ರಾಜ್ಯದ ಹೊರಗಡೆ ವಧಿಸಿದ ಗೋಮಾಂಸ ಭಕ್ಷಣೆಗೆ ಬಾಂಬೆ ಹೈಕೋರ್ಟ್ ಸಮ್ಮತಿ

ಮುಂಬೈ, ಮೇ 6: ರಾಜ್ಯದ ಹೊರಗಡೆ ವಧಿಸಿದ ಗೋಮಾಂಸವನ್ನು ಭಕ್ಷಿಸುವುದು, ಹೊಂದುವುದು ಅಪರಾಧವಲ್ಲ ಎಂದು ಶುಕ್ರವಾರ ಬಾಂಬೆ ಹೈಕೋರ್ಟ್ ಹೇಳಿದೆ.
ಮಹಾರಾಷ್ಟ್ರದೊಳಗೆ ಬಿಜೆಪಿ ನೇತೃತ್ವದ ಸರಕಾರವು ಹೋರಿಗಳು ಮತ್ತು ಎತ್ತುಗಳ ವಧೆಯನ್ನು ನಿಷೇಧಿಸಿರುವುದನ್ನು ಎತ್ತಿ ಹಿಡಿದಿರುವ ನ್ಯಾಯಾಲಯ, ಮಹಾರಾಷ್ಟ್ರ ಪಶು ಸಂರಕ್ಷಣೆ(ತಿದ್ದುಪಡಿ) ಕಾಯ್ದೆಯ ಕಲಮ್‌ಗಳನ್ನು ಸಂವಿಧಾನ ವಿರೋಧಿ ಎಂದು ರದ್ದುಗೊಳಿಸಿದೆ.
ರಾಜ್ಯದಲ್ಲಿ ವಧೆ ಮಾಡಲಾದ ಪಶುಗಳ ಮಾಂಸವನ್ನು ‘ಪ್ರಜ್ಞಾಪೂರ್ವಕವಾಗಿ ವಶದಲ್ಲಿ ಹೊಂದಿರುವುದು’ಮಾತ್ರ ಅಪರಾಧವಾಗುತ್ತದೆ ಎಂದು ಹೇಳಿದೆ. ನ್ಯಾಯಮೂರ್ತಿಗಳಾದ ಎ.ಎಸ್.ಓಕಾ ಮತ್ತು ಎಸ್.ಸಿ.ಗುಪ್ತಾ ಅವರ ವಿಭಾಗೀಯ ಪೀಠವು ಕಾಯ್ದೆಯ 5(ಡಿ) ಮತ್ತು 9(ಬಿ) ಕಲಮ್‌ಗಳನ್ನು ರದ್ದುಗೊಳಿಸಿತು. 5(ಡಿ) ಕಲಮ್‌ನಡಿ ವ್ಯಕ್ತಿಯೋರ್ವ ಗೋಮಾಂಸವನ್ನು ಹೊಂದಿರುವುದು ಅಪರಾಧವಾಗುತ್ತದೆ ಮತ್ತು ಕಲಂ 9(ಬಿ) ಅಂತಹ ವ್ಯಕ್ತಿಗೆ ದಂಡನೆಯನ್ನು ವಿಧಿಸಲು ಅವಕಾಶ ಕಲ್ಪಿಸುತ್ತದೆ. ಕಲಂ 5(ಡಿ)ಮತ್ತು 9(ಬಿ) ಸಂವಿಧಾನದ 21ನೆ ವಿಧಿಯಡಿ ವ್ಯಕ್ತಿಗೆ ದತ್ತವಾಗಿರುವ ಖಾಸಗಿತನದ ಹಕ್ಕನ್ನು ಉಲ್ಲಂಘಿಸುತ್ತವೆ ಎಂದು ನ್ಯಾ.ಓಕಾ ಹೇಳಿದರು.
1976ರ ಕಾಯ್ದೆಯನ್ವಯ ರಾಜ್ಯದಲ್ಲಿ ಗೋಹತ್ಯೆ,ಮತ್ತು ಗೋಮಾಂಸದ ದಾಸ್ತಾನು ಮತ್ತು ಬಳಕೆಯು ಅಪರಾಧವಾಗಿದೆ. ಆದರೆ 2015ರಲ್ಲಿ ಹೋರಿಗಳು ಮತ್ತು ಎತ್ತುಗಳ ವಧೆಯ ಮೇಲೆ ನಿಷೇಧವನ್ನು ಕಾಯ್ದೆಯ ವ್ಯಾಪ್ತಿಗೊಳಪಡಿಸಲಾಗಿದೆ.





