ಅಫ್ರಿದಿ ನಿವೃತ್ತಿಯಾಗುವುದೇ ಉತ್ತಮ: ಅಬ್ದುಲ್ ಖಾದಿರ್ ಸಲಹೆ

ಕರಾಚಿ, ಮೇ 6: ಪಾಕಿಸ್ತಾನದ ಹಿರಿಯ ಆಲ್‌ರೌಂಡರ್ ಶಾಹಿದ್ ಅಫ್ರಿದಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸುವುದು ಉತ್ತಮ ಎಂದು ಸಲಹೆ ನೀಡಿರುವ ಪಾಕಿಸ್ತಾನದ ಮಾಜಿ ಲೆಗ್ ಸ್ಪಿನ್ನರ್ ಅಬ್ದುಲ್ ಖಾದಿರ್, ಉಮರ್ ಅಕ್ಮಲ್ ತನ್ನದೇ ತಪ್ಪಿನಿಂದಾಗಿ ಪಾಕ್ ತಂಡದಲ್ಲಿ ಸ್ಥಾನ ಕಳೆದುಕೊಂಡಿದ್ದಾರೆ ಎಂದು ಹೇಳಿದ್ದಾರೆ.
ಅಫ್ರಿದಿಗೆ ವಯಸ್ಸಾಗಿದೆ. ಅವರು ಇನ್ನಷ್ಟು ದಿನ ಕ್ರಿಕೆಟ್‌ನಲ್ಲಿ ಮುಂದುವರಿಯುವುದು ಸರಿಯಲ್ಲ. ಅವರು ಈ ಕೂಡಲೇ ನಿವೃತ್ತಿಯಾಗಬೇಕು ಎಂದು ಲಾಹೋರ್‌ನಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಖಾದಿರ್ ತಿಳಿಸಿದರು.
ಇಂಗ್ಲೆಂಡ್ ಪ್ರವಾಸಕ್ಕೆ ಪಾಕ್ ಪ್ರಕಟಿಸಿದ್ದ ಸಂಭಾವ್ಯ ತಂಡದಿಂದ ಆರಂಭಿಕ ದಾಂಡಿಗ ಅಹ್ಮದ್ ಶಹಝಾದ್ ಹಾಗೂ ತಮ್ಮ ಅಳಿಯ ಉಮರ್ ಅಕ್ಮಲ್‌ರನ್ನು ಕೈಬಿಟ್ಟ ಕುರಿತು ಪ್ರತಿಕ್ರಿಯಿಸಿದ ಖಾದಿರ್, ನನ್ನ ಪ್ರಕಾರ ಶಹಝಾದ್ ಓರ್ವ ನಟನೇ ಹೊರತು ಕ್ರಿಕೆಟಿಗನಲ್ಲ. ಉಮರ್ ಅಕ್ಮಲ್ ತನ್ನದೇ ತಪ್ಪಿನಿಂದ ತಂಡದಲ್ಲಿ ಸ್ಥಾನ ಕಳೆದುಕೊಂಡಿದ್ದಾರೆ ಎಂದರು.
ಉಮರ್ ಅಕ್ಮಲ್ ಖಾದಿರ್ ಪುತ್ರಿಯನ್ನು ವಿವಾಹವಾಗಿದ್ದಾರೆ. ಇತ್ತೀಚೆಗಿನ ದಿನಗಳಲ್ಲಿ ವಿವಾದಗಳ ಕೇಂದ್ರ ಬಿಂದುವಾಗುತ್ತಿರುವ ಅಕ್ಮಲ್ ಅವರಿಗೆ ಕ್ರಿಕೆಟ್ ಕುರಿತ ಬದ್ಧತೆ ಬಗ್ಗೆ ಪ್ರಶ್ನೆ ಉದ್ಭವಿಸಿದೆ.







