ಈ ದುಃಸ್ಥಿತಿಗೆ ಕಾರಣರಾರು?
ಮಾನ್ಯರೆ,
ಭಾರತದಾದ್ಯಂತ ಬರಗಾಲ. ಕರ್ನಾಟಕದ ಕೆಲವೇ ಜಿಲ್ಲೆಗಳನ್ನು ಬಿಟ್ಟು ಹೆಚ್ಚಿನೆಡೆ ಬರ ಆವರಿಸಿದೆ.
ಜಗತ್ತಿರುವುದೇ ನೀರು, ಅಗ್ನಿ, ವಾಯು. ಆಕಾಶ ಮತ್ತು ಪೃಥ್ವಿ ತತ್ವಗಳಿಂದ. ನಾವಿರುವ ಭೂಮಿಯಲ್ಲಿ ನೀರಿನ ಅಂಶ ಹೆಚ್ಚಾಗಿರುವುದರಿಂದಲೇ ನಾವೆಲ್ಲ ಬದುಕಿದ್ದೇವೆ. ಭೂಮಿಯ ಮೇಲ್ಮೈ ಪ್ರಾರಂಭವಾದ ಮೇಲೆ ಇದ್ದ ನೀರೆಲ್ಲಾ ಹೋಗಿ ತಗ್ಗಿನಲ್ಲಿ ನಿಂತುಬಿಟ್ಟಿತು. ಅದೇ ಸಮುದ್ರ. ನೀರು ಎಲ್ಲ್ಲ ಒಂದೇ ಕಡೆ ನಿಂತಾಗ ಲವಣಾಂಶಗಳು ಹೆಚ್ಚಾಗಿ ಉಪಯೋಗಕ್ಕೆ ಬರದೇ ಹೋಗಿದ್ದು ಆಶ್ಚರ್ಯವೇನಲ್ಲ. ಆದರೆ ಪ್ರಕೃತಿಯ ಅಚ್ಚರಿಯ ಕ್ರಿಯೆ ನೋಡಿ. ಅಷ್ಟೊತ್ತಿಗಾಗಲೇ ದ್ರವ್ಯರಾಶಿಯಾಗಿದ್ದ ಭೂಮಿ ಉರುಟಾಗಿ ಗ್ರಹವಾಗಿಬಿಟ್ಟಿತು. ಈ ಉರುಟಾದ ಭೂಮಿಗೆ ಗುರುತ್ವಾಕರ್ಷಣೆ ಶಕ್ತಿಯಿಂದ ಮಾರುತಗಳು ಸುತ್ತುಹೊಡೆಯಲು ಆರಂಭಿಸಿದವು. ಎಷ್ಟೋ ಡಿಗ್ರಿಯಲ್ಲಿ ಭೂಮಿ ಓರೆಯಾಗಿರುವುದರಿಂದ ಉತ್ತರದ್ರುವ ಮತ್ತು ದಕ್ಷಿಣದ್ರುವ ಮಧ್ಯೆ ಸಮಭಾಜಕ ವೃತ್ತ, ಅಕ್ಷಾಂಶ, ರೇಖಾಂಶಗಳ ಡಿಗ್ರಿಗಳಲ್ಲಿ ಸೂರ್ಯನ ಕಿರಣಗಳು ನೇರ ಮತ್ತು ದೂರವಾಗಿ ಬೀಳುವುದರಿಂದ ಚಳಿಗಾಲ, ಮಳೆಗಾಲ, ಬೇಸಿಗೆ ಕಾಲಗಳು ಪ್ರಾರಂಭವಾದವು. ಸೂರ್ಯನ ದೂರ ಕಿರಣಗಳು ಬೀಳುವ ಜಾಗ ಉತ್ತರ ಧ್ರುವದಲ್ಲಿ ಆರು ತಿಂಗಳು ಹಗಲು, ಆರು ತಿಂಗಳು ರಾತ್ರಿ, ಶೀತವಲಯ, ಸಮಶೀತೋಷ್ಣ ವಲಯಗಳು, ಉಷ್ಣ ವಲಯಗಳು, ಇದಕ್ಕೆ ಹೊಂದಿಕೊಂಡಿರತಕ್ಕಂತ ಭೂಭಾಗಗಳ ಪ್ರಾದೇಶಿಕತೆ, ಇದಕ್ಕೆ ತಕ್ಕನಾದ ಜನರ ಜೀವನ, ಈ ಎಲ್ಲ್ಲರ ಜೀವನಗಳಿಗೂ ಎಲ್ಲ್ಲ ಜೀವಜಂತು ಜೀವನಗಳಿಗೂ ಒಂದು ನಿರ್ದಿಷ್ಟವಾಗಿ ಭೂಮಿಯಲ್ಲಿ ತಾಪಮಾನ ಅಂದರೆ ಪರಿಸರ, ಋತುಮಾನಗಳು. ಇವಿದ್ದರೆ ಮಾತ್ರ ನಾವು ಭೂಮಿಯಲ್ಲಿ ಬದುಕಲಿಕ್ಕಾಗುತ್ತದೆ.
ಆದರೆ ನಾವು ಈ ಪ್ರಕೃತಿಯ ರೀತಿಯನ್ನು ಬದಲಾವಣೆ ಮಾಡಲು ಹೊರಟಿದ್ದೇವೆ. ಕೈಗಾರಿಕೀಕರಣದಿಂದ ಮಾನವನಿಗೆ ಜೀವನದಲ್ಲಿ ಒಂದಿಷ್ಟು ಸುಖ ಬಂದುಬಿಟ್ಟಿದೆ. ಅದು ಅತಿ ಸುಖವಾದ ಪರಿಣಾಮವೇ ಈಗ ನದಿಗಳೆಲ್ಲಾ ಬತ್ತಿ ಹೋಗಿರುವುದು. ಪ್ರಕೃತಿ ನಮ್ಮ ಆಳಲ್ಲ, ಅದರ ರೂಪರೇಖೆಗಳನ್ನು ನಾವಂತೂ ಮಾಡಿದ್ದು ಅಲ್ಲವೇ ಅಲ್ಲ. ಜಗತ್ತಿನ ಮೂಲವನ್ನು ಇನ್ನೂ ಭೌತವಿಜ್ಞಾನ ಕಂಡುಕೊಂಡಿಲ್ಲ.ಆದ್ದರಿಂದ ಜಗತ್ತಿನ ಜನತೆ ಇನ್ನಾದರೂ ಭೂಮಿಯ ಸಂಕಷ್ಟಕ್ಕೆ ಸ್ಪಂದಿಸಬೇಕಾಗಿದೆ.





