ಉದ್ಯೋಗಖಾತ್ರಿ ಯೋಜನೆಯಲ್ಲಿ ಕೆಲಸಗಾರರಿಗೆ ಸೌಲಭ್ಯ ಕಲ್ಪಿಸಿ: ವಿಧಾನಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ
.jpg)
ಸಾಗರ, ಮೇ 6: ತಾಲೂಕಿನಲ್ಲಿ ನರೇಗಾ ಯೋಜನೆಯಡಿ ಗ್ರಾಮೀಣ ಪ್ರದೇಶದ ಸಮಗ್ರ ಅಭಿವೃದ್ಧಿ ಸಾಧ್ಯವಿದ್ದು, ಕೆಲಸಗಾರರು ಸಹ ಉತ್ಸಾಹದಿಂದ ತೊಡಗಿಕೊಳ್ಳುತ್ತಿರುವುದು ಆಶಾದಾಯಕ ಬೆಳವಣಿಗೆಯಾಗಿದೆ. ಉದ್ಯೋಗಖಾತ್ರಿ ಯೋಜನೆಯಲ್ಲಿ ಕೆಲಸ ಮಾಡುವ ಕೆಲಸಗಾರರಿಗೆ ಕುಡಿಯುವ ನೀರು ಸೇರಿದಂತೆ ಎಲ್ಲ ಸೌಲಭ್ಯ ಸ್ಥಳದಲ್ಲಿ ಕಲ್ಪಿಸಬೇಕು. ಇಲ್ಲವಾದಲ್ಲಿ ಅಂತಹ ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ವಿಧಾನಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ ಎಚ್ಚರಿಕೆ ನೀಡಿದರು.
ತಾಲೂಕಿನ ಹಿರೇನೆಲ್ಲೂರಿನಲ್ಲಿ ಶುಕ್ರವಾರ ಉದ್ಯೋಗಖಾತ್ರಿ ಕಾಮಗಾರಿಯನ್ನು ಪರಿಶೀಲನೆ ನಡೆಸಿ ನಂತರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ತಾಲೂಕಿನ ಹಿರೇನೆಲ್ಲೂರು, ತ್ಯಾಗರ್ತಿ, ಕಾನ್ಲೆ, ಬರೂರು, ಮಾಸೂರು, ಸೈದೂರು, ಹೆಗ್ಗೋಡು, ಆನಂದಪುರಂ ಗ್ರಾಪಂ ವ್ಯಾಪ್ತಿಯಲ್ಲಿ ಪ್ರತಿದಿನ ಉದ್ಯೋಗಖಾತ್ರಿಗೆ 200 ರಿಂದ 300 ಕಾರ್ಮಿಕರು ಪಾಲ್ಗೊಳ್ಳುತ್ತಿರುವುದು ತನಗೆ ಹೆಚ್ಚಿನ ಸಂತೋಷ ತಂದಿದೆ ಎಂದರು. 16ನೆ ಸಾಲಿನಲ್ಲಿ ನರೇಗಾ ಯೋಜನೆಯಡಿ 14 ಕೋಟಿ ರೂ. ಇರಿಸಲಾಗಿತ್ತು. ಕೇವಲ 10 ಕೋಟಿ ರೂ. ಮಾತ್ರ ಖರ್ಚಾಗಿದೆ. 2016-17ನೆ ಸಾಲಿನಲ್ಲಿ 15 ಕೋಟಿ ರೂ. ಕಾರ್ಮಿಕ ಮುಂಗಡ ನಿಧಿ ಇರಿಸಲಾಗಿದ್ದು, ಹೆಚ್ಚುವರಿ ಖರ್ಚು ಮಾಡಲು ಅವಕಾಶವಿದೆ. ಪ್ರತಿ ಗ್ರಾಪಂಗೆ 5 ಕೋಟಿ ರೂ. ಅಥವಾ ಅದಕ್ಕಿಂತ ಹೆಚ್ಚು ಹಣ ಖರ್ಚು ಮಾಡಲು ಅವಕಾಶವಿದ್ದು, ಕಾರ್ಮಿಕರು ಇದರ ಉಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು. ಬಿಸಿಲಿನಿಂದ ಕೆರೆಗಳು ಪೂರ್ಣ ಬತ್ತಿ ಹೋಗಿರುವುದರಿಂದ ಹೂಳೆತ್ತುವ ಕಾಮಗಾರಿಯನ್ನು ಪ್ರಮುಖವಾಗಿ ತೆಗೆದುಕೊಳ್ಳಲಾಗಿದೆ. ಇದರ ಜೊತೆಗೆ ರೈತರ ಜಮೀನಿನಲ್ಲಿ ಕೃಷಿಬಾವಿ, ಬೋರ್‌ವೆಲ್‌ಗಳಿಗೆ ಮರಪೂರಣ ಘಟಕ, ದನದ ಕೊಟ್ಟಿಗೆ, ಸಾಮೂಹಿಕ ಒಕ್ಕಲು ಕಣ, ಗ್ರಾಮೀಣ ರಸ್ತೆ ನಿರ್ಮಾಣಕ್ಕೆ ಯೋಜನೆಯಡಿ ಅವಕಾಶವಿದೆ ಎಂದರು. ಶಾಸಕರ ತುರ್ತು ಕುಡಿಯುವ ನೀರು ಕಾರ್ಯಪಡೆ ಸಮಿತಿಗೆ ಸಮರ್ಪಕ ಕುಡಿಯುವ ನೀರು ಪೂರೈಕೆಗಾಗಿ 1.77 ಕೋಟಿ ರೂ. ಅನುದಾನ ನೀಡುವಂತೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಇದರ ಜೊತೆಗೆ ಬರಪರಿಹಾರ ಯೋಜನೆಯಡಿ ಗ್ರಾಮೀಣ ಪ್ರದೇಶದಲ್ಲಿ ತೆರೆದ ಬಾವಿ ಆಳ ಮಾಡಿ ರಿಂಗ್ ಅಳವಡಿಕೆ, ಕೆರೆ ಅಭಿವೃದ್ಧಿ ಇನ್ನಿತರ ಕಾಮಗಾರಿಗಾಗಿ 2.74 ಕೋಟಿ ರೂ. ಪ್ರಸ್ತಾವನೆಯನ್ನು ಜಿಲ್ಲಾಧಿಕಾರಿಗಳಿಗೆ ಕಳಿಸಲಾಗಿದೆ ಎಂದು ಹೇಳಿದರು.
ಕೆಲವು ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇದ್ದು, ಬೋರ್‌ವೆಲ್ ಕೊರೆಸಲು ಸೂಚನೆ ನೀಡಲಾಗಿದೆ. ತುರ್ತು ಅಗತ್ಯ ಇರುವಲ್ಲಿ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದೆ. ಕುಡಿಯುವ ನೀರಿನ ವಿಷಯ ಬಂದಾಗ ಕಾಯ್ದೆ ಕಾನೂನು ವಿನಾಯಿತಿ ನೀಡಿ, ನೀರು ಪೂರೈಕೆ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.





