ಬೆಂಗಳೂರಿನ ನೆಲಮಂಗಳದಲ್ಲಿ ಅಪಘಾತ ; ಕಾಪು-ಮೂಳೂರಿನ ಕುಟುಂಬದ ಇಬ್ಬರು ಮೃತ್ಯು
ಕಾಪು, ಮೇ 4: ಇಲ್ಲಿಗೆ ಸಮೀಪದ ಮೂಳೂರಿನ ಕುಟುಂಬವೊಂದು ಬೆಂಗಳೂರಿನಲ್ಲಿರುವ ಕುಟುಂಬವೊಂದರ ಶುಭಕಾರ್ಯಕ್ರಮಕ್ಕೆ ತೆರಳುತ್ತಿದ್ದ ವೇಳೆ ಬೆಂಗಳೂರು ಸಮೀಪದ ನೆಲಮಂಗಳ ಬಳಿ ನಡೆದ ಟೆಂಪೋ ಟ್ರಾವೆಲರ್ ಅಪಘಾತದಲ್ಲಿ ಇಬ್ಬರು ಮೃತಪಟ್ಟು, 13 ಮಂದಿ ಗಾಯಗೊಂಡು ಬೆಂಗಳೂರಿನ ಆಸ್ಪತ್ರೆಗೆ ದಾಖಲಾದ ಘಟನೆ ಬುಧವಾರ ಬೆಳಗ್ಗೆ ಸಂಭವಿಸಿದೆ.ಅಪಘಾತಕ್ಕೆ ಎದುರಿನ ಸೀಟಿನಲ್ಲಿದ್ದ ದೀಪಶ್ರೀಯವರ ಇಬ್ಬರು ಸಹೋದರಿಯ ಪತಿ ನಾಗೇಶ್ ಯಾನೆ ನವೀನ್ (44) ಮತ್ತು ಕರಂದಾಡಿಯ ಆಟೊ ಚಾಲಕ ಉಮೇಶ್ (38) ಸ್ಥಳದಲ್ಲಿಯೇ ದಾರುಣವಾಗಿ ಮೃತಪಟ್ಟಿದ್ದಾರೆ. ನೆಲಮಂಗಳ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.
ಕಾಪು ಸಮೀಪದ ಮೂಳೂರು ಗ್ರಾಮದ ತಾರಿಬೆಟ್ಟು ದಿ. ಅಣ್ಣಯ್ಯ ಪೂಜಾರಿಯ ಪುತ್ರಿ ದೀಪಶ್ರೀ ಎಂಬವರ ಸೀಮಂತ ಕಾರ್ಯಕ್ರಮ ಬುಧವಾರ ಬೆಂಗಳೂರಿನಲ್ಲಿ ನಿಗದಿಯಾಗಿತ್ತು. ಆ ಪ್ರಯುಕ್ತ ಕಾಪುವಿನ ಟೆಂಪೋ ಟ್ರಾವೆಲರ್‌ವೊಂದನ್ನು ಗೊತ್ತುಪಡಿಸಿ ಕುಟುಂಬದ ಸದಸ್ಯರೆಲ್ಲರೂ ಮಂಗಳವಾರ ಸಂಜೆ ಪ್ರಯಾಣ ಬೆಳೆಸಿದ್ದರು. ಬೆಳಗ್ಗಿನ ಜಾವ 4:30ರ ವೇಳೆಗೆ ಪ್ರಯಾಣಿಕರೆಲ್ಲರೂ ಸುಖನಿದ್ರೆಯಲ್ಲಿದ್ದರು. ಬೆಂಗಳೂರು ಸಮೀಪದ ನೆಲಮಂಗಳ ಬಳಿ ಲಾರಿಯೊಂದು ಕೆಟ್ಟು ನಿಂತಿದ್ದು, ಆ ಲಾರಿಗೆ ಟೆಂಪೋ ಟ್ರಾವೆಲರ್ ಢಿಕ್ಕಿ ಹೊಡೆಯಿತು. ಚಾಲಕ ನಿದ್ದೆಯ ಮಂಪರಿನಲ್ಲಿದ್ದ ಎನ್ನಲಾಗಿದೆ. ಅಪಘಾತದ ತೀವ್ರತೆಗೆ ಟೆಂಪೋ ಟ್ರಾವೆಲರ್ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ. ಇನ್ನುಳಿದಂತೆ ಚಾಲಕ, ಮಕ್ಕಳು ಸಹಿತ 13 ಮಂದಿ ತೀವ್ರಗಾಯಗೊಂಡಿದ್ದಾರೆ.







