ಕಡಬ: ಸಿಡಿಲು ಬಡಿದು ಲೈನ್‌ಮ್ಯಾನ್ ಮೃತ್ಯು
ಕಡಬ, ಮೇ 4: ವಿದ್ಯುತ್ ಪರಿವರ್ತಕದಲ್ಲಿ ದುರಸ್ತಿ ಕೆಲಸ ಮಾಡುತ್ತಿದ್ದಾಗ ಸಿಡಿಲು ಬಡಿದು ಆಘಾತಕ್ಕೊಳಗಾಗಿ ಕಡಬ ಮೆಸ್ಕಾಂ ಲೈನ್‌ಮ್ಯಾನ್ ವಿಶ್ವನಾಥ ನಾಯ್ಕೋಡಿ (22) ಮೃತಪಟ್ಟ ಘಟನೆ ಐತ್ತೂರು ಗ್ರಾಮದ ಸುಂಕದಕಟ್ಟೆಯ ಬೇರಿಕೆಯಲ್ಲಿ ಮಂಗಳವಾರ ರಾತ್ರಿ ಸಂಭವಿಸಿದೆ. ಬಿಜಾಪುರ ಜಿಲ್ಲೆಯ ಸಿಂಧಗಿ ತಾಲೂಕಿನ ಕುಂಡಗೂಳಿ ನಿವಾಸಿ ಅಣ್ಣಪ್ಪರ ಪುತ್ರರಾಗಿರುವ ವಿಶ್ವನಾಥ, ಮಂಗಳವಾರ ಸಂಜೆ ಗುಡುಗು ಮಿಂಚಿನೊಂದಿಗೆ ಸುರಿದ ಮಳೆಯಿಂದಾಗಿ ಕೆಟ್ಟುಹೋಗಿದ್ದ ಪರಿವರ್ತಕವನ್ನು ದುರಸ್ತಿಗೊಳಿಸುತ್ತಿದ್ದರು. ಹೊಸದಾಗಿ ಲೈನ್‌ಮ್ಯಾನ್ ಹುದ್ದೆಗೆ ನೇಮಕಗೊಂಡಿದ್ದ ವಿಶ್ವನಾಥ ಕೇವಲ 5 ತಿಂಗಳ ಹಿಂದೆಯಷ್ಟೇ ಕರ್ತವ್ಯ ಆರಂಭಿಸಿದ್ದರು. ಘಟನಾ ಸ್ಥಳಕ್ಕೆ ಮೆಸ್ಕಾಂ ಮಂಗಳೂರು ವೃತ್ತ ಸುಪರಿಂಡೆಂಡೆಂಟ್ ಇಂಜಿನಿಯರ್ ಸುಕುಮಾರ್, ಪುತ್ತೂರು ಕಾರ್ಯನಿರ್ವಾಹಕ ಇಂಜಿನಿಯರ್ ನಾರಾಯಣ ಪೂಜಾರಿ, ಕಡಬ ಮೆಸ್ಕಾಂ ಅಧಿಕಾರಿಗಳಾದ ಸುರೇಶ್ ಕುಮಾರ್, ನಾಗರಾಜ್, ಕಡಬ ಆರಕ್ಷಕ ಉಪನಿರೀಕ್ಷಕ ಉಮೇಶ್ ಉಪ್ಪಳಿಕೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ್ದಾರೆ. ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.





