ಉತ್ತರಾಖಂಡ: ಮೇ 10ರಂದು ಬಲಪರೀಕ್ಷೆಗೆ ಸುಪ್ರೀಂ ಸೂಚನೆ

9 ಮಂದಿ ಶಾಸಕರಿಗೆ ಮತದಾನಕ್ಕೆ ಅವಕಾಶವಿಲ್ಲ
ಹೊಸದಿಲ್ಲಿ, ಮೇ 6: ಉತ್ತರಾಖಂಡ ವಿಧಾನಸಭೆಯಲ್ಲಿ ಮೇ 10ರಂದು ಬಲ ಪರೀಕ್ಷೆ ನಡೆಸುವಂತೆ ಸುಪ್ರೀಂಕೋರ್ಟ್ ಇಂದು ಆದೇಶ ನೀಡಿದೆ. ಅಂದು ಪದಚ್ಯುತ ಮುಖ್ಯಮಂತ್ರಿ ಹರೀಶ್ ರಾವತ್ ವಿಶ್ವಾಸಮತ ಯಾಚಿಸಲಿದ್ದಾರೆ. ಆದರೆ 9 ಮಂದಿ ಬಂಡುಕೋರ ಶಾಸಕರಿಗೆ ಮತದಾನ ಮಾಡಲು ಅವಕಾಶ ನೀಡಿಲ್ಲ.
ಮಹತ್ವದ ಆದೇಶದಲ್ಲಿ ಮಂಗಳವಾರ ಪೂರ್ವಾಹ್ನ 11ರಿಂದ ಮಧ್ಯಾಹ್ನ 1ರವರೆಗೆ ಏಕೈಕ ಕಾರ್ಯಸೂಚಿಯಾಗಿ ನಡೆಯಲಿರುವ ಬಲ ಪರೀಕ್ಷೆಯ ವಿಧಾನವನ್ನು ವಿವರಿಸಲಾಗಿದೆ. ವಿಧಾನಸಭಾಧ್ಯಕ್ಷರು ತಮ್ಮನ್ನು ಅನರ್ಹಗೊಳಿಸಿರುವುದನ್ನು 9 ಮಂದಿ ಬಂಡುಕೋರ ಕಾಂಗ್ರೆಸ್ ಶಾಸಕರು ಉತ್ತರಾಖಂಡ ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದಾರೆ. ವಿಶ್ವಾಸ ಮತದ ವೇಳೆ ‘ಅವರು ಯಥಾ ಸ್ಥಿತಿಯಲ್ಲೇ ಮುಂದುವರಿದಿದ್ದರೆ’ ಅವರಿಗೆ ಮತ ನೀಡುವ ಅವಕಾಶವಿರುವುದಿಲ್ಲವೆಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
ಅನರ್ಹ ಶಾಸಕರ ಅರ್ಜಿಯು ಹೈಕೋರ್ಟ್‌ನಲ್ಲಿ ನಾಳೆ ವಿಚಾರಣೆಗೆ ಬರಲಿದೆ. ಅದು ಅವರಿಗೆ ಮತದಾನಕ್ಕೆ ಅವಕಾಶ ನೀಡಿದಲ್ಲಿ, 70 ಸದಸ್ಯ ಬಲದ ಸದನದಲ್ಲಿ ರಾವತ್‌ರ ಭವಿಷ್ಯಕ್ಕೆ ಮುಳುವಾಗುವ ಸಾಧ್ಯತೆಯಿದೆ. ಎರಡು ತಾಸುಗಳ ವಿಶ್ವಾಸ ಮತ ಯಾಚನೆ ಕಲಾಪವನ್ನು ವಿಧಾನಸಭೆಯ ಪ್ರಧಾನ ಕಾರ್ಯದರ್ಶಿಯ ಮೇಲ್ವಿ ಚಾರಣೆಯಲ್ಲಿ ಸಂಪೂರ್ಣ ವಾಗಿ ಚಿತ್ರೀಕರಿಸಿಕೊಳ್ಳಬೇಕೆಂದು ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದೆ.
ವಿಶ್ವಾಸ ಮತ ಯಾಚನೆಯ 2 ತಾಸುಗಳ ಅವಧಿಗೆ ರಾಷ್ಟ್ರಪತಿ ಆಡಳಿತವನ್ನು ಅಮಾನತಿನಲ್ಲಿರಿಸಲಾಗುವುದು ಹಾಗೂ ರಾಜ್ಯಪಾಲರು ರಾಜ್ಯದ ಪ್ರಭಾರ ವಹಿಸುವರೆಂದು ನ್ಯಾಯಮೂರ್ತಿಗಳಾದ ದೀಪಕ್ ಮಿಶ್ರಾ ಹಾಗೂ ಶಿವಕೀರ್ತಿ ಸಿಂಗ್‌ರನ್ನೊಳಗೊಂಡ ಪೀಠ ಆದೇಶಿಸಿದೆ.
ವಿಧಾನಸಭೆಯ ಪ್ರಧಾನ ಕಾರ್ಯದರ್ಶಿ, ಫಲಿತಾಂಶ ಹಾಗೂ ಸಂಪೂರ್ಣ ಕಲಾಪದ ವೀಡಿಯೊ ಸಹಿತ ಎಲ್ಲ ದಾಖಲೆಗಳನ್ನು ಮುಚ್ಚಿದ ಲಕೋಟೆಯಲ್ಲಿ ಮೇ 11ರಂದು ತನ್ನ ಮುಂದಿಡಬೇಕೆಂದು ಅದು ನಿರ್ದೇಶಿಸಿದೆ. ಎಲ್ಲ ಅರ್ಹ ಸದಸ್ಯರು ಸುರಕ್ಷಿತವಾಗಿ ಮತದಾನದಲ್ಲಿ ಭಾಗವಹಿಸುವುದನ್ನು ಹಾಗೂ ಯಾರಿಗೂ ಯಾರಿಂದಲೂ ಆತಂಕ ಎದುರಾಗದಂತೆ ಖಚಿತಪಡಿಸಲು ಉತ್ತರಾಖಂಡದ ಮುಖ್ಯಕಾರ್ಯದರ್ಶಿ ಹಾಗೂ ಡಿಜಿಪಿಯವರಿಗೆ ನ್ಯಾಯಾಲಯ ಸೂಚಿಸಿದೆ.
ಅಟಾರ್ನಿ ಜನರಲ್ ಮುಕುಲ್ ರೊಹಟ್ಗಿ ವಿನಂತಸಿದಂತೆ, ಮಾಜಿ ಮುಖ್ಯ ಚುನಾವಣಾಯುಕ್ತರು ಸಹಿತ ಯಾರೇ ಹೊರಗಿನವರನ್ನು ವೀಕ್ಷಕರಾಗಿ ನೇಮಿಸಲು ಅದು ನಿರಾಕರಿಸಿದೆ.
ರಾವತ್‌ರ ವಿಶ್ವಾಸಮತ ಗೊತ್ತುವಳಿ ಹೊರತುಪಡಿಸಿ ಸದನದಲ್ಲಿ ಯಾವುದೇ ಇತರ ವಿಷಯದ ಬಗ್ಗೆ ಚರ್ಚೆ ನಡೆಸುವಂತಿಲ್ಲ. ವಿಧಾನಸಭೆಯ ಎಲ್ಲ ಅಧಿಕಾರಿಗಳು ಪ್ರಕ್ರಿಯೆಯನ್ನು ಅಕ್ಷರಶಃ ಪಾಲಿಸಬೇಕು. ಯಾವುದೇ ರೀತಿಯ ಚ್ಯುತಿಯನ್ನು ಗಂಭೀರವಾಗಿ ಪರಿಗಣಿಸಲಾಗುವುದು ಎಂದು ಎಚ್ಚರಿಕೆ ನೀಡಿದ ನ್ಯಾಯಪೀಠ ವಿಶ್ವಾಸಮತ ಯಾಚನೆ ಕಲಾಪ ಸಂಪೂಣರ್ ಶಾಂತಿಯಿಂದ ಹಾಗೂ ಯಾವುದೇ ಅಡಚಣೆಯಿಲ್ಲದೆ ನಡೆಯುವುದೆಂಬ ವಿಶ್ವಾಸ ವ್ಯಕ್ತಪಡಿಸಿದೆ.







