಮುಹಮ್ಮದ್ ಭಯೋತ್ಪಾದನಾ ಸಂಘಟನೆಯ ಗುಂಪೊಂದನ್ನು ಭೇದಿಸಿವೆ. ಈ ಸಂಬಂಧ ದಿಲ್ಲಿ ರಾಷ್ಟ್ರ ರಾಜಧಾನಿ ವಲಯ ಹಾಗೂ ಉತ್ತರ ಪ್ರದೇಶದ ದೇವಬಂದ್‌ನಿಂದ 12 ಮಂದಿ ಶಂಕಿತರನ್ನು ಅವು ವಶಕ್ಕೆ ತೆಗೆದುಕೊಂಡಿವೆ.
12 ಮಂದಿ ಜೈಶೆ ಮುಹಮ್ಮದ್ ಶಂಕಿತರಲ್ಲಿ 8 ಮಂದಿಯನ್ನು ದಿಲ್ಲಿಯಿಂದ ಹಾಗೂ ನಾಲ್ವರನ್ನು ದೇವಬಂದ್‌ನಿಂದ ವಶಕ್ಕೆ ಪಡೆಯಲಾಗಿದೆಂದು ಮೂಲಗಳು ತಿಳಿಸಿವೆ.
ಶಂಕಿತರಿಂದ, ಬಾಂಬ್ ತಯಾರಿ ಸಾಮಗ್ರಿ ಹಾಗೂ ಸುಧಾರಿತ ಸ್ಫೋಟ ಸಾಧನಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಲೋಧಿ ಕಾಲನಿಯ ವಿಶೇಷ ಘಟಕದ ಮುಖ್ಯಾಲಯದಲ್ಲಿ ಅವರ ವಿಚಾರಣೆ ನಡೆಯುತ್ತಿದೆ.
ಶಂಕಿತರ ಗುರುತು ಹಾಗೂ ರಾಷ್ಟ್ರೀಯತೆಯನ್ನು ಬಹಿರಂಗಪಡಿಸಿಲ್ಲ.
ಕನಿಷ್ಠ ಐವರು ಶಂಕಿತರು ಭಯೋತ್ಪಾದನಾ ಕೃತ್ಯಗಳಲ್ಲಿ ಭಾಗವಹಿಸಿರುವುದು ಖಚಿತವಾಗಿದೆ. ಉಳಿದವರ ಹೆಸರುಗಳು ಪ್ರಧಾನ ಶಂಕಿತನೊಂದಿಗೆ ಕೇಳಿ ಬಂದಿದ್ದು, ತನಿಖೆಗಾಗಿ ಅವರನ್ನು ವಶಪಡಿಸಿಕೊಳ್ಳಲಾಗಿದೆಯೆಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಕಾನೂನು ಬಾಹಿರ ಗುಂಪೊಂದರ ಸದಸ್ಯರಾಗಿರುವ ಕಾರಣ ಶಂಕಿತರ ವಿರುದ್ಧ ಕಾನೂನು ಬಾಹಿರ ಚಟುವಟಿಕೆ ತಡೆ ಕಾಯ್ದೆ, ಸ್ಫೋಟಕ ವಸ್ತು ಕಾಯ್ದೆ ಹಾಗೂ ಕ್ರಿಮಿನಲ್ ಪಿತೂರಿಯ ಆರೋಪದಲ್ಲಿ ಶಂಕಿತರ ವಿರುದ್ಧ ವಿಶೇಷ ಘಟಕವು ಎಫ್‌ಐಆರ್ ದಾಖಲಿಸಿದೆ.







