ಪ್ರೊಗೆರಿಯಾ ಪೀಡಿತ ಬಾಲಕ ಇನ್ನಿಲ್ಲ
ಮುಂಬೈ,ಮೇ 4: ವಂಶವಾಹಿ ದೋಷದಿಂದಾಗಿ ಕಾಣಿಸಿಕೊಳ್ಳುವ ಅಪರೂಪದ ರೋಗ ಪ್ರೊಗೆರಿಯಾದಿಂದಾಗಿ ವಿಶ್ವಾದ್ಯಂತ ಸುದ್ದಿಯಾಗಿದ್ದ ಭಿವಂಡಿಯ 15ರ ಹರೆಯದ ಬಾಲಕ ನಿಹಾಲ್ ಬಿಟ್ಲಾ ಸೋಮವಾರ ರಾತ್ರಿ ತನ್ನ ಹುಟ್ಟೂರು ತೆಲಂಗಾಣದ ಕರೀಂ ನಗರದಲ್ಲಿ ಕೊನೆಯುಸಿರೆಳೆದಿದ್ದಾನೆ.
ಪ್ರೊಗೆರಿಯಾದಿಂದ ಮಕ್ಕಳು ಹೆಚ್ಚು ವಯಸ್ಸಾದವರಂತೆ ಕಾಣುತ್ತಾರೆ. ನಿಹಾಲ್ ಸಾಮಾನ್ಯ ವಯಸ್ಸಿಗಿಂತ ಎಂಟು ಪಟ್ಟು ಹೆಚ್ಚು ವಯಸ್ಸಾದವನಂತಿದ್ದ ಎಂದು ಬಾಸ್ಟನ್‌ನ ಪ್ರೊಗೆರಿಯಾ ಸಂಶೋಧನಾ ಪ್ರತಿಷ್ಠಾನವು ತನ್ನ ವರದಿಯಲ್ಲಿ ಹೇಳಿದೆ.
ನಟ ಅಮಿತಾಬ್ ಬಚ್ಚನ್ ಅವರು 2009ರಲ್ಲಿ ತೆರೆ ಕಂಡಿದ್ದ ‘ಪಾ’ ಚಿತ್ರದಲ್ಲಿ ಪ್ರೊಗೆರಿಯಾ ಪೀಡಿತ ಬಾಲಕನ ಪಾತ್ರವನ್ನು ನಿರ್ವಹಿಸಿದ್ದರು. ನಿಹಾಲ್‌ನ ಕುಟುಂಬವು ಮದುವೆಯೊಂದರಲ್ಲಿ ಪಾಲ್ಗೊಳ್ಳಲು ತೆಲಂಗಾಣಕ್ಕೆ ತೆರಳಿತ್ತು ಎಂದು ಪ್ರತಿಷ್ಠಾನದ ಮುಂಬೈ ಪ್ರತಿನಿಧಿ ದಿನೇಶ ಚಿಂಡರಕರ್ ತಿಳಿಸಿದರು.
ಸೋಮವಾರ ಸಂಜೆ ಏಕಾಏಕಿ ಕುಸಿದು ಬಿದ್ದಿದ್ದ ನಿಹಾಲ್‌ನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಪಾರ್ಶ್ವವಾಯುವಿಗೆ ಗುರಿಯಾಗಿದ್ದ ಆತ ಚಿಕಿತ್ಸೆ ಫಲಕಾರಿಯಾಗದೆ ರಾತ್ರಿ 11:30ರ ಸುಮಾರಿಗೆ ಕೊನೆಯುಸಿರೆಳೆದ ಎಂದು ಆತನ ತಂದೆ ಶ್ರೀನಿವಾಸ ಬಿಟ್ಲಾ ಮಾಹಿತಿ ನೀಡಿದ್ದಾರೆ ಎಂದು ಹೇಳಿದ ಚಿಂಡರಕರ್, ನಿಹಾಲ್ ಮತ್ತು ಆತನ ಕುಟುಂಬ ಇಂತಹ ಮಕ್ಕಳನ್ನು ಹೊಂದಿರುವ ಇತರ ಕುಟುಂಬಗಳಿಗೆ ನೆರವಾಗುತ್ತಿದ್ದರು ಎಂದರು.





