9 ದಿನ ಪೂರೈಸಿದ ಜೆಎನ್‌ಯು ಉಪವಾಸ
ಮುಷ್ಕರ ಕನ್ಹಯ್ಯನ ಸ್ಥಿತಿ ಸುಧಾರಣೆ
ಹೊಸದಿಲ್ಲಿ, ಮೇ 6: ಇಲ್ಲಿನ ಜೆನ್‌ಯು ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳ ಉಪವಾಸ ಮುಷ್ಕರ ಶುಕ್ರವಾರ 9ನೆ ದಿನವನ್ನು ಮುಗಿಸಿದೆ. ಎಐಐಎಂಎಸ್‌ಗೆ ಸೇರಿಸಲಾಗಿರುವ ವಿದ್ಯಾರ್ಥಿ ಸಂಘದ ನಾಯಕ ಕನ್ಹಯ್ಯಾ ಕುಮಾರ್‌ನ ದೇಹಸ್ಥಿತಿ ಸುಧಾರಿಸಿದೆ.
ಸಂಸತ್ ಭವನ ದಾಳಿಯ ಅಪರಾಧಿ ಅಫ್ಝಲ್ ಗುರುವನ್ನು ಬೆಂಬಲಿಸಿ ಫೆ.9ರಂದು ವಿವಿ ಆವರಣದಲ್ಲಿ ವಿವಾದಿತ ಕಾರ್ಯಕ್ರಮವೊಂದು ನಡೆದಿತ್ತು. ಅದರಲ್ಲಿ ಕೆಲವರು ಭಾರತ ವಿರೋಧಿ ಘೋಷಣೆಗಳನ್ನು ಕೂಗಿದ್ದರು. ಸಮಿತಿಯೊಂದರ ಮೂಲಕ ತನಿಖೆ ನಡೆಸಿದ ವಿವಿ ಆಡಳಿತ ಮಂಡಳಿ, ತಪ್ಪಿತಸ್ಥರೆಂದು ಕಂಡು ಬಂದ ವಿದ್ಯಾರ್ಥಿಗಳಿಗೆ ವಿವಿಧ ಶಿಕ್ಷೆಗಳನ್ನು ಪ್ರಕಟಿಸಿತ್ತು. ಇದನ್ನು ವಿರೋಧಿಸಿ ವಿದ್ಯಾರ್ಥಿಗಳು ಉಪವಾಸ ಮುಷ್ಕರ ಆರಂಭಿಸಿದ್ದರು.
ಐವರು ವಿದ್ಯಾರ್ಥಿಗಳು ನಿನ್ನೆ ಉಪವಾಸ ಮುಷ್ಕರವನ್ನು ಹಿಂದೆಗೆದುಕೊಂಡಿದ್ದಾರೆ. ಇತರ 15 ಮಂದಿ ನಿರಶನ ಮುಂದುವರಿಸಿದ್ದಾರೆ.
ಕನ್ಹಯ್ಯನನ್ನು ನಿಗಾದಲ್ಲಿರಿಸುವಂತೆ ವೈದ್ಯರು ಸಲಹೆ ನೀಡಿದ್ದಾರೆ. ಆತನ ಆರೋಗ್ಯ ಸುಧಾರಿಸಿದೆಯೆಂದು ಜೆಎನ್‌ಯು ವಿದ್ಯಾರ್ಥಿ ಸಂಘದ ಹೇಳಿಕೆಯೊಂದು ತಿಳಿಸಿದೆ.
ತನ್ನ ಅನುಪಸ್ಥಿತಿಯಲ್ಲಿ ಚಳವಳಿ ಮುಂದುವರಿಸುವಂತೆ ಕನ್ಹಯ್ಯಿ ವಿದ್ಯಾರ್ಥಿಗಳಿಗೆ ಮನವಿ ಮಾಡಿದ್ದಾನೆಂದು ಅದು ಹೇಳಿದೆ.





