ಎಂಸಿಎಫ್‌ನಲ್ಲಿ ಯೂರಿಯಾ ಉತ್ಪಾದನೆ ಸ್ಥಗಿತ
ಮುಂಗಾರಿನಲ್ಲಿ ಕಾಡಲಿದೆಯೇ ಯೂರಿಯಾ ಕೊರತೆ?

ಮಂಗಳೂರು, ಮೇ6: ಜನಸಾಮಾನ್ಯರನ್ನು ಕಂಗೆಡೆಸಿರುವ ನೀರಿನ ಕೊರತೆ ಇದೀಗ ನಗರದ ಪ್ರಮುಖ ಕೈಗಾರಿಕಾ ಸಂಸ್ಥೆಗಳಿಗೂ ಬಿಸಿ ಮುಟ್ಟಿಸಿದ್ದು, ರಾಜ್ಯಕ್ಕೆ ಶೇ.80ರಷ್ಟು ರಸಗೊಬ್ಬರವನ್ನು ಪೂರೈಸುವ ಮಂಗಳೂರು ಕೆಮಿಕಲ್ಸ್ ಆ್ಯಂಡ್ ಫರ್ಟಿಲೈಸರ್ಸ್ (ಎಂಸಿಎಫ್)ನಲ್ಲೂ ಉತ್ಪಾದನೆ ಸ್ಥಗಿತ ಆರಂಭಗೊಂಡಿದೆ.
ಶುಕ್ರವಾರ ಸಂಜೆಯ ವೇಳೆಗೆ ಯೂರಿಯಾ ಉತ್ಪಾದನೆಯನ್ನು ಸಂಪೂರ್ಣ ಸ್ಥಗಿತಗೊಳಿಸಲು ಸಂಸ್ಥೆ ಮುಂದಾಗಿದೆ. ಇದರಿಂದಾಗಿ ಮುಂದಿನ ಮುಂಗಾರುವಿನಲ್ಲಿ ರಾಜ್ಯದಲ್ಲಿ ಮುಖ್ಯವಾಗಿ ಯೂರಿಯಾ ಕೊರತೆ ಕಾಡುವ ಭೀತಿ ಎದುರಾಗಿದೆ.
ನೀರಿನ ಕೊರತೆಯಿಂದಾಗಿ ಎಂಸಿಎಫ್‌ನಲ್ಲಿ ಈಗಾಗಲೇ ಶೇ.50ರಷ್ಟು ಯೂರಿಯಾ ಉತ್ಪಾದನೆ ಇಳಿಕೆಯಾಗಿದೆ. ಎಂಸಿಎಫ್‌ಗೆ ಮಹಾನಗರ ಪಾಲಿಕೆಯ ಪಣಂಬೂರು ಪ್ರಮುಖ ಪೈಪ್‌ಲೈನ್‌ನಿಂದ ಸಂಸ್ಕರಣೆಯಾಗದ ನೀರು ಪೂರೈಕೆಯಾಗುತ್ತಿದೆ. ಕುಡಿಯುವ ನೀರಿನ ಅಭಾವದ ಹಿನ್ನೆಲೆಯಲ್ಲಿ ಈಗಾಗಲೇ ಒಂದು ವಾರದ ಹಿಂದೆ ಕೈಗಾರಿಕೆಗಳಿಗೆ ನೀರು ಪೂರೈಕೆ ಸ್ಥಗಿತಗೊಳಿಸಲಾಗಿದೆ. ಎಂಸಿಎಫ್ ಇತರ ಯಾವುದೇ ಜಲಮೂಲ ಹೊಂದಿಲ್ಲದ ಕಾರಣ ಇದೀಗ ಎಂಸಿಎಫ್ ಕೂಡಾ ತನ್ನ ಉತ್ಪಾದನೆಯನ್ನು ಸ್ಥಗಿತಗೊಳಿಸಿ ಶಟ್‌ಡೌನ್ ಮಾಡುವ ಪರಿಸ್ಥಿತಿಗೆ ತಲುಪಿದೆ.
ಪ್ರತಿದಿನ 1,350 ಟನ್ ಉತ್ಪಾದನೆಯಾಗುತ್ತಿದ್ದ ಯೂರಿಯಾ ಪ್ರಮಾಣ ಇದೀಗ 600 ಟನ್‌ಗೆ ಇಳಿಕೆಯಾಗಿದೆ. ಯೂರಿಯಾವನ್ನು ಉತ್ಫಾದಿಸುವ ಕರ್ನಾಟಕದ ಏಕೈಕ ರಾಸಾಯನಿಕ ರಸಗೊಬ್ಬರ ಕಾರ್ಖಾನೆಯಾಗಿದೆ. 1974ರಲ್ಲಿ ಆರಂಭಗೊಂಡ ಎಂಸಿಎಫ್ ಕರ್ನಾಟಕದ ಜತೆಗೆ ನೆರೆ ರಾಜ್ಯಗಳಿಗೂ ಯೂರಿಯಾವನ್ನು ಪೂರೈಕೆ ಮಾಡುತ್ತಿದೆ. ದಿನವೊದಕ್ಕೆ ಇಲ್ಲಿ 1,200 ಟನ್ ಯೂರಿಯಾ ಹಾಗೂ 1,000 ಟನ್ ಡಿಎಪಿ (ಡಿ ಅಮೋನಿಯಂ ಫಾಸ್ಪೇಟ್) ಉತ್ಪಾದನೆಯಾಗುತ್ತಿದೆ. ಇದೀಗ ನೀರಿನ ಕೊರತೆಯಿಂದ ಸ್ಥಗಿತಗೊಳ್ಳುವ ಯೂರಿಯಾ ಉತ್ಪಾದನಾ ಪ್ರಕ್ರಿಯೆ ಮತ್ತೆ ಮಳೆಗಾಲ ಆರಂಭವಾದ ಬಳಿಕವಷ್ಟೆ ಪುನರಾರಂಭಗೊಳ್ಳಬೇಕಿದೆ.
ಒಟ್ಟಿನಲ್ಲಿ, ಪ್ರಸಕ್ತ ಸಾಲಿನಲ್ಲಿ ಜಿಲ್ಲೆಯಲ್ಲಿ ಉಂಟಾಗಿರುವ ನೀರಿನ ಕೊರತೆ ಕೈಗಾರಿಕೆಗಳಿಗೂ ಬಹುವಾಗಿ ತಟ್ಟಿದ್ದು, ಇದು ಕೂಡಾ ಜನಜೀವನದ ಮೇಲೆ ಇನ್ನಷ್ಟು ಹೊಡೆತ ನೀಡುವ ಆತಂಕವನ್ನು ಸೃಷ್ಟಿಸಿದೆ.







