ಒಲಿಂಪಿಕ್ಸ್‌ಗೆ ಭಾರತ ಉತ್ತಮ ತಯಾರಿ: ಸುನೀಲ್

ಬೆಂಗಳೂರು, ಮೇ 6: ‘‘ಭಾರತ ಹಾಕಿ ತಂಡ ನಾಲ್ಕು ವರ್ಷಗಳ ಹಿಂದೆ ಲಂಡನ್‌ನಲ್ಲಿ ನಡೆದಿದ್ದ ಒಲಿಂಪಿಕ್ಸ್‌ಗಿಂತ ಉತ್ತಮವಾಗಿ ಈ ವರ್ಷ ನಡೆಯಲಿರುವ ಒಲಿಂಪಿಕ್ಸ್‌ಗೆ ತಯಾರಿ ನಡೆಸಿದೆ’’ಎಂದು ಪುರುಷರ ಹಾಕಿ ತಂಡದ ಸ್ಟಾರ್ ಸ್ಟ್ರೈಕರ್ ಎಸ್‌ವಿ ಸುನೀಲ್ ಅಭಿಪ್ರಾಯಪಟ್ಟಿದ್ದಾರೆ.
ರಿಯೋ ಒಲಿಂಪಿಕ್ಸ್‌ನಲ್ಲಿ ‘ಬಿ’ ಗುಂಪಿನಲ್ಲಿರುವ ಭಾರತ ತಂಡ ಹಾಲಿ ಚಾಂಪಿಯನ್ ಜರ್ಮನಿ, ಯುರೋಪ್ ಚಾಂಪಿಯನ್ ಹಾಲೆಂಡ್, ಪಾನ್-ಅಮೆರಿಕ ಗೇಮ್ಸ್ ಚಾಂಪಿಯನ್ ಅರ್ಜೆಂಟೀನ, ಐರ್ಲೆಂಡ್ ಹಾಗೂ ಕೆನಡಾ ತಂಡಗಳೊಂದಿಗೆ ಸ್ಥಾನ ಪಡೆದಿದೆ.
‘‘ಜರ್ಮನಿ ವಿಶ್ವದ ಶ್ರೇಷ್ಠ ತಂಡವಾಗಿದೆ. ಚಾಂಪಿಯನ್ಸ್ ಟ್ರೋಫಿ ಹಾಗೂ ಒಲಿಂಪಿಕ್ಸ್‌ನಲ್ಲಿ ಆ ತಂಡದ ವಿರುದ್ಧ ಚೆನ್ನಾಗಿ ಆಡುವುದು ನನ್ನ ಮೊದಲ ಆದ್ಯತೆ. ಒಲಿಂಪಿಕ್ಸ್‌ಗೆ ಮೊದಲು ಚಾಂಪಿಯನ್ಸ್ ಟ್ರೋಫಿಯಲ್ಲಿ ಜರ್ಮನಿ ವಿರುದ್ಧ ಆಡುವುದರಿಂದ ನಮಗೆ ಲಾಭವಿದೆ. ಈ ಹಿಂದಿನ ಮುಖಾಮುಖಿಯಲ್ಲಿ ಆ ತಂಡದ ಶಕ್ತಿ ಹಾಗೂ ದೌರ್ಬಲ್ಯವನ್ನು ಅರಿತ್ತಿದ್ದೇವೆ’’ ಎಂದು ಸುನೀಲ್ ಹೇಳಿದರು.
‘‘2012ರ ಒಲಿಂಪಿಕ್ಸ್‌ನಲ್ಲಿ ನಾವು ಫಿಟ್‌ನೆಸ್ ಬಗ್ಗೆಯೇ ಹೆಚ್ಚು ಗಮನ ನೀಡಿದ್ದೆವು. ಈ ಬಾರಿ ಎಲ್ಲವೂ ಭಿನ್ನ. ನಾವು ಒಟ್ಟಾರೆ ಇಡೀ ತಂಡದ ಪ್ರಗತಿಯ ಬಗ್ಗೆ ಗಮನ ನೀಡಿದ್ದೇವೆ. ಶಿಸ್ತು ಹಾಗೂ ಟೀಮ್ ಸ್ಪಿರಿಟ್ ಹೆಚ್ಚಿಸಲು ತರಬೇತಿ ನಡೆಸಿದ್ದೇವೆ’’ಎಂದು ಸುನೀಲ್ ತಿಳಿಸಿದರು.







