ಕುರ್‌ಆನ್ ಸಂದೇಶ ಜಗತ್ತಿನ ಎಲ್ಲಾ ಜನರನ್ನು ತಲುಪಲಿ: ಶೇಖ್ ಅಬೂ ಉಮರ್ ಅಬ್ದುಲ್ ಅಝೀಝ್
ಎಸ್‌ಕೆಎಸ್ಸೆಂನಿಂದ ಕುರ್‌ಆನ್ ಸಂದೇಶ ಸಮಾವೇಶ ಮತ್ತು ಕುರ್‌ಆನ್ ಕನ್ನಡ ಭಾಷಾಂತರ ಬಿಡುಗಡೆ

ಮಂಗಳೂರು, ಮೇ 6: ಕುರ್‌ಆನ್‌ನ ಸಂದೇಶ ಜಗತ್ತಿನ ಎಲ್ಲಾ ಜನರನ್ನು ತಲುಪುವಂತಾಗಲಿ ಎಂದು ಟೊರೆಂಟೊ, ಕೆನಡಾದ ಅಂತಾರಾಷ್ಟ್ರೀಯ ಇಸ್ಲಾಮಿಕ್ ಧಾರ್ಮಿಕ ವಿದ್ವಾಂಸ ವೌಲವಿ ಶೇಖ್ ಅಬೂ ಉಮರ್ ಅಬ್ದುಲ್ ಅಝೀಝ್ ತಿಳಿಸಿದ್ದಾರೆ.
ಅವರು ಇಂದು ನಗರದ ಪುರಭವನದಲ್ಲಿ ಸೌತ್ ಕರ್ನಾಟಕ ಸಲಫಿ ಮೂವ್‌ಮೆಂಟ್(ರಿ)ಮಂಗಳೂರು ಇದರ ವತಿಯಿಂದ ಹಮ್ಮಿಕೊಂಡ ಕುರ್‌ಆನ್ ಸಂದೇಶ ಸಮಾವೇಶ ಮತ್ತು ಕುರ್‌ಆನ್ ಕನ್ನಡ ಭಾಷಾಂತರ ಗ್ರಂಥದ ಬಿಡುಗಡೆ ಸಮಾರಂಭವನ್ನುದ್ದೇಶಿಸಿ ಮಾತನಾಡಿದರು.
ಜಗತ್ತಿನಲ್ಲಿ ಕೋಟ್ಯಂತರ ಜನರನ್ನು ತಲುಪಿರುವ ಕುರ್‌ಆನ್ ಗ್ರಂಥ, ಕನ್ನಡಕ್ಕೆ ಅನುವಾದಗೊಂಡು ಇನ್ನಷ್ಟು ಜನರನ್ನು ತಲುಪಲು ಅನುಕೂಲವಾಗಲಿ ಎಂದು ಅಹ್ಮದ್ ಅನಸ್, ಶೇಖ್ ಅಬೂ ಉಮರ್ ಅಬ್ದುಲ್ ಅಝೀಝ್ ತಿಳಿಸಿದರು.
ಸಮಾರಂಭದಲ್ಲಿ ವೌಲವಿ ಅಹಮ್ಮದ್ ಅನಸ್ ‘ಕುರ್‌ಆನ್ ಅದ್ಭುತಗಳ ಅದ್ಭುತ’ ಎಂಬ ವಿಷಯದ ಬಗ್ಗೆ ಧಾರ್ಮಿಕ ಉಪನ್ಯಾಸ ನೀಡಿದರು.
ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ನಿವೃತ್ತ ಎಸಿಪಿ ಮದನ್ ಗಾಂವ್‌ಕರ್ ಮಾತನಾಡುತ್ತಾ, ಧಾರ್ಮಿಕ ಗ್ರಂಥಗಳ ವೌಲ್ಯಗಳನ್ನು ಅರಿತಾಗ ಸಮಾಜದಲ್ಲಿ ಸಾಮಾಜಿಕ ಸಾಮರಸ್ಯ ಕಾಪಾಡಲು ಸಾಧ್ಯವಾಗುತ್ತದೆ. ಪೊಲೀಸ್ ಇಲಾಖೆಯಲ್ಲಿ ಇದ್ದಾಗ ಸಮಾಜದಲ್ಲಿ ಧಾರ್ಮಿಕ ಗ್ರಂಥಗಳು ಸಮಾಜದಲ್ಲಿ ಜನರಲ್ಲಿ ನೈತಿಕವಾಗಿ ವೌಲ್ಯಗಳ ಪಾಲನೆಗೆ ಹೇಗೆ ಸಹಕಾರಿಯಾಗುತ್ತವೆ ಎನ್ನುವುದನ್ನು ಅರಿತುಕೊಂಡಿದ್ದೇನೆ ಎಂದು ವಿವರಿಸಿದರು.
ಸಮಾರಂಭದ ಅಧ್ಯಕ್ಷತೆಯನ್ನು ಸೌತ್ ಕರ್ನಾಟಕ ಸಲಫಿ ಮೂವ್‌ಮೆಂಟ್‌ನ ಅಧ್ಯಕ್ಷ ಯು.ಎನ್.ಅಬ್ದುರ್ರಝಾಕ್ ವಹಿಸಿದ್ದರು.
ವೇದಿಕೆಯಲ್ಲಿ ಕರ್ನಾಟಕ ಗೋವಾ ಜಮಾಅತೆ ಅಹ್ಲೇ ಹದೀಸ್ ನ ಉಪಾಧ್ಯಕ್ಷ ಬಾಬಾ ಖಾನ್, ಯುನಿಟಿ ಹೆಲ್ತ್ ಕಾಂಪ್ಲೆಕ್ಸ್‌ನ ಅಧ್ಯಕ್ಷ ಡಾ.ಸಿ.ಪಿ.ಹಬೀಬ್ ರಹ್ಮಾನ್, ಕರ್ನಾಟಕ ಸೌತ್ ಕರ್ನಾಟಕ ಸಲಫಿ ಮೂವ್‌ಮೆಂಟ್‌ನ ಉಪಾಧ್ಯಕ್ಷ ಇಸ್ಮಾಯೀಲ್ ಶಾಫಿ,ಅಬೂಬಕರ್ ಪಾಂಡೇಶ್ವರ, ಪ್ರಧಾನ ಕಾರ್ಯದರ್ಶಿ ಬಶೀರ್ ಅಹಮ್ಮದ್ ಶಾಲಿಮಾರ್, ಮುಹಮ್ಮದ್ ಇಲ್ಯಾಸ್, ಪೌಝಲ್ ಖಾನ್, ಬಶೀರ್ ಸಾಗರ್, ಎಸ್.ಎಂ.ಮಜೀದ್, ಶರೀಫ್ ಕುಂಜತ್ತಬೈಲ್, ವೌಲವಿ ಮುಸ್ತಾಫ ದಾರಿಮಿ, ವೌಲವಿ ಅಹ್ಮದ್ ಅಲಿ ಖಾಸಿಮಿ ಮೊದಲಾದವರು ಉಪಸ್ಥಿತರಿದ್ದರು. ಫಾಝಿಲ್ ಕಾರ್ಯಕ್ರಮ ನಿರೂಪಿಸಿದರು.







