ಸೂಕಿ ಪ್ರಕಾರ ರೋಹಿಂಗ್ಯ ಮುಸ್ಲಿಮರು ಮಯನ್ಮಾರ್ ನ ಪ್ರಜೆಗಳೇ ಅಲ್ಲ !
ಮಿಲಿಟರಿ ಸರ್ವಾಧಿಕಾರಿಗಳ ರಾಗಕ್ಕೆ ತಾಳ ಹಾಕಿದ ಶಾಂತಿ ದೂತೆ

ಬ್ಯಾಂಕಾಕ್ , ಮೇ 6: ಮ್ಯಾನ್ಮಾರ್ ನ ಪ್ರಪ್ರಥಮ ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿ ಆಯ್ಕೆಯಾದ ಸರಕಾರದ ನಾಯಕಿ , ನೊಬೆಲ್ ಶಾಂತಿ ಪುರಸ್ಕೃತೆ ಆಂಗ್ ಸಾನ್ ಸೂಕಿ ಪ್ರಕಾರ ಅವರ ದೇಶದಲ್ಲಿ ತೀವ್ರ ಹಿಂಸೆಗೆ ತುತ್ತಾಗಿರುವ ರೋಹಿಂಗ್ಯ ಮುಸ್ಲಿಮರು ಆ ದೇಶದ ನಾಗರೀಕರೇ ಅಲ್ಲ !
ಸೂಕಿ ಪ್ರಕಾರ ಆಕೆಯ ದೇಶದಲ್ಲಿ 135 ಜನಾಂಗಗಳಿವೆ. ಆದರೆ ರೊಹಿಂಗ್ಯ ಎಂಬುದು ಆ ದೇಶಕ್ಕೆ ಸೇರಿದ ಜನಾಂಗವಲ್ಲ. ಹೀಗೆಂದು ಖುದ್ದು ಸೂಕೀಯೇ ಹೇಳಿದ್ದಾರೆ. ಅಮೇರಿಕದ ರಾಯಭಾರಿಗೆ ' ರೋಹಿಂಗ್ಯ ಜನರು ' ಎಂದು ಅವರನ್ನು (ಮುಸ್ಲಿಮರನ್ನು ) ಕರೆಯಬೇಡಿ ಎಂದು ಸೂಕಿ ಹೇಳಿದ್ದು ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ. ರೋಹಿಂಗ್ಯ ಮುಸ್ಲಿಮರ ಹಲವು ಪೀಳಿಗೆಗಳೇ ಮಯಾನ್ಮಾರ್ ನಲ್ಲಿ ಬದುಕುತ್ತಿವೆ.
ಸೂಕಿ ಸರಕಾರದ ವಕ್ತಾರ ಕೂಡ ಇದನ್ನು ಖಚಿತಪಡಿಸಿದ್ದಾರೆ. " ಅವರನ್ನು ನಾವು ನಮ್ಮ ನಾಗರೀಕರು ಎಂದು ಪರಿಗಣಿಸುವುದಿಲ್ಲ . ಆದ್ದರಿಂದ ಅವರನ್ನು ರೋಹಿಂಗ್ಯ ಎಂದು ಕರೆಯುವುದಿಲ್ಲ " ಎಂದು ವಿದೇಶಾಂಗ ಇಲಾಖೆಯ ವಕ್ತಾರ ಯು ಕ್ಯಾವ್ ಝೇ ಯಾ ಹೇಳಿದ್ದಾರೆ. ಈ ಹಿಂದಿನ ಮಿಲಿಟರಿ ಆಡಳಿತವೂ ರೋಹಿಂಗ್ಯರನ್ನು ನಾಗರೀಕರು ಎಂದು ಪರಿಗಣಿಸುವುದಿಲ್ಲ.






