ಮಳೆ ನೀರಿನ ಸಂಗ್ರಹಕ್ಕೆ ಸಿದ್ಧರಾಗೋಣ

ಮಾನ್ಯರೆ,
ಹಿಂದೆ ಕೆರೆ, ಬಾವಿಗಳಲ್ಲಿ ವರ್ಷದುದ್ದಕ್ಕೂ ಬೇಕಾದಷ್ಟು ಇದ್ದ ನೀರು ಈಗ ಡಿಸೆಂಬರ್ ಆಗುತ್ತಿದ್ದಂತೆ ಖಾಲಿಯಾಗುತ್ತಿದ್ದು, ಅಂದು ಇದ್ದ ನೀರು ಇಂದು ಎಲ್ಲಿಗೆ ಹೋಗಿದೆ ಎನ್ನುವ ಪ್ರಶ್ನೆ ಈಗ ಎಲ್ಲರನ್ನು ಕಾಡುತ್ತಿದೆ.
ಹಿಂದೆ ಬಾವಿಯಿಂದ ನೀರನ್ನು ಹಗ್ಗದ ಮೂಲಕ ಕೊಡದಿಂದ ಮೇಲಕ್ಕೆತ್ತಿ ನೀರನ್ನು ಮಿತವಾಗಿ ಬಳಸುತ್ತಿದ್ದರು, ಆದರೆ ಇಂದು ಸ್ವಿಚ್ಚ್ ಹಾಕಿದರೆ ಬೇಕಾದಷ್ಟು ನೀರು ಕ್ಷಣ ಮಾತ್ರದಲ್ಲಿ ಟ್ಯಾಂಕ್‌ಗಳಲ್ಲಿ ತುಂಬಿ ತುಳುಕಿ ವ್ಯರ್ಥವಾಗಿ ಹೋಗುತ್ತದೆ.
ನೀರನ್ನು ಮಿತವಾಗಿ ಬಳಸಬೇಕು ಎಂಬುದು ಈಗ ಎಲ್ಲೆಡೆ ಕೇಳಿ ಬರುವ ಮಾತು. ಆದರೆ ರಾಜ್ಯದ ಜನತೆ ಈ ಬಗ್ಗೆ ಹೆಚ್ಚಿನ ಜಾಗೃತಿ ತಳೆದಂತಿಲ್ಲ. ಹಿಂದೆ ಕರಾವಳಿ ಪ್ರದೇಶಗಳ ಹೊಳೆಗಳಲ್ಲಿರುವ ಹೂಳನ್ನು ತೆಗೆಯುವುದರಿಂದ ಭೂಮಿಗೆ ಹೆಚ್ಚಿನ ಪ್ರಮಾಣದಲ್ಲಿ ನೀರನ್ನು ಹೀರಲು ಅವಕಾಶವಾಗುತ್ತಿತ್ತು. ಆದರೆ ಇಂದು ಹೊಳೆಯಲ್ಲಿ ಹರಿದು ಹೋಗಬೇಕಾದ ನೀರು, ಮಳೆ ಬಂದಾಗ ಒಮ್ಮೆಲೆ ನೆರೆಯಾಗುತ್ತದೆ.
ಇಂದು ಸರಕಾರ ಕೆರೆಯನ್ನು ಹೆಚ್ಚಿನ ಪ್ರಮಾಣದಲ್ಲಿ ನಿರ್ಮಾಣ ಮಾಡಿ ನೀರಿನ ಸಂಗ್ರಹಕ್ಕೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಬೇಕಾಗಿದೆ. ಭೂಮಿಯೊಳಗೆ ಎಷ್ಟು ಆಳವಾಗಿ ಕೊರೆದರೂ ಕ್ಷಣ ಮಾತ್ರದಲ್ಲಿ ನೀರನ್ನು ಮೇಲಕ್ಕೆತ್ತಬಹುದೇ ಹೊರತು ನೀರಿನ ಸಂಗ್ರಹಕ್ಕೆ ಬೋರ್‌ವೆಲ್‌ನಿಂದ ಸಾದ್ಯವಿಲ್ಲ. ನೀರನ್ನು ಮಿತವಾಗಿ ಬಳಸಿ ನೀರನ್ನು ಉಳಿಸಬೇಕಾಗಿದೆ.
ಆಳವಾಗಿ ಭೂಮಿಯನ್ನು ಕೊರೆದು ಬಾವಿ, ಕೆರೆಯಲ್ಲಿ ನೀರನ್ನು ಬರಿದು ಮಾಡಿ ಮಳೆಗಾಲ ಮುಗಿದ ನಂತರ ನೀರಿಗೆ ಹಾಹಾಕಾರ ಪಡುವ ಬದಲು ಮಳೆಗಾಲ ಆರಂಭವಾಗುತ್ತಿದ್ದಂತೆ ನೀರಿನ ಸಂಗ್ರಹಕ್ಕೆ ಬೇಕಾದ ಯೋಜನೆಗಳನ್ನು ಈಗಾಗಲೆ ಸಿದ್ಧತೆಯನ್ನು ಮಾಡಿದರೆ ಮುಂದಿನ ದಿನಗಳಲ್ಲಿ ಸ್ವಲ್ಪಪ್ರಮಾಣದಲ್ಲಿ ನೀರಿನ ಸಂಗ್ರಹವಾಗಬಹುದಲ್ಲವೇ?. ಇದಕ್ಕೆ ಎಲ್ಲರೂ ಕೈಜೋಡಿಸಬೇಕಾಗಿದೆ. ಇಲ್ಲದಿದ್ದರೆ ಮೇಲಿನಿಂದ ಸೂರ್ಯನ ಬಿಸಿ.. ಕೆಳಗಿನಿಂದ ಒಣ ಭೂಮಿಯ ಬಿಸಿ ಖಚಿತ..





