ಯುವಭಾರತಕ್ಕೆ ಎದುರಾಗಲಿದೆ ವೃದ್ಧಾಪ್ಯ ಸಮಸ್ಯೆ
ಫಲವತ್ತತೆ ಕುಸಿತ, ಆಯುಷ್ಯ ಏರಿಕೆ ಕಾರಣ

ಭಾರತ ವಿಶ್ವದಲ್ಲೇ ಅತ್ಯಂತ ಹೆಚ್ಚಿರುವ ಯುವಪೀಳಿಗೆಯ ದೇಶ ಎಂದು ಬಣ್ಣಿಸಲಾಗುತ್ತಿದೆ. ಇದು ನಿಜ ಕೂಡಾ. ಆದರೆ ಇದರ ಜೊತೆಜೊತೆಗೆ ದೇಶಕ್ಕೆ ವೃದ್ಧಾಪ್ಯದ ಸಮಸ್ಯೆ ಕೂಡಾ ಬಾಧಿಸತೊಡಗಿದೆ. 2001ರಿಂದ 2011ರ ದಶಕದಲ್ಲಿ ದೇಶದಲ್ಲಿ ಹಿರಿಯ ನಾಗರಿಕರ ಸಂಖ್ಯೆ (60 ವರ್ಷಕ್ಕಿಂತ ಮೇಲ್ಪಟ್ಟವರು) 27 ದಶಲಕ್ಷದಷ್ಟು ಹೆಚ್ಚಿದೆ. ಸರಕಾರದ ಅಂಕಿ ಅಂಶಗಳ ಪ್ರಕಾರ ಇದು ಒಂದು ದಶಕದಲ್ಲಿ ಆಗಿರುವ ಬೃಹತ್ ಪ್ರಮಾಣದ ಏರಿಕೆಯಾಗಿದೆ. ಅಂದರೆ ಈ ಅವಧಿಯಲ್ಲಿ ಶೇಕಡ 35ರಷ್ಟು ಹಿರಿಯ ನಾಗರಿಕರು ಸೇರ್ಪಡೆಯಾಗಿದ್ದಾರೆ.
ಇದಕ್ಕೆ ಮುಖ್ಯ ಕಾರಣಗಳು ಎರಡು. ಒಂದು ಕುಸಿಯುತ್ತಿರುವ ಫಲವತ್ತತೆ ಹಾಗೂ ಜನರ ಆಯಸ್ಸು (ನಿರೀಕ್ಷಿತ ಜೀವಿತಾವಧಿ) ಹೆಚ್ಚುತ್ತಿರುವುದು ಇನ್ನೊಂದು. ದೇಶದಲ್ಲಿ 2001-2005ರ ಅವಧಿಯಲ್ಲಿ ಜನತೆಯ ಸರಾಸರಿ ನಿರೀಕ್ಷಿತ ಜೀವಿತಾವಧಿ 63.2 ವರ್ಷಗಳಿದ್ದರೆ 2009-2015ರ ಅವಧಿಯಲ್ಲಿ ಈ ಪ್ರಮಾಣ 67.5 ವರ್ಷಕ್ಕೆ ಹೆಚ್ಚಿದೆ. ಹಳ್ಳಿಗಳಲ್ಲಿ ಇದು 66.3 ವರ್ಷ ಇದ್ದರೆ, ನಗರಗಳಲ್ಲಿ 77.1 ವರ್ಷವಾಗಿದೆ.
1991ರಲ್ಲಿ ದೇಶದಲ್ಲಿ ವೃದ್ಧೆಯರಿಗಿಂತ ಹೆಚ್ಚಿನ ಸಂಖ್ಯೆಯ ವೃದ್ಧರಿದ್ದರು. 2011ರಲ್ಲಿ 52.8 ದಶಲಕ್ಷ ವೃದ್ಧೆಯರು ಹಾಗೂ 51.1 ದಶಲಕ್ಷ ವೃದ್ಧರಿದ್ದರು. ಕಳೆದ 20 ವರ್ಷಗಳಲ್ಲಿ ಮಹಿಳೆಯರ ಆರೋಗ್ಯ ಸೌಲಭ್ಯದಲ್ಲಿ ಆಗಿರುವ ಗಣನೀಯ ಸುಧಾರಣೆ ಇದಕ್ಕೆ ಮುಖ್ಯ ಕಾರಣ.
ಭಾರತದ ಒಟ್ಟು ಜನಸಂಖ್ಯೆಯಲ್ಲಿ ಹಿರಿಯ ನಾಗರಿಕರ ಪಾಲು ಶೇಕಡ 8.6ರಷ್ಟು. ವೃದ್ಧಾಪ್ಯದ ಅವಲಂಬನೆ ಅನುಪಾತ ಹೆಚ್ಚಿದಂತೆಲ್ಲ ದುಡಿಯುವ ವರ್ಗದ ಆರ್ಥಿಕ ಜವಾಬ್ದಾರಿಗಳು ಹೆಚ್ಚುತ್ತವೆ.
ಉದ್ಯೋಗ ಮಾಡಬಹುದಾದ ವಯೋಮಿತಿಯ ಮಂದಿಗೆ ವೃದ್ಧರ ಸಂಖ್ಯೆ ಹೋಲಿಸಿದರೆ, ವೃದ್ಧಾಪ್ಯ ಅವಲಂಬನೆ ಅನುಪಾತ ಹೆಚ್ಚುವ ಪ್ರವೃತ್ತಿ ಕಂಡುಬಂದಿದೆ. 1961ರಲ್ಲಿ ಶೇಕಡ 10.9ರಷ್ಟಿದ್ದ ಈ ಪ್ರಮಾಣ 2011ರಲ್ಲಿ ಶೇಕಡ 14.2ರಷ್ಟಾಗಿದೆ ಎಂದು ಅಂಕಿಸಂಖ್ಯೆಗಳು ಹಾಗೂ ಯೋಜನೆ ಅನುಷ್ಠಾನ ಸಚಿವಾಲಯ ಬಿಡುಗಡೆ ಮಾಡಿದ ವರದಿಯೊಂದು ಹೇಳಿದೆ.
ಹಿರಿಯರಿಗೆ ಅಗತ್ಯ ಬೆಂಬಲ
ಭಾರತದ ಜನಸಂಖ್ಯಾ ಪ್ರವೃತ್ತಿ ಬದಲಾಗುತ್ತಿದೆ. ಮುಂದಿನ ಹಲವು ವರ್ಷಗಳಲ್ಲಿ ಪ್ರತಿ ತಿಂಗಳು ಕೂಡ ಹತ್ತು ಲಕ್ಷ ಮಂದಿ 18ರ ವಯೋಮಿತಿ ಮೀರುತ್ತಾರೆ ಎಂದು ನ್ಯೂಯಾರ್ಕ್ ಟೈಮ್ಸ್ ಪತ್ರಕರ್ತ ಸೋಮಿನಿ ಸೇನ್‌ಗುಪ್ತಾ, ಗಾರ್ಡಿಯನ್‌ಗೆ ನೀಡಿರುವ ಸಂದರ್ಶನವೊಂದರಲ್ಲಿ ಹೇಳಿದ್ದಾರೆ. ಇದೇ ತಮ್ಮ ‘ದ ಎಂಡ್ ಆಫ್ ಕರ್ಮ’ ಕೃತಿಗೆ ಮೂಲಪ್ರೇರಣೆ ಎಂದು ಅವರು ಹೇಳುತ್ತಾರೆ.
ಭಾರತದಲ್ಲಿ 2020ರ ವೇಳೆಗೆ ಮಧ್ಯಮ ವಯಸ್ಸು 29 ಆಗಲಿದೆ. ಈ ವೇಳೆಗೆ ಚೀನಾದಲ್ಲಿ ಮಧ್ಯಮ ವಯಸ್ಸು 39, ಬ್ರೆಝಿಲ್‌ನಲ್ಲಿ 33 ಹಾಗೂ ಅಮೆರಿಕದಲ್ಲಿ 40 ಆಗಲಿದೆ. ವಿಶ್ವ ಹಿಂದೆಂದೂ ನೋಡದಷ್ಟು ಪ್ರಮಾಣದ ಅತ್ಯಂತ ಯುವ ಹಾಗೂ ದೊಡ್ಡ ಶ್ರಮಿಕ ವರ್ಗ ಭಾರತದಲ್ಲಿ ಸೃಷ್ಟಿಯಾಗಲಿದೆ ಎಂದು ವಿಶ್ವಬ್ಯಾಂಕ್ ದಾಖಲೆ ಬಣ್ಣಿಸುತ್ತದೆ. ಉದ್ಯೋಗ ಮಾಡಬಹುದಾದ ಜನಸಂಖ್ಯೆ (15ರಿಂದ 59ರ ವಯೋಮಾನ) ಎರಡು ವರ್ಗ ಕೆಲಸ ಮಾಡದ ಜನವರ್ಗವನ್ನು ಬೆಂಬಲಿಸಬೇಕಾಗುತ್ತದೆ. ಒಂದು, ಮಕ್ಕಳು ಅಂದರೆ 14 ವರ್ಷಕ್ಕಿಂತ ಕೆಳಗಿನವರು ಹಾಗೂ ಇನ್ನೊಂದು ಹಿರಿಯ ನಾಗರಿಕರು. ಅಂದರೆ 60 ವರ್ಷ ಮೇಲ್ಪಟ್ಟವರು. ಕೆಲ ಹಿರಿಯ ನಾಗರಿಕರಿಗೆ ಪಿಂಚಣಿ ಹಾಗೂ ಉಳಿತಾಯ ಇರಬಹುದು. ಆದರೆ ಮಕ್ಕಳು ಸಂಪೂರ್ಣವಾಗಿ ಶ್ರಮವರ್ಗವನ್ನು ಅವಲಂಬಿಸಬೇಕಾಗುತ್ತದೆ.
ಭಾರತದ ಜನಸಂಖ್ಯಾ ಪ್ರವೃತ್ತಿಯನ್ನು ಅವಲೋಕಿಸಿದರೆ, ಕಡಿಮೆ ಮಕ್ಕಳು ಹಾಗೂ ಹೆಚ್ಚಿನ ವೃದ್ಧರು ಕಂಡುಬರುತ್ತಾರೆ. ಅಂದರೆ ಸರಕಾರಗಳು ಪಿಂಚಣಿದಾರರು ಹಾಗೂ ನಿವೃತ್ತಿ ಭದ್ರತೆಯ ಯೋಜನೆಗಳ ಬಗ್ಗೆ ದೃಷ್ಟಿ ಹರಿಸಲು ಇದು ಸಕಾಲ. ಜತೆಗೆ ಶ್ರಮಿಕ ವರ್ಗಕ್ಕೆ ಕೂಡಾ ಇದನ್ನು ಕಡ್ಡಾಯ ಮಾಡುವುದು ಅನಿವಾರ್ಯ.
ಖಾಸಗಿ ಕ್ಷೇತ್ರದಲ್ಲಿ ಉದ್ಯೋಗದಲ್ಲಿದ್ದು ನಿವೃತ್ತಿಯಾದ ಶೇಕಡ 10ರಷ್ಟು ಮಂದಿಗೆ ಮಾತ್ರ ಪಿಂಚಣಿ ಹಾಗೂ ಆರೋಗ್ಯ ಸುರಕ್ಷೆ ಸೌಲಭ್ಯಗಳಿವೆ. ಸರಕಾರ ನಿವೃತ್ತಿ ಉಳಿತಾಯವನ್ನು ಕಡ್ಡಾಯ ಮಾಡುವ ಪ್ರಯತ್ನಗಳ ಬಗ್ಗೆ ಕೂಡಾ ಶ್ರಮಿಕ ವರ್ಗದಲ್ಲಿ ದೊಡ್ಡ ಪ್ರಮಾಣದ ಅಸಮಾಧಾನ ಇದೆ ಎನ್ನುವುದು ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದ ಸಿದ್ಧ ಉಡುಪು ಉದ್ಯಮದ ಕಾರ್ಮಿಕರ ಪ್ರತಿಭಟನೆಯಿಂದ ತಿಳಿದುಬರುತ್ತದೆ.
ರಾಜ್ಯಗಳ ಕಥೆ
ಭಾರತದ ಈಶಾನ್ಯ ರಾಜ್ಯಗಳಲ್ಲಿ ಹಿರಿಯ ನಾಗರಿಕರ ಪ್ರಮಾಣ ಅತ್ಯಂತ ಕಡಿಮೆ. ಅರುಣಾಚಲ ಪ್ರದೇಶದಲ್ಲಿ ದೇಶದಲ್ಲೇ ಕನಿಷ್ಠ ಎಂದರೆ ಶೇಕಡ 4.6ರಷ್ಟು ಮಂದಿ ಮಾತ್ರ ವೃದ್ಧರಿದ್ದಾರೆ.
ದಕ್ಷಿಣ ಭಾರತದ ರಾಜ್ಯಗಳಲ್ಲಿ ಹಿರಿಯ ನಾಗರಿಕರ ಪ್ರಮಾಣ ಅತ್ಯಧಿಕ. ಇದಕ್ಕೆ ಮುಖ್ಯ ಕಾರಣವೆಂದರೆ ಮಕ್ಕಳು ಕಡಿಮೆ ಪ್ರಮಾಣದಲ್ಲಿ ಇರುವುದು ಮತ್ತು ಫಲವತ್ತತೆ ಕುಸಿತ. ಕೇರಳದಲ್ಲಿ ಹಿರಿಯ ನಾಗರಿಕರ ಪ್ರಮಾಣ ಅತ್ಯಧಿಕವಾಗಿದ್ದು, ಶೇಕಡ 12.6ರಷ್ಟು ಮಂದಿ ಹಿರಿಯ ನಾಗರಿಕರಿದ್ದಾರೆ. ಗೋವಾದಲ್ಲಿ ಶೇಕಡ 11.2, ತಮಿಳುನಾಡಿನಲ್ಲಿ 10.4 ಶೇಕಡ ಹಿರಿಯರಿದ್ದಾರೆ. ಆಂಧ್ರಪ್ರದೇಶ ಅಗ್ರ 5ರ ಪಟ್ಟಿಯಲ್ಲಿಲ್ಲದಿದ್ದರೂ, ಶೇಕಡ 9.8ರಷ್ಟು ಮಂದಿ ವೃದ್ಧರು ಇಲ್ಲಿದ್ದಾರೆ.
ಭಾರತದ ಹಲವು ರಾಜ್ಯಗಳಲ್ಲಿ ಸ್ಕ್ಯಾಂಡಿನೇವಿಯಾ ದೇಶಗಳಿಗಿಂತಲೂ ವೇಗವಾಗಿ ಹಿರಿಯ ನಾಗರಿಕರ ಪ್ರಮಾಣ ಹೆಚ್ಚುತ್ತಿದೆ. ಈ ರಾಜ್ಯಗಳ ಫಲವತ್ತತೆ ಪ್ರಮಾಣ, ಮಕ್ಕಳನ್ನು ಹಡೆಯುವ ಸಾಮರ್ಥ್ಯವಿರುವ ವಯೋಮಿತಿಯ ಪ್ರತಿ ಮಹಿಳೆಯರಿಗೆ ಇರುವ ಮಕ್ಕಳ ಸಂಖ್ಯೆಯನ್ನು ವಿಶ್ಲೇಷಿಸಿದಾಗ ಇದು ಸ್ಪಷ್ಟವಾಗಿ ಕಂಡುಬರುತ್ತದೆ.
ಕೇರಳ, ತಮಿಳುನಾಡು, ಆಂಧ್ರಪ್ರದೇಶ, ಹಿಮಾಚಲಪ್ರದೇಶ, ಪಂಜಾಬ್, ಪಶ್ಚಿಮ ಬಂಗಾಳ, ದಿಲ್ಲಿ, ಕರ್ನಾಟಕ ಹಾಗೂ ಮಹಾರಾಷ್ಟ್ರ ಹೀಗೆ ಒಂಬತ್ತು ರಾಜ್ಯಗಳಲ್ಲಿ ಫಲವತ್ತತೆ ಪ್ರಮಾಣ, ಬದಲಾಯಿಸುವ ಪ್ರಮಾಣದ ಮಟ್ಟವಾದ 2.1ಕ್ಕಿಂತ ಕಡಿಮೆ ಇದೆ. ಕೇರಳ ಹಾಗೂ ತಮಿಳುನಾಡಿನಲ್ಲಿ ಇದು 1.7 ಆಗಿದ್ದು, ಇದು ನಾರ್ವೆ ಹಾಗೂ ನೆದರ್ಲೆಂಡ್ಸ್‌ನ ಫಲವತ್ತತೆ ಪ್ರಮಾಣಕ್ಕಿಂತಲೂ ಕಡಿಮೆ. ಈ ಎರಡು ದೇಶಗಳಲ್ಲಿ ಕ್ರಮವಾಗಿ 1.9 ಹಾಗೂ 1.8ರಷ್ಟು ಫಲವತ್ತತೆ ಇದೆ.
ಬದಲಾಯಿಸುವ ಪ್ರಮಾಣ ಎಂದರೆ, ಜನಸಂಖ್ಯೆ ಸ್ಥಿರವಾಗಿರಲು ಪ್ರತಿ ಮಹಿಳೆಯರಿಗೆ ಇರಬೇಕಾದ ಮಕ್ಕಳ ಸಂಖ್ಯೆ. ಒಬ್ಬ ಮಹಿಳೆಗೆ 2.1 ಸರಾಸರಿ ಮಕ್ಕಳಿದ್ದರೆ ಜನಸಂಖ್ಯೆ ಹೆಚ್ಚಳವಾಗುವುದೂ ಇಲ್ಲ; ಇಳಿಕೆಯಾಗುವುದೂ ಇಲ್ಲ.
ಆದರೆ ಕಡಿಮೆ ಫಲವತ್ತತೆ ಪ್ರಮಾಣ ಇರುವ ರಾಜ್ಯಗಳಲ್ಲಿ ಬದಲಾಗುವ ಪ್ರಮಾಣ ಕೂಡಾ ಕಡಿಮೆ ಇರುವುದರಿಂದ ವೃದ್ಧರ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತದೆ. ಏಕೆಂದರೆ ಹೊಸದಾಗಿ ಹುಟ್ಟುವ ಮಕ್ಕಳ ಸಂಖ್ಯೆ ಕಡಿಮೆ. ಭಾರತದಲ್ಲಿ ಉದ್ಯೋಗ ಮಾಡಬಹುದಾದ ವಯೋಮಿತಿಯ ಜನಸಂಖ್ಯೆ ಅಧಿಕ ಪ್ರಮಾಣದಲ್ಲಿ ಇರುವವರೆಗೂ ಹಿರಿಯ ನಾಗರಿಕರಿಗೆ ಒಂದಷ್ಟು ಬೆಂಬಲ ಸಿಗುತ್ತದೆ. ಆದರೆ ಹಲವು ರಾಜ್ಯಗಳಲ್ಲಿ ಈ ಪರಿಸ್ಥಿತಿ ಇಲ್ಲ.
ವೃದ್ಧೆಯರ ಹೋರಾಟ
1991ರ ದಶಕದವರೆಗೂ, ದೇಶದಲ್ಲಿ ವೃದ್ಧೆಯರಿಗಿಂತ ಹೆಚ್ಚಿನ ಪ್ರಮಾಣದಲ್ಲಿ ವೃದ್ಧರು ಇದ್ದರು ಎನ್ನುವುದು ಅಂಕಿಸಂಖ್ಯೆಗಳು ಮತ್ತು ಯೋಜನೆ ಅನುಷ್ಠಾನ ಸಚಿವಾಲಯದ ವರದಿಯಿಂದ ತಿಳಿದುಬರುತ್ತದೆ. ಈ ವೇಳೆಗೆ ದೇಶದಲ್ಲಿ 104 ದಶಲಕ್ಷ ಮಂದಿ ಹಿರಿಯ ನಾಗರಿಕರಿದ್ದು, ಈ ಪೈಕಿ 53 ದಶಲಕ್ಷ ಮಹಿಳೆಯರು ಹಾಗೂ 51 ದಶಲಕ್ಷ ಪುರುಷರು ಇದ್ದಾರೆ.
‘ಆದರೆ ಕಳೆದ ಎರಡು ದಶಕಗಳಲ್ಲಿ, ಈ ಪ್ರವೃತ್ತಿ ಅದಲು ಬದಲಾಗಿದೆ. ಹಿರಿಯ ಮಹಿಳೆಯರ ಸಂಖ್ಯೆ, ವೃದ್ಧರ ಸಂಖ್ಯೆಗಿಂತ ಹೆಚ್ಚಿದೆ ಎಂದು ವರದಿ ಹೇಳಿದೆ.
ವೃದ್ಧೆಯರು ಪ್ರಮುಖವಾಗಿ ವೃದ್ಧರಿಗಿಂತ ಹೆಚ್ಚಿನ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಏಕೆಂದರೆ ಅವರಿಗೆ ಹಣಕಾಸು ಬೆಂಬಲದ ಹಿನ್ನೆಲೆ ದುರ್ಬಲವಾಗಿರುತ್ತದೆ. ದೇಶದಲ್ಲಿ ಶೇಕಡ 25ಕ್ಕಿಂತ ಹೆಚ್ಚು ಮಹಿಳೆಯರು ಉದ್ಯೋಗದಲ್ಲಿಲ್ಲ. ಅಂದರೆ ವೃದ್ಧಾಪ್ಯದಲ್ಲಿ ಮಹಿಳೆಯರು ಹೆಚ್ಚು ಸಂಕಷ್ಟ ಎದುರಿಸಬೇಕಾಗುತ್ತದೆ.
ಕೆಲ ಹಿರಿಯ ನಾಗರಿಕರು ಕೂಡಾ ಶ್ರಮಿಕ ವರ್ಗದಲ್ಲಿ ಸೇರುತ್ತಾರೆ. ಗ್ರಾಮೀಣ ಪ್ರದೇಶಗಳಲ್ಲಿ ಶೇಕಡ 66ರಷ್ಟು ವೃದ್ಧರು ಹಾಗೂ ಶೇಕಡ 28ರಷ್ಟು ವೃದ್ಧೆಯರು ತಮ್ಮ ವೃದ್ಧಾಪ್ಯದಲ್ಲೂ ಕೆಲಸ ಮಾಡುತ್ತಿದ್ದಾರೆ. ಅಂದರೆ ಮಹಿಳೆಯರು ವೃದ್ಧಾಪ್ಯದಲ್ಲಿ ಹೆಚ್ಚು ಕಷ್ಟಪಡಬೇಕಾಗುತ್ತದೆ ಎನ್ನುವುದು ಇದರಿಂದ ಸ್ಪಷ್ಟವಾಗುತ್ತದೆ.
‘ಆದರೆ ನಗರ ಪ್ರದೇಶಗಳಲ್ಲಿ ಶೇಕಡ 46ರಷ್ಟು ಮಂದಿ ವೃದ್ಧರು ಹಾಗೂ ಶೇಕಡ 11ರಷ್ಟು ಮಂದಿ ವೃದ್ಧೆಯರು ಮಾತ್ರ ಆರ್ಥಿಕವಾಗಿ ಸಕ್ರಿಯರಾಗಿದ್ದಾರೆ’ ಎಂದು ವರದಿ ವಿವರಿಸಿದೆ.







