ಜಾಮೀನು ಕೋರಿ ಅಶ್ವಿನ್‌ರಾವ್ ಅರ್ಜಿ
ಎಸ್‌ಐಟಿಗೆ ಹೈಕೋರ್ಟ್ ನೋಟಿಸ್
ಬೆಂಗಳೂರು,ಮೇ 6: ಲೋಕಾಯುಕ್ತ ಸಂಸ್ಥೆಯಲ್ಲಿನ ಭ್ರಷ್ಟಾಚಾರ ಆರೋಪಕ್ಕೆ ಸಂಬಂಧಪಟ್ಟಂತೆ ನ್ಯಾಯಾಂಗ ಬಂಧನದಲ್ಲಿರುವ ಪ್ರಮುಖ ಆರೋಪಿ ಅಶ್ವಿನ್‌ರಾವ್ ಜಾಮೀನು ಕೋರಿ ಹೈಕೋರ್ಟ್‌ನಲ್ಲಿ ಮತ್ತೆ ಅರ್ಜಿ ಸಲ್ಲಿಸಿದ್ದಾರೆ.
ನ್ಯಾಯಮೂರ್ತಿ ಆನಂದ ಭೈರಾರೆಡ್ಡಿ ಅವರಿದ್ದ ರಜಾಕಾಲದ ನ್ಯಾಯಪೀಠ. ಈ ಅರ್ಜಿಯ ವಿಚಾರಣೆ ನಡೆಸಿ ಎಸ್‌ಐಟಿಗೆ (ವಿಶೇಷ ತನಿಖಾ ತಂಡ) ನೋಟಿಸ್ ಜಾರಿ ಮಾಡಲು ಆದೇಶಿಸಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಎಲ್ಲ ತನಿಖೆ ಮುಗಿದಿದೆ. ಸಾಕ್ಷಿಗಳ ಹೇಳಿಕೆ ಪಡೆಯಲಾಗಿದೆ. ಅಂತೆಯೇ ನಾನು ಬಿಡುಗಡೆಯಾದರೆ ನನ್ನ ತಂದೆಯ ಪ್ರಭಾವ ಬಳಸಿ ಸಾಕ್ಷಿಗಳ ನಾಶಕ್ಕೆ ಪ್ರಯತ್ನಿಸುತ್ತೇನೆ ಎಂಬುದು ಸರಿಯಲ್ಲ. ಈಗ ನನ್ನ ತಂದೆ (ನ್ಯಾ.ವೈ.ಭಾಸ್ಕರ್‌ರಾವ್) ಲೋಕಾಯುಕ್ತ ಸ್ಥಾನದಲ್ಲಿಯೇ ಇಲ್ಲ. ಹೀಗಾಗಿ, ನನಗೆ ಜಾಮೀನು ನೀಡಬೇಕು ಎಂದು ಅಶ್ವಿನ್ ಜಾಮೀನು ನೀಡಿಕೆಗೆ ಕಾರಣ ವಿವರಿಸಿದ್ದಾರೆ. ವಂಚನೆ, ಸುಲಿಗೆ ಹಾಗೂ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ-1988ರ ಕಲಂ 8 ಮತ್ತು 9ರ ಅಡಿಯಲ್ಲಿ ಸರಕಾರಿ ಅಧಿಕಾರಿಗಳ ಮೇಲೆ ಪ್ರಭಾವ ಬೀರಿದ ಆರೋಪವನ್ನು ಅಶ್ವಿನ್ ಎದುರಿಸುತ್ತಿದ್ದಾರೆ. ಕಳೆದ ವರ್ಷ ಜುಲೈ ತಿಂಗಳಿನಿಂದಲೂ ಇವರು ನ್ಯಾಯಾಂಗ ಬಂಧನದಲ್ಲಿದ್ದಾರೆ. ವಿಚಾರಣೆಯನ್ನು ಮೇ 12ಕ್ಕೆ ಮುಂದೂಡಲಾಗಿದೆ.





