ಲೈನ್‌ಮ್ಯಾನ್ ವರ್ಗಾವಣೆ ಖಂಡಿಸಿ ಮೆಸ್ಕಾಂಗೆ ಮುತ್ತಿಗೆ

ಸೊರಬ, ಮೇ 6: ಮೆಸ್ಕಾಂ ಉಪ ವಿಭಾಗದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಲೈನ್‌ಮ್ಯಾನ್ ಜಿ. ಪ್ರಕಾಶ್ ಅವರ ವರ್ಗಾವಣೆ ಆದೇಶವನ್ನು ಹಿಂಪಡೆಯಬೇಕೆಂದು ಆಗ್ರಹಿಸಿ ವಿವಿಧ ಗ್ರಾಮಗಳ ಗ್ರಾಮಸ್ಥರು ಪಟ್ಟಣದ ಮೆಸ್ಕಾಂ ಕಚೇರಿಗೆ ತೆರಳಿ ಎಇಇ ವಿನಯಕುಮಾರ್ ಅವರ ಮೂಲಕ ಮೆಸ್ಕಾಂ ಅಧೀಕ್ಷಕ ಇಂಜಿನಿಯರ್ ಅವರಿಗೆ ಮನವಿ ಸಲ್ಲಿಸಿದರು. ಮನವಿ ಸಲ್ಲಿಸಿದ ಬಳಿಕ ಮಾತನಾಡಿದ ಹಳೆಸೊರಬ ಗ್ರಾಪಂ ಮಾಜಿ ಅಧ್ಯಕ್ಷ ನಿಂಗಪ್ಪಗುಂಡಶೆಟ್ಟಿಕೊಪ್ಪ, ಮೆಸ್ಕಾಂ ಇಲಾಖೆಯಲ್ಲಿ ಯಾವುದೋ ಲಾಭಿಗೆ ಒಳಗಾಗಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ ಜಿ. ಪ್ರಕಾಶ್ ಅವರಿಗೆ ಮೆಸ್ಕಾಂ ಅಧೀಕ್ಷಕ ಇಂಜಿನಿಯರ್ ದಿಢೀರನೆ ವರ್ಗಾವಣೆ ಮಾಡಿರುವುದು ಖಂಡನಾರ್ಹ ಎಂದರು.
ಈಗಾಗಲೇ ತಾಲೂಕಿನಲ್ಲಿ ಬರಗಾಲವಿದೆ. ನಮ್ಮ ಭಾಗದ ಸುತ್ತಮುತ್ತಲಿನ ರೈತರಿಗೆ ಹಾಗೂ ಗ್ರಾಮೀಣ ಭಾಗದ ಜನರಿಗೆ ಪ್ರಕಾಶ್ ವರ್ಗಾವಣೆಯಿಂದ ತೊಂದರೆಯಾಗಲಿದೆ ಎಂದ ಅವರು, ವರ್ಗಾವಣೆಯ ಆದೇಶವನ್ನು ಪುನರ್‌ಪರಿಶೀಲಿಸುವ ಮೂಲಕ ಅವರು ಕಾರ್ಯನಿರ್ವಹಿಸುತ್ತಿರುವ ಮೂಲ ಸ್ಥಾನದಲ್ಲಿಯೇ ಮುಂದುವರಿಯಲು ಅವಕಾಶ ನಿಡಬೇಕು ಎಂದು ಆಗ್ರಹಿಸಿದರು.
ಕಡಸೂರು ಗ್ರಾಪಂ ಉಪಾಧ್ಯಕ್ಷ ಶಿವಕುಮಾರ್ ಮಾತನಾಡಿ, ತಾಲೂಕಿನ ಕರಡಿಗೆರೆ, ಗುಂಡಶೆಟ್ಟಿಕೊಪ್ಪ, ಯಲಸಿ, ತಾವರೆಹಳ್ಳಿ, ಜಂಬೆಹಳ್ಳಿ, ಹಲಸಗೋಡು, ಕಕ್ಕರಸಿ, ತಂಡಿಗೆ, ಕೋಣನಮನೆ, ಕಡಸೂರು, ಚೌಡಿಕೊಪ್ಪ ಮತ್ತು ಕಡೆಗದ್ದೆ ಗ್ರಾಮಗಳಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುವ ನೌಕರರನ್ನು ವರ್ಗಾವಣೆ ಮಾಡುವುದರಿಂದ ಸಾರ್ವಜನಿಕರಿಗೆ ಹೆಚ್ಚಿನ ಅನಾನುಕೂಲವಾಗಲಿದೆ. ಅಧಿಕಾರಿಗಳು ತಕ್ಷಣವೇ ಅವರ ವರ್ಗಾವಣೆ ಆದೇಶವನ್ನು ಹಿಂಪಡೆಯಬೇಕು. ಇಲ್ಲವಾದಲ್ಲಿ ಅವರು ಕಾರ್ಯನಿರ್ವಹಿಸುವ ವ್ಯಾಪ್ತಿಯ ಗ್ರಾಮಸ್ಥರೊಡಗೂಡಿ ಮೆಸ್ಕಾಂ ಕಚೇರಿ ಎದುರು ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು. ಈ ಸಂದರ್ಭದಲ್ಲಿ ಗ್ರಾಪಂ ಸದಸ್ಯರುಗಳಾದ ಜಗದೀಶ್ ಕಕ್ಕರಸಿ, ವೀರಭದ್ರಪ್ಪ, ಪ್ರಮುಖರಾದ ಬಿ.ಬುಕ್ಕೇಶ್, ಬಸವರಾಜ ಗುಂಡಶೆಟ್ಟಿಕೊಪ್ಪ, ಜಾನಕಪ್ಪ, ಚಂದ್ರಪ್ಪಕಕ್ಕರಸಿ, ಚೌಡಪ್ಪ, ಲೋಕಪ್ಪ, ಬಸವರಾಜ ಕಕ್ಕರಸಿ, ಯಲಸಿ ಸಿದ್ದಪ್ಪ ಒಡೆಯರ್, ಆನಂದಪ್ಪಯಲಸಿ, ಬಾಲಕೃಷ್ಣ ಕೊಠಾರಿ ಸೇರಿದಂತೆ ಹಲವು ಗ್ರಾಮಗಳ ಗ್ರಾಮಸ್ಥರು ಭಾಗವಹಿಸಿದ್ದರು.







