ಸಿರಿಧಾನ್ಯ ಬೆಳೆಯಲು ಸರಕಾರ ಉತ್ತೇಜನ ನೀಡಲಿ: ಪ್ರೊ.ಸಿದ್ದರಾಮಯ್ಯ
ಸಿರಿಧಾನ್ಯ ಮೇಳಕ್ಕೆ ಚಾಲನೆ

ಬೆಂಗಳೂರು, ಮೇ 6: ಅವನತಿ ಅಂಚಿನಲ್ಲಿರುವ ನೆಲಮೂಲ ತಳಿ ಗಳಾದ ಸಿರಿಧಾನ್ಯ ಬೆಳೆಗಳನ್ನು ಬೆಳೆಯಲು ರೈತರಿಗೆ ಸರಕಾರ ಮತ್ತು ಕೃಷಿ ವಿಶ್ವವಿದ್ಯಾನಿಲಯಗಳು ಉತ್ತೇಜನ ನೀಡಬೇಕು ಎಂದು ಹಿರಿಯ ಸಾಹಿತಿ ಎಸ್.ಜಿ.ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.
ಶುಕ್ರವಾರ ನಗರದ ಲಾಲ್‌ಬಾಗ್‌ನಲ್ಲಿರುವ ಎಂ.ಎಚ್.ಮರಿಗೌಡ ಸ್ಮಾರಕ ಭವನದಲ್ಲಿ ಗ್ರಾಮೀಣ ಕುಟುಂಬ ಸಂಸ್ಥೆಯು ಆಯೋಜಿಸಿದ್ದ ಸಿರಿಧಾನ್ಯ ಮೇಳಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಹಿಂದಿನ ಕಾಲದಲ್ಲಿ ಸಿರಿಧಾನಗಳನ್ನು ಬೆಳೆಯುವುದು ಕೃಷಿಯ ಅವಿಭಾಜ್ಯ ಅಂಗವಾಗಿತ್ತು. ಈ ಧಾನ್ಯಗಳನ್ನು ಕುಟ್ಟಿ ತಯಾರಿಸಿದ ಅಕ್ಕಿಯು ಅನೇಕ ಪೌಷ್ಟಿಕ ಅಂಶಗಳನ್ನು ಒಳಗೊಂಡಿವೆ. ಅಲ್ಲದೆ ಈ ಧಾನ್ಯ ಗಳ ಆಹಾರ ಪದಾರ್ಥಗಳು ದೇಹ ಮತ್ತು ಮನಸಿನ ಆರೋಗ್ಯಕ್ಕೆ ಪೂರಕ ವಾಗಿದ್ದವು. ಆದರೆ ಇತ್ತೀಚೆಗೆ ಸಿರಿ ಧಾನ್ಯಗಳ ಬೆಳೆ ಕುಂಠಿತವಾಗಿರು ವುದಲ್ಲದೆ ಈ ಧಾನ್ಯಗಳನ್ನು ಕುಟ್ಟಿ ಅಕ್ಕಿ ಮಾಡುವ ವಿಧಾನದ ಮಾಹಿತಿ ಇಂದಿನ ಯುವ ರೈತರಿಗೆ ಇಲ್ಲ ಎಂದು ಬೇಸರಪಟ್ಟರು.
ಸಿರಿಧಾನ್ಯಗಳಿಗೆ ಪನರುಜ್ಜೀವನ ನೀಡುವ ನಿಟ್ಟಿನಲ್ಲಿ ಸರಕಾರ ಮತ್ತು ಕೃಷಿ ವಿವಿಗಳು ಮುಂದಾಗಬೇಕು. ಜನರಲ್ಲಿ ಸಿರಿ ಧಾನ್ಯಗಳ ಸಂಸ್ಕೃತಿ, ಪ್ರಾಮುಖ್ಯತೆ ಮತ್ತು ಈ ಆಹಾರಗಳಲ್ಲಿನ ಪೌಷ್ಟಿಕಾಂಶಗಳ ಬಗ್ಗೆ ರೈತರು ಮತ್ತು ಗ್ರಾಹಕರಿಗೆ ಜಾಗೃತಿ ಮೂಡಿಸಬೇಕು ಎಂದರು.
ಇತ್ತೀಚಿನ ದಿನಗಳಲ್ಲಿ ಲಾಭದ ದೃಷ್ಟಿಯಿಂದ ಸಿರಿಧಾನ್ಯಗಳನ್ನು ನಿರ್ಲಕ್ಷ ಮಾಡಿ ವಾಣಿಜ್ಯ ಬೆಳೆಗಳತ್ತ ಮುಖ ಮಾಡಿರುವ ರೈತರು ಇಂದು ನಷ್ಟಕ್ಕೆ ಸಿಲುಕಿ ಅತಂತ್ರದಲ್ಲಿದ್ದಾರೆ. ಈ ಪರಿಣಾಮ ದೇಶದಲ್ಲಿ ರೈತರ ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗುತ್ತಿವೆ ಎಂದು ಕಳವಳ ವ್ಯಕ್ತಪಡಿಸಿದರು.
ರೈತರು ಸಿರಿಧಾನ್ಯಗಳ ಬೇಸಾಯ ಮಾಡಲು ಮುಂದಾಗ ಬೇಕು. ಈ ಬೇಸಾಯ ಪದ್ಧತಿಗೆ ಪೂರಕವಾದ ಸಮಗ್ರ ಮಾಹಿತಿ ಯನ್ನು ಕೃಷಿ ವಿವಿಗಳು ಒದಗಿಸಬೇಕು ಅರಿವು ಮೂಡಿಸಬೇಕು. ಈ ಮೂಲಕ ರೈತರ ಆರ್ಥಿಕ ಸ್ಥಿತಿಯು ಉತ್ತಮವಾಗಿರುತ್ತದೆ ಮತ್ತು ಗ್ರಾಹಕರ ಆರೋಗ್ಯವು ಉತ್ತಮವಾಗಿರುತ್ತದೆ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಆಯುರ್ವೇದ ವೈದ್ಯೆ ಡಾ.ವಸುಂಧರಾ ಭೂಪತಿ ಮಾತನಾಡಿ, ಕುಲಾಂತರಿ ತಳಿಗಳಿಂದ ಬೆಳೆದು ತಿಂದ ಆಹಾರ ಪದಾರ್ಥಗಳಿಂದ ಮಧುಮೇಹ, ನೀಲಕಾಯ ರೋಗಗಳ ಲಕ್ಷಣಗಳು ಹೆಚ್ಚು ಕಾಣಿಸಿಕೊಳ್ಳುತ್ತವೆ. ಆದರೆ ಸಿರಿಧಾನ್ಯಗಳ ಪದಾರ್ಥಗಳನ್ನು ಸೇವಿಸಿದರೆ ಮಧುಮೇಹ ಸೇರಿದಂತೆ ಇತರೆ ರೋಗಗಳನ್ನು ತಡೆಗಟ್ಟಬಹುದು. ಹೀಗಾಗಿ ಸರಕಾರ ಸಿರಿಧಾನ್ಯಗಳನ್ನು ಬೆಳೆಯಲು ರೈತರಿಗೆ ಉತ್ತೇಜನ, ಪ್ರೋತ್ಸಾಹ ನೀಡಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸಿರಿಧಾನ್ಯಗಳ ಬಿತ್ತನೆ ಮಾಹಿತಿ ಪುಸ್ತಕ ಮತ್ತು ಸಿರಿಧಾನ್ಯಗಳಿಂದ ತಯಾರಿಸುವ ಪದಾರ್ಥಗಳ ಪರಿಚಯ ದ ಕಿರು ಹೊತ್ತಿಗೆಯನ್ನು ಲೋಕಾರ್ಪಣೆಗೊಳಿಸಲಾಯಿತು. ಈ ವೇಳೆ ತೋಟಗಾರಿಕಾ ಇಲಾಖೆಯ ಜಂಟಿ ನಿರ್ದೇಶಕ ಡಾ. ಜಗದೀಶ್, ಕಲಾವಿದ ಅರುಣ್‌ಸಾಗರ್ ಮತ್ತಿತರರು ಉಪಸ್ಥಿತರಿದ್ದರು.
ವಿವಿಧ ಬಗೆಯ ತಿನಿಸುಗಳು: ಸೋಮವಾರದವರೆಗೆ ನಡೆಯಲಿರುವ ಮೇಳದಲ್ಲಿ ಸಿರಿಧಾನ್ಯಗಳ ಪ್ರದರ್ಶನ ಮತ್ತು ಮಾರಾಟದ ಜೊತೆಗೆ, ಸಿರಿಧಾನ್ಯಗಳಿಂದ ಸಿದ್ಧಪಡಿಸಿರುವ ವಿವಿಧ ಬಗೆಯ ಖಾದ್ಯ ಪದಾರ್ಥಗಳನ್ನು ಪ್ರದರ್ಶನಕ್ಕಿಡಲಾಗಿದೆ. ರಾಗಿರೊಟ್ಟಿ, ಜೋಳದ ರೊಟ್ಟಿ, ಸಜ್ಜೆ ಮತ್ತು ನವಣೆಯಿಂದ ಮಾಡಿದ ಸಿಹಿ ಪದಾರ್ಥಗಳು ಗ್ರಾಹಕರ ಮನಸನ್ನು ಸೆಳೆದವು. ಜೊತೆಗೆ ಸಾವಯವ ಕಿರು ಧಾನ್ಯಗಳ ಮತ್ತು ಪದಾರ್ಥಗಳನ್ನು ಪ್ರದರ್ಶನ ಮತ್ತು ಮಾರಾಟಕ್ಕಿಡಲಾಗಿದೆ.
ರಿಯಾಯಿತಿ ದರದಲ್ಲಿ ಬಿತ್ತನೆ ಬೀಜ, ಧಾನ್ಯಗಳ ಮಾರಾಟ: ಮೇಳದಲ್ಲಿ ಸಿರಿಧಾನ್ಯಗಳನ್ನು ರಿಯಾಯಿತಿ ದರದಲ್ಲಿ ಮಾರಾಟ ಮಾಡಲಾಗುತ್ತಿದೆ. ಸಿರಿಧಾನ್ಯಗಳ ಮಾರುಕಟ್ಟೆಯಲ್ಲಿನ ಬೆಲೆಗಿಂತ ಶೇ.20ರಷ್ಟು ಕಡಿಮೆ ಬೆಲೆಯಲ್ಲಿ ಮಾರಾಟ ಮಾಡಲಾಗುತ್ತಿದೆ. ನವಣೆ, ಸಾಮೆ, ಆರ್ಕಾ, ಜೋಳ, ಸಜ್ಜೆ, ಬುರುಗು ಧಾನ್ಯಗಳನ್ನು ಪ್ರತಿ ಕೆಜಿಗೆ 90ರೂ.ಗಳಂತೆ ಮಾರಾಟ ಮಾಡಲಾಗುತ್ತಿದೆ. ಅಲ್ಲದೆ ಬಿತ್ತನೆ ಬೀಜಗಳನ್ನು ರೈತರಿಗೆ ರಿಯಾಯಿತಿ ದರದಲ್ಲಿ ಮಾರಾಟ ಮಾಡಲು ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಗ್ರಾಮೀಣ ಕುಟುಂಬದ ಸಂಸ್ಥಾಪಕ ಎಂ.ಎಚ್.ಶ್ರೀಧರ್‌ಮೂರ್ತಿ ಹೇಳಿದರು.







