ಸೌದಿ ಅರೇಬಿಯಾ ಪ್ರವೇಶಕ್ಕೆ ಶಾಶ್ವತ ನಿಷೇಧ
ಮಧ್ಯವರ್ತಿಯ ಪ್ರಮಾದಕ್ಕೆ ಬಲಿಯಾದ ಶಿವಮೊಗ್ಗ ವ್ಯಕ್ತಿ!
ಶಿವಮೊಗ್ಗ, ಮೇ 6: ಸೌದಿ ಅರೇಬಿಯ ದೇಶಕ್ಕೆ ತಾತ್ಕಾಲಿಕವಾಗಿ ಪ್ರವೇಶ ನಿಷೇಧಿಸಲಾಗಿದ್ದ ಶಿವಮೊಗ್ಗದ ವ್ಯಕ್ತಿಯೋರ್ವರು, ವೀಸಾ ಮಾಡಿಕೊಡುವ ಮಧ್ಯವರ್ತಿ ಮಾಡಿದ ವಂಚನೆಯಿಂದ ಆ ದೇಶದ ಪ್ರವೇಶದ ಮೇಲೆ ಶಾಶ್ವತ ನಿರ್ಬಂಧಕ್ಕೆ ತುತ್ತಾಗಿರುವ ಘಟನೆ ವರದಿಯಾಗಿದೆ. ಅಕ್ಮಲ್ ಶರೀಫ್ ಮಧ್ಯವರ್ತಿಯ ವಂಚನೆಗೊಳಗಾಗಿ ಶಾಶ್ವತ ನಿರ್ಬಂಧಕ್ಕೆ ತುತ್ತಾಗಿರುವ ವ್ಯಕ್ತಿಯಾಗಿದ್ದಾರೆ. ಈ ಸಂಬಂಧ ಅವರು ಕೆ.ಆರ್.ಪುರಂ ರಸ್ತೆಯಲ್ಲಿರುವ ದಾವರ್ ಅಲಿ ಇಂಟರ್‌ನ್ಯಾಷನಲ್ ಕಚೇರಿಯ ಇರ್ಫಾನ್ (48) ಎಂಬವರ ವಿರುದ್ಧ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಘಟನೆ ಹಿನ್ನೆಲೆ: ಅಕ್ಮಲ್ ಶರೀಪ್‌ರವರು 2012 ನೆ ಸಾಲಿನಲ್ಲಿ ಸೌದಿ ಅರೇಬಿಯಕ್ಕೆ ತೆರಳಿದ್ದರು. ಅವರು ಕೆಲಸ ಮಾಡುತ್ತಿದ್ದ ಮಾಲಕ ಒಂದೂವರೆ ತಿಂಗಳ ಸಂಬಳ ನೀಡಿರಲಿಲ್ಲ. ಈ ಕುರಿತಂತೆ ಅವರು ಸೌದಿ ಪೊಲೀಸರಿಗೆ ಮಾಲಕನ ವಿರುದ್ಧ ದೂರು ನೀಡಿ ಕೋರ್ಟ್‌ನ ಆದೇಶದಂತೆ ಮಾಲಕನಿಂದ ಬರಬೇಕಿದ್ದ ಹಣ ಪಡೆದು ಕೊಂಡಿದ್ದರು. ತದನಂತರ ಅಕ್ಮಲ್ ಶರೀಫ್‌ರಿಗೆ ಮಾಲಕ ಮೂರು ವರ್ಷಗಳ ಕಾಲ ಸೌದಿ ಅರೇಬಿಯ ಪ್ರವೇಶಿಸದಂತೆ ನಿಷೇಧ ಹೇರಿಸಿದ್ದನು. ಈ ಹಿನ್ನೆಲೆ ಯಲ್ಲಿ ಅವರು ಭಾರತಕ್ಕೆ ಹಿಂದಿರುಗಿ ಆರು ತಿಂಗಳ ಕಾಲವಿದ್ದರು. ಮತ್ತೆ ಕತ್ತಾರ್ ದೇಶಕ್ಕೆ ತೆರಳಿ 3 ವರ್ಷ ಕೆಲಸ ಮಾಡಿ ಸ್ವದೇಶಕ್ಕೆ ಬಂದಿದ್ದರು. ಇತ್ತೀಚೆಗೆ ಸ್ಥಳೀಯ ದಿನಪತ್ರಿಕೆಯೊಂದರಲ್ಲಿ ವೀಸಾ ಕೊಡಿಸುವ ಜಾಹೀರಾತು ಪ್ರಕಟವಾಗಿತ್ತು. ಅದರಲ್ಲಿದ್ದ ಮೊಬೈಲ್ ನಂಬರ್‌ಗೆ ಕರೆ ಮಾಡಿದಾಗ ಇರ್ಫಾನ್ ಎಂಬುವರು ಮಾತನಾಡಿ, ಕೆ.ಆರ್.ಪುರಂ ರಸ್ತೆಯಲ್ಲಿರುವ ಕಚೇರಿಗೆ ಆಗಮಿಸುವಂತೆ ಸೂಚಿಸಿದ್ದರು. ಸೌದಿ ಅರೇಬಿಯಕ್ಕೆ ಹೋಗಲು ಇದ್ದ ನಿಷೇಧ ತೆರವುಗೊಳಿಸುವುದಾಗಿ ಆಪಾದಿತ ಇರ್ಫಾನ್‌ರವರು ಅಕ್ಮಲ್ ಶರೀಪ್‌ರವರಿಗೆ ಭರವಸೆ ನೀಡಿ 65 ಸಾವಿರ ರೂ.ಪಡೆದುಕೊಂಡಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಕರಾರು ಪತ್ರ ಮಾಡಿಕೊಳ್ಳಲಾಗಿತ್ತು. ಆದರೆ 3 ತಿಂಗಳು ಕಳೆದರೂ ಸೌದಿ ಅರೇಬಿಯಕ್ಕೆ ಹೋಗಲು ವೀಸಾ ಕೊಟ್ಟಿಲ್ಲ. ಈ ಸಂಬಂಧ ಅಕ್ಮಲ್ ಶರೀಫ್ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಇರ್ಫಾನ್ ವಿರುದ್ಧ ದೂರು ದಾಖಲಿಸಿದ್ದರು.ಇದಾದ ನಂತರ ಆಪಾದಿತನು ವೀಸಾ ಹಾಗೂ ಸೌದಿ ಅರೇಬಿಯಾಕ್ಕೆ ಹೋಗುವ ಟಿಕೆಟ್ ಕೊಟ್ಟಿದ್ದಾನೆ. ಇದರ ಆಧಾರದ ಮೇಲೆ ಅಕ್ಮಲ್ ಷರೀಫ್‌ರವರು ಕಲೆದ ಎಪ್ರಿಲ್ 13 ರಂದು ಸೌದಿ ಅರೇಬಿಯಕ್ಕೆ ತೆರಳಿದ್ದು, ವಿಮಾನ ನಿಲ್ದಾಣದಲ್ಲಿ ಅವರ ಬೆರಳಚ್ಚು ತೆಗೆಯುವಾಗ 3ವರ್ಷಗಳ ಕಾಲ ಸೌದಿ ಅರೇಬಿಯಾಕ್ಕೆ ನಿಷೇಧ ಹೇರಿರುವುದು ಚಾಲ್ತಿಯಲ್ಲಿರುವ ವಿಷಯ ಅಲ್ಲಿನ ಅಧಿಕಾರಿಗಳಿಗೆ ತಿಳಿದಿದೆ. ಈ ಹಿನ್ನೆಲೆಯಲ್ಲಿ ಅಲ್ಲಿನ ಅಧಿಕಾರಿಗಳು ಶಾಶ್ವತವಾಗಿ ಸೌದಿ ಅರೇಬಿಯ ಪ್ರವೇಶದ ಮೇಲೆ ಅಕ್ಮಲ್ ಶರೀಪ್‌ರವರಿಗೆ ನಿಷೇಧ ಹೇರಿ ವಾಪಾಸ್ ಭಾರತಕ್ಕೆ ಕಳುಹಿಸಿದ್ದಾರೆ.
ಹಣ ವಾಪಸ್ ಕೊಟ್ಟಿಲ್ಲ: ಇದಾದ ನಂತರ ಆಪಾದಿತ ಇರ್ಫಾನ್‌ರನ್ನು ಭೇೀಟಿಯಾಗಿ ಕೊಟ್ಟ ಹಣ ವಾಪಾಸ್ ಕೊಡುವಂತೆ ಕೇಳಿದ್ದು, ಆ ವೇಳೆ ಹಣ ವಾಪಸ್ ನೀಡುವುದಿಲ್ಲವೆಂದು ಆಪಾದಿತ ಬೆದರಿಕೆ ಹಾಕಿ ಕಳುಹಿಸಿದ್ದಾನೆ ಎಂದು ಅಕ್ಮಲ್ ಷರೀಫ್ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.





