ಜಿಶಾ ಕೊಲೆ ಪ್ರಕರಣದಲ್ಲಿ ಸದ್ಯಕ್ಕೆ ಮಧ್ಯಪ್ರವೇಶಿಸುವುದಿಲ್ಲ: ಕೇರಳ ಹೈಕೋರ್ಟ್

ಕೊಚ್ಚಿ,ಮೇ 6: ಪೆರುಂಬಾವೂರ್ ಜಿಶಾ ಹತ್ಯೆ ಪ್ರಕರಣದಲ್ಲಿ ಸದ್ಯಕ್ಕೆ ತಾನು ಮಧ್ಯಪ್ರವೇಶಿಸುವುದಿಲ್ಲ ಎಂದು ಹೈಕೋರ್ಟ್ ತಿಳಿಸಿದೆ.ಜಿಶಾರ ಕೊಲೆ ಪಾತಕವನ್ನು ಸಿಬಿಐ ತನಿಖೆ ನಡೆಸಬೇಕೆಂದು ಆಗ್ರಹಿಸಿ ಅಡ್ವೊಕೇಟ್ ಡಿಬಿ ಬಿನು ಸಮರ್ಪಿಸಿದ ಅರ್ಜಿಯನ್ನು ವಿಚಾರಣೆಗೆತ್ತಿಕೊಂಡ ಹೈಕೋರ್ಟ್ ತನ್ನ ಅಭಿಪ್ರಾಯವನ್ನು ಹೀಗೆ ತಿಳಿಸಿದೆ. ತನಿಖೆ ದಕ್ಷವಾಗಿ ಮುಂದೆ ಸಾಗುತ್ತಿರುವುದಾಗಿ ಸರಕಾರ ಕೋರ್ಟ್‌ನ್ನು ತಿಳಿಸಿತು. ಜಸ್ಟಿಸ್ ಶಫೀಖ್ ಅರ್ಜಿ ವಿಚಾರಣೆ ನಡೆಸಿದರು.
ತನಿಖೆ ಸರಿಯಾದ ರೀತಿಯಲ್ಲಿ ಮುಂದೆ ಹೋಗುತ್ತಿದೆ. ಪ್ರಕರಣವನ್ನು ತನಿಖೆ ಮಾಡುವ ಅಧಿಕಾರಿ ತಂಡದಲ್ಲಿ ಬದಲಾವಣೆ ನಡೆಸಲಾಗಿದೆ.ಆಲುವ ರೂರಲ್ ಎಸ್ಪಿ ಯತೀಶ್ ಚಂದ್ರ ನೇತೃತ್ವದಲ್ಲಿ ಮೂವರು ಡಿವೈಎಸ್ಪಿ, ಐವರು ಸಿಐ, ಏಳು ಎಸ್‌ಐ ಎಂಬಿವರನ್ನು ಒಳಗೊಂಡ 28 ಸದಸ್ಯರಿರುವ ತಂಡ ಕೇಸು ತನಿಖೆ ನಡೆಸುತ್ತಿದೆ. ಕೋರ್ಟ್ ಬಯಸುವುದಿದ್ದರೆ ತನಿಖೆಯ ಈವರೆಗಿನ ವರದಿಯನ್ನು ಕೋರ್ಟ್‌ಗೆ ಸಲ್ಲಿಸಲಾಗುವುದು ಎಂದು ಸರಕಾರ ತಿಳಿಸಿತ್ತು. ಆದ್ದರಿಂದ ತನಿಖಾ ವರದಿ ಸಲ್ಲಿಸಲು ಕೋರ್ಟ್ ಎರಡು ವಾರಗಳ ಸಮಯವನ್ನು ನೀಡಿತು. ಮೇ.30ರ ಮೊದಲು ವರದಿಯನ್ನು ಕೋರ್ಟ್‌ಗೆ ಸಲ್ಲಿಸಬೇಕೆಂದು ಅದು ಸಮಯ ಮಿತಿ ನಿಗದಿ ಪಡಿಸಿದೆ. ಜೀಷಾ ಹತ್ಯೆ ಕೇಸಿನಲ್ಲಿ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಕಾನೂನು ವಿದ್ಯಾರ್ಥಿ ಸಲ್ಲಿಸಿದ ಅರ್ಜಿಯನ್ನು ಹೈಕೋರ್ಟ್ ಇಂದೇ ಪರಿಗಣಿಸಲಿದೆ.





