ರಸ್ತೆ ಅಪಘಾತ: ಸವಾರ ಮೃತ್ಯು
ಬ್ರಹ್ಮಾವರ, ಮೇ 4: ಉಪ್ಪೂರು ಗ್ರಾಮದ ಕೆ.ಜಿ.ರೋಡ್ ಸೇತುವೆಯಲ್ಲಿ ಇಂದು ಬೆಳಗ್ಗಿನ ಜಾವ ದ್ವಿಚಕ್ರ ವಾಹನಕ್ಕೆ ಇನ್ನೊಂದು ವಾಹನ ಹಿಂದಿನಿಂದ ಢಿಕ್ಕಿ ಹೊಡೆದ ಪರಿಣಾಮ ಸೇತುವೆಯ ದಂಡೆಗೆ ತಾಗಿ ಗಂಭೀರವಾಗಿ ಗಾಯಗೊಂಡ ಸವಾರ ಆಸ್ಪತ್ರೆಯಲ್ಲಿ ಮೃತಪಟ್ಟರೆ, ಸಹ ಸವಾರ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕುಂದಾಪುರ ಮಂಜಿಲ್‌ಕೋಡಿಯ ಮುಹಮ್ಮದ್ ಸನಾವುಲ್ಲ ತನ್ನ ಆ್ಯಕ್ಟಿವಾ ಹೊಂಡಾದಲ್ಲಿ ಮುಹಮ್ಮದ್ ಮುಸ್ತಫಾರನ್ನು ಸಹಸವಾರರನ್ನಾಗಿ ಕುಳ್ಳಿರಿಸಿಕೊಂಡು ಉಡುಪಿಯಿಂದ ಕುಂದಾಪುರದತ್ತ ಬರುತ್ತಿದ್ದರು. ಬೆಳಗಿನ ಜಾವ 2:30ರ ಸುಮಾರಿಗೆ ಸ್ವರ್ಣಾ ನದಿಗೆ ಹಾಕಿರುವ ಸೇತುವೆಯಲ್ಲಿ ಹಿಂದಿನಿಂದ ಬಂದ ವಾಹನ ಢಿಕ್ಕಿ ಹೊಡೆದಿತ್ತು. ಇದರಿಂದ ವಾಹನದ ನಿಯಂತ್ರಣ ಕಳೆದುಕೊಂಡ ಸನಾವುಲ್ಲಾ ಹಾಗೂ ಮುಸ್ತಫಾ ಇಬ್ಬರೂ ಸೇತುವೆಯ ಮೇಲೆ ಉರುಳಿಬಿದ್ದರಲ್ಲದೆ, ಸೇತುವೆ ಎಡಬದಿಯ ದಂಡೆಗೆ ತಾಗಿ ಇಬ್ಬರೂ ಗಂಭೀರವಾಗಿ ಗಾಯಗೊಂಡರು. ತಕ್ಷಣ ಇಬ್ಬರನ್ನು ಮಣಿಪಾಲ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ತಲೆಗೆ ತೀವ್ರವಾಗಿ ಗಾಯಗೊಂಡ ಸನಾವುಲ್ಲಾ ಇಂದು ಅಪರಾಹ್ನ 12:15ರ ಸುಮಾರಿಗೆ ಮೃತಪಟ್ಟರು. ತೀವ್ರ ಗಾಯಗೊಂಡ ಮುಸ್ತಫಾ ಚಿಕಿತ್ಸೆ ಪಡೆಯುತ್ತಿದ್ದಾರೆ. ಬಗ್ಗೆ ಬ್ರಹ್ಮಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.





