ಸೈನಿಕರಿಂದಲೇ 14.5 ಕೋಟಿ ರೂ. ವೌಲ್ಯದ ಚಿನ್ನ ದರೋಡೆ ಮಾಡಿಸಿದ ರೈಫಲ್ಸ್ ಕಮಾಂಡೆಂಟ್ ಅಮಾನತು, ಬಂಧನ
ಐಜ್ವ್ವಾಲ್, ಮೇ.6: ಮ್ಯಾನ್ಮಾರ್‌ನಿಂದ ಕಳ್ಳಸಾಗಣೆ ಮಾಡುತ್ತಿದ್ದ 14,5 ಕೋಟಿ ರೂಪಾಯಿ ವೌಲ್ಯದ ಚಿನ್ನವನ್ನು ಸಿಬ್ಬಂದಿಯಿಂದ ಹೆದ್ದಾರಿಯಲ್ಲಿ ಡಕಾಯಿತಿ ಮಾಡಿಸಿದ ಆರೋಪದಲ್ಲಿ ಅಸ್ಸಾಂ ರೈಫಲ್ಸ್ ಕಮಾಂಡೆಂಟ್ ಒಬ್ಬರನ್ನು ಅಮಾನತು ಮಾಡಿ ಬಂಧಿಸಲಾಗಿದೆ.
ಐಜ್ವಾಲ್ ಮೂಲದ 39ನೇ ಬೆಟಾಲಿಯನ್‌ನ ಕಮಾಂಡೆಂಟ್ ಕರ್ನಲ್ ಜೆಸ್‌ಜೀತ್ ಸಿಂಗ್ ಬಂಧನಕ್ಕೊಳಗಾದ ಅಧಿಕಾರಿ. ಅಸ್ಸಾಂ ರೈಪಲ್ಸ್‌ನ ಸೆಕ್ಟರ್ 23ರ ಕಮಾಂಡರ್ ಬ್ರಿಗೇಡಿಯರ್ ಟಿ.ಸಿ.ಮಲ್ಹೋತ್ರಾ ಅವರು ಸಿಂಗ್ ಮೇಲೆ ಅನುಮಾನಪಟ್ಟು ವಿಚಾರಣೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.
ಕಳೆದ ವರ್ಷದ ಡಿಸೆಂಬರ್ 14ರಂದು ರಾತ್ರಿ ಐಜ್ವಾಲ್ ಪಟ್ಟಣದ ದಕ್ಷಿಣ ಬಾಗದ ಹೊರವಲಯದಲ್ಲಿ ಕಳ್ಳಸಾಗಣೆ ಮಾಡುತ್ತಿದ್ದ ಚಿನ್ನದ ಬಿಸ್ಕತ್‌ಗಳನ್ನು ಹೆದ್ದಾರಿಯಲ್ಲೇ ದರೋಡೆ ಮಾಡುವಂತೆ ಸಿಂಗ್ ಅವರು, ತಮ್ಮ ಅಧೀನದಲ್ಲಿದ್ದ ಶಸ್ತ್ರಸಜ್ಜಿತ ಸಿಬ್ಬಂದಿಗೆ ಸೂಚಿಸಿದ್ದರು ಎಂದು ಪೊಲೀಸರು ಹೇಳಿದ್ದಾರೆ.
ಈ ವಾಹನದ ಚಾಲಕ ಲಾಲ್‌ನನ್‌ಪೇಲಾ ಐಜ್ವಾಲ್ ಠಾಣೆಯಲ್ಲಿ ಏಪ್ರಿಲ್ 21ರಂದು ಪ್ರಕರಣ ದಾಖಲಿಸಿದಾಗ ಇದು ಮೊದಲ ಬಾರಿಗೆ ಬೆಳಕಿಗೆ ಬಂದಿತ್ತು. ಅಸ್ಸಾಂ ರೈಫಲ್ಸ್‌ನ 39ನೇ ಬೆಟಾಲಿಯನ್‌ನ ಶಸ್ತ್ರಧಾರಿ ಸಿಬ್ಬಂದಿ ಹೆದ್ದಾರಿಯಲ್ಲಿ ತನ್ನ ವಾಹನವನ್ನು ತಡೆದು 14.5 ಕೋಟಿ ವೌಲ್ಯದ 52 ಚಿನ್ನದ ಬಿಸ್ಕತ್‌ಗಳನ್ನು ದರೋಡೆ ಮಾಡಿದರು ಎಂದು ಚಾಲಕ ದೂರು ನೀಡಿದ್ದ. ದರೋಡೆ ಮಾಡಿದ ಚಿನ್ನ ಏನಾಗಿದೆ ಎನ್ನುವುದು ಇನ್ನೂ ಬೆಳಕಿಗೆ ಬರಬೇಕಿದೆ.
ತನ್ನನ್ನು ಬಂದೂಕಿನಿಂದ ಬೆದರಿಸಿ, ಬಾಯಿ ಮುಚ್ಚಿಸಿದ್ದರು. ಆದರೆ ಆತನ ಸ್ನೇಹಿತರು ವಿಷಯ ತಿಳಿದು ಸಂಪೂರ್ಣವಾಗಿ ಮನವೊಲಿಸಿದ ಬಳಿಕ ದೂರು ನೀಡಲು ನಿರ್ಧರಿಸಿದ್ದಾಗಿ ಹೇಳಿದ್ದಾನೆ. ಈ ಘಟನೆಯಲ್ಲಿ ಶಾಮೀಲಾಗಿದ್ದಾರೆ ಎನ್ನಲಾದ ಎಂಟು ಮಂದಿ ಅಸ್ಸಾಂ ರೈಪಲ್ ಸಿಬ್ಬಂದಿ ಇದೀಗ ಪೊಲೀಸ್ ಕಸ್ಟಡಿಯಲ್ಲಿದ್ದು, ಅವರನ್ನು ವಿಚಾರಣೆಗೆ ಗುರಿಪಡಿಸಿದಾಗ, ಕಮಾಂಡೆಂಟ್ ಅವರ ಆದೇಶದಂತೆ ಈ ಕೃತ್ಯ ಎಸಗಿದ್ದಾಗಿ ಬಹಿರಂಗಪಡಿಸಿದರು. ಸಿಂಗ್ ತಮ್ಮ ವಕೀಲರ ಮೂಲಕ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಐಜ್ವಾಲ್ ಜಿಲ್ಲಾ ಸೆಷನ್ಸ್ ನ್ಯಾಯಾಲಯ ತಿರಸ್ಕರಿಸಿದ್ದು, ಸಿಂಗ್ ಅವರನ್ನು ಕೋರ್ಟ್ ಆವರಣದಲ್ಲೇ ಬಂಧಿಸಲಾಯಿತು.







