ಆ್ಯಂಬುಲೆನ್ಸ್, ನವಜಾತ ಶಿಶು ಸುಸ್ಥಿರ ಘಟಕ ಸಚಿವ ಕಿಮ್ಮನೆ ಉದ್ಘಾಟನೆ
ತೀರ್ಥಹಳ್ಳಿ, ಮೇ 6: ಪಟ್ಟಣದ ಜಯಚಾಮರಾಜೇಂದ್ರ ಸರಕಾರಿ ಆಸ್ಪತ್ರೆಯಲ್ಲಿ ನೂತನ ಆ್ಯಂಬುಲೆನ್ಸ್ ವಾಹನ ಲೋಕಾರ್ಪಣೆ ಹಾಗೂ ನವಜಾತ ಶಿಶು ಸುಸ್ಥಿರ ಘಟಕವನ್ನು ಜಿಲ್ಲಾ ಉಸ್ತುವಾರಿ ಸಚಿವ ಕಿಮ್ಮನೆ ರತ್ನಾಕರ ಉದ್ಘಾಟಿಸಿದರು.
ಈ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮೂಲಭೂತ ಸೌಕರ್ಯಗಳ ಬಗ್ಗೆ ಸಾರ್ವಜನಿಕರು ಅಪೇಕ್ಷೆ ಪಟ್ಟಾಗ ಅದನ್ನು ಈಡೇರಿಸುವುದು ಜನಪ್ರತಿನಿಧಿಗಳ ಕರ್ತವ್ಯವಾಗಿದೆ. ದೇವಸ್ಥಾನಗಳು ಹಾಗೂ ಕಲ್ಯಾಣ ಮಂದಿರಗಳಿಗೆ ನೀಡುವ ಮೂಲಭೂತ ಸೌಕರ್ಯಕ್ಕಿಂತ ಆರೋಗ್ಯದ ದೇಗುಲವಾದ ಆಸ್ಪತ್ರೆಯ ಸೌಕರ್ಯಗಳಿಗೆ ನಾವು ಹೆಚ್ಚು ಆದ್ಯತೆ ನೀಡಬೇಕಾಗಿದೆ ಎಂದರು.
ಜೆ.ಸಿ. ಆಸ್ಪತ್ರೆಯಲ್ಲಿನ ಡಯಾಲಿಸಿಸ್ ಘಟಕ ಯಶಸ್ವಿಯಾಗಿ ಕಾರ್ಯ ನಿರ್ವಹಿಸುತ್ತಿದ್ದು, ಬಹುದಿನಗಳ ಬೇಡಿಕೆಯಾದ ಡಯಾಲಿಸಿಸ್ ಘಟಕಕ್ಕೆ ಬೇಕಾದಂತಹ 30ಕೆ.ವಿ. ಡಿ.ಜಿ. ಜನರೇಟರನ್ನು ಶೀಘ್ರವೇ ನೀಡಲಾಗುವುದು ಎಂದು ಭರವಸೆ ನೀಡಿದರು.
ಈ ಸಮಾರಂಭದಲ್ಲಿ ಜಿಪಂ ಸದಸ್ಯೆ ಕಲ್ಪನಾ ಪದ್ಮನಾಭ್, ಕಾಂಗ್ರೆಸ್ ಮುಖಂಡರಾದ ಜ್ರುಲ್ಲಾ, ಆರೋಗ್ಯ ರಕ್ಷಾ ಸಮಿತಿಯ ಸದಸ್ಯರಾದ ಧರ್ಮನಾಯ್ಕಾ, ದೇವರಾಜ್, ಜೆಸ್ಸಿಬಾಯಿ, ಹರುಮನೆ ರಮಾನಂದ್, ಗೋಪಾಲ, ಟಿ.ಆರ್.ನಾರಾಯಣಮೂರ್ತಿ, ಡಾ. ಕೆ.ಆರ್.ಜಗದೀಶ್, ಜೆಸಿ ಆಸ್ಪತ್ರೆ ಮುಖ್ಯ ವೈದ್ಯಾಧಿಕಾರಿ ಡಾ. ಶಿವಪ್ರಕಾಶ್, ಡಾ. ಪ್ರಭಾಕರ್, ಡಾ. ನಿಶ್ಚಲ್, ಡಾ. ಎಸ್.ಕೆ. ಗುರುರಾಜ್, ಡಾ. ವಸುಧಾ ಜೈನ್ ಹಾಗೂ ಆಸ್ಪತ್ರೆಯ ಸಿಬ್ಬಂದಿ ಉಪಸ್ಥಿತರಿದ್ದರು.







