ಕಲಾಂರ ಹೆಸರು-ಚಿತ್ರ ಬಳಸದಂತೆ ಪಕ್ಷಕ್ಕೆ ಮದ್ರಾಸ್ ಹೈಕೋರ್ಟ್ ನಿರ್ಬಂಧ
ಚೆನ್ನೈ, ಮೇ 6: ಮಾಜಿ ರಾಷ್ಟ್ರಪತಿ ದಿವಂಗತ ಎಪಿಜೆ ಅಬ್ದುಲ್ ಕಲಾಮರ ಹೆಸರನ್ನಾಗಲಿ ಭಾವ ಚಿತ್ರವನ್ನಾಗಲಿ ಉಪಯೋಗಿಸುವುದರಿಂದ ‘ಅಬ್ದುಲ್ ಕಲಾಂ ವಿಶನ್ ಪಾರ್ಟಿಗೆ’ ಮದ್ರಾಸ್ ಹೈಕೋರ್ಟ್ ನಿರ್ಬಂಧ ವಿಧಿಸಿದೆ.
ಕಲಾಂರ ಸೋದರ, ಎಪಿಜೆ ಮುಹಮ್ಮದ್ ಮುತ್ತು ಮೀರಾ ಮರೈಕ ಯಾರ್ ದಾಖಲಿಸಿದ್ದ ಸಿವಿಲ್ ಮೊಕದ್ದಮೆಯ ವಿಚಾರಣೆ ನಡೆಸಿದ ರಜಾಕಾಲದ ನ್ಯಾಯಮೂರ್ತಿ ಎಸ್.ವಿಮಲಾ ಮೇಲ್ನೋಟಕ್ಕೆ ಪ್ರಕರಣವೊಂದನ್ನು ರಚಿಸಬಹದು. ಪ್ರತಿಬಂಧಕಾಜ್ಞೆ ಮಂಜೂರು ಮಾಡಲು ರಾಷ್ಟ್ರೀಯ ಹಿತಾಸಕ್ತಿಯ ಪರ ಅನುಕೂಲತೆಯ ತಕ್ಕಡಿ ವಾಲಿದೆಯೆಂಬುದು ಈ ನ್ಯಾಯಾಲಯದ ಪರಿಗಣಿತ ಅಭಿಪ್ರಾಯವಾಗಿದೆ ಎಂದರು.
ಆದುದರಿಮದ ಈ ಮೊಕದ್ದಮೆಯಲ್ಲಿ ಒಳಗೊಂಡಿರುವ ವಿಶಾಲ ನಾಗರಿಕ ಹಕ್ಕುಗಳನ್ನು ಗಮನಿಸಿ, ಪಕ್ಷದ ಹೆಸರಿನ ಭಾಗವಾಗಿ ಅಥವಾ ಅವರ ರಾಜಕೀಯ ಪಕ್ಷದ ಧ್ವಜದಲ್ಲಿ ಅಥವಾ ಇತರ ಯಾವುದೇ ರಾಜಕೀಯ ಚಟುವಟಿಕೆಯಲ್ಲಿ ಡಾ.ಎಪಿಜೆ ಅಬ್ದುಲ್ ಕಲಾಮರ ಹೆಸರು, ವಿಗ್ರಹ ಚಿತ್ರವನ್ನು ಪ್ರತಿವಾದಿಯು ಬಳಸುವುದಕ್ಕೆ ನಿರ್ಬಂಧ ಹೇರಿ ತಾತ್ಕಾಲಿಕ ಪ್ರತಿಬಂಧಕಾಜ್ಞೆಯನ್ನು ಮಂಜೂರು ಮಾಡಲಾಗಿದೆಯೆಂದು ಅವರು ಹೇಳಿದರು.
ಅರ್ಜಿದಾರರು ಅಥವಾ ದೂರುದಾರರು ಸಲ್ಲಿಸಿರುದ ಮನವಿಯ ಬಗ್ಗೆ ಭಾರತದ ಚುನಾವಣಾ ಆಯೋಗ ಹಾಗೂ ತಮಿಳುನಾಡಿನ ಮುಖ್ಯ ಚುನಾವಣಾಯುಕ್ತರು ಅಂತಿಮ ನಿರ್ಧಾರ ಕೈಗೊಳ್ಳುವವರೆಗೆ ಈ ಆದೇಶ ಊರ್ಜಿತದಲ್ಲಿರುತ್ತದೆಂದು ನ್ಯಾ.ವಿಮಲಾ ತಿಳಿಸಿದ್ದಾರೆ.
ದೇಶದ ಯಾವನೇ ರಾಷ್ಟ್ರಪತಿಯ ಹೆಸರು ಅಥವಾ ಹುದ್ದೆಯನ್ನು ಯಾವುದೇ ರಾಜಕೀಯ ಪಕ್ಷದ ಹೆಸರು ಅಥವಾ ಚಿಹ್ನೆಯಾಗಿ ಬಳಸಬಾರದೆಂದು ಅವರು ಸ್ಪಷ್ಟಪಡಿಸಿದ್ದಾರೆ.
.......
10-12 ಮಿ.ಜನರು ಮಾನಸಿಕ ಅಸ್ವಸ್ಥತೆಯಿಂದ ನರಳುತ್ತಿದ್ದಾರೆ: ನಡ್ಡಾ
ಹೊಸದಿಲ್ಲಿ,ಮೇ 6: ರಾಷ್ಟ್ರೀಯ ಕಿರು ಆರ್ಥಿಕತೆ ಮತ್ತು ಆರೋಗ್ಯ ಆಯೋಗವು 2005ರಲ್ಲಿ ವರದಿ ಮಾಡಿರುವಂತೆ ದೇಶದಲ್ಲಿ ಸುಮಾರು 10ರಿಂದ 12 ಮಿಲಿಯ ಜನರು ದ್ವಂದ್ವ ವ್ಯಕ್ತಿತ್ವ ಮತ್ತು ದ್ವಿಧ್ರುವೀಯ ವಿಕಾರತೆಯಂತಹ ತೀವ್ರ ಮಾನಸಿಕ ಅಸ್ವಸ್ಥತೆಗಳಿಂದ ಮತ್ತು ಸುಮಾರು 50 ಮಿ.ಜನರು ಖಿನ್ನತೆಯಿಂದ ಬಳಲುತ್ತಿದ್ದಾರೆ ಎಂದು ಆರೋಗ್ಯ ಸಚಿವ ಜೆ.ಪಿ.ನಡ್ಡಾ ಅವರು ಶುಕ್ರವಾರ ಲೋಕಸಭೆಯಲ್ಲಿ ತಿಳಿಸಿದರು.
ಸರಕಾರವು ಬೆಂಗಳೂರಿನ ನಿಮ್ಹಾನ್ಸ್ ಸಂಸ್ಥೆಯ ಮೂಲಕ ರಾಷ್ಟ್ರೀಯ ಮಾನಸಿಕ ಆರೋಗ್ಯ ಸಮೀಕ್ಷೆಗೆ 2015,ಜೂ.1ರಿಂದ ಚಾಲನೆ ನೀಡಿದ್ದು, ಈ ವರ್ಷದ ಎಪ್ರಿಲ್ 5ರವರೆಗೆ ಕ್ಷೇತ್ರಮಟ್ಟದಲ್ಲಿ 27,000 ಸಂದರ್ಶನಗಳನ್ನು ಪೂರ್ಣಗೊಳಿಸಲಾಗಿದೆ ಎಂದರು.
ರಾಜ್ಯಸರಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಆಡಳಿತಗಳ ಅಧೀನದಲ್ಲಿರುವ 15 ಸಂಸ್ಥೆಗಳಲ್ಲಿ ಮಾನಸಿಕ ಆರೋಗ್ಯ ಕ್ಷೇತ್ರದಲ್ಲಿ ವಿಶೇಷ ಪರಿಣಿತ ಕೇಂದ್ರಗಳ ಸ್ಥಾಪನೆಗಾಗಿ ಕೇಂದ್ರವು ಆರ್ಥಿಕ ನೆರವನ್ನು ಒದಗಿಸಿದೆ ಎಂದು ಸಚಿವರು ತಿಳಿಸಿದರು.







