‘ಟಾಟಾ ಇನ್‌ಸ್ಟಿಟ್ಯೂಟ್’ ನಿಂದ ಎಂಫಿಲ್ ಪಡೆದ ಮುಂಬೈ ಪಾಲಿಕೆಯ ಸ್ವೀಪರ್ !
‘‘ಕೆಲಸ ಬಿಡುವುದಿಲ್ಲ, ಕಾರ್ಪೊರೇಟ್ ಕೆಲಸ ಬೇಡ’’

ಮುಂಬೈ : ಮೂವತ್ತಾರು ವರ್ಷದ ಸುನಿಲ್ ಯಾದವ್ ಮುಂಬೈ ಮಹಾನಗರ ಪಾಲಿಕೆಯ ಸೇವೆಯಲ್ಲಿರುವ ಸಾಮಾನ್ಯ ಸ್ವೀಪರ್. ಆದರೆ ಆವರ ಸಾಧನೆ ಮಾತ್ರ ಅಸಾಮಾನ್ಯ. ನಗರದ ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಸೋಶಿಯಲ್ ಸಾಯನ್ಸಸ್ ನಿಂದ ಅವರೀಗ ಎಂಫಿಲ್ ಪಡೆದಿದ್ದಾರೆ. ಶುಕ್ರವಾರ ಅವರು ಸಂಸ್ಥೆಯ ಪದವಿ ಪ್ರದಾನ ಸಮಾರಂಭದಲ್ಲಿ ಪದವಿ ಪಡೆದಿದ್ದಾರೆ.
ಮಧ್ಯ ಮುಂಬೈನ ನಾನಾ ಚೌಕ್ ಪ್ರದೇಶದಲ್ಲಿ ಕರ್ತವ್ಯ ನಿರ್ವಹಿಸುವ ಯಾದವ್ ಮುಂದೆ ಪಿಎಚ್‌ಡಿ ಪದವಿಗಾಗಿ ವ್ಯಾಸಂಗ ನಡೆಸಲಿದ್ದಾರೆ. ಇದರಂಗವಾಗಿ ಅವರು ಸ್ವೀಪರ್ ಕೆಲಸ ಮಾಡುವವರ ಸಮಸ್ಯೆಗಳತ್ತ ತಮ್ಮ ಗಮನ ಹರಿಸಲಿದ್ದಾರೆ.
ಎಂಫಿಲ್ ಪಡೆಯಲು ‘ಜಾಗತೀಕರಣ ಮತ್ತು ಕಾರ್ಮಿಕರು’ ಎಂಬ ವಿಷಯವನ್ನು ಅವರು ಆಯ್ದುಕೊಂಡಿದ್ದರಲ್ಲದೆ ತಮ್ಮ ಸ್ನಾತ್ತಕೋತ್ತರ ಪದವಿಯನ್ನು ಏಳನೇ ರ್ಯಾಂಕ್ ಪಡೆದು ಪೂರೈಸಿದ್ದರು.
ಎಂಫಿಲ್ ಪದವಿ ಹೊಂದಿರುವ ಯಾದವ್ ಗೆ ಸುಲಭವಾಗಿ ಯಾವುದೇ ದೊಡ್ಡ ಹುದ್ದೆ ದೊರೆಯಬಹುದು. ಆದರೆ ಅವರು ತಾವು ಮುಂದೆಯೂ ಸ್ವೀಪರ್ ಹುದ್ದೆಯಲಿಯೇ ಮುಂದುವರಿದು ತಮ್ಮಂತೆಯೇ ಕೆಲಸ ಮಾಡುವ ಇತರರ ಸಬಲೀಕರಣಕ್ಕೆ ಪ್ರಯತ್ನಿಸುವುದಾಗಿ ಹೇಳಿದ್ದಾರೆ.
ತನ್ನ ತಂದೆ ಅನಾರೋಗ್ಯಪೀಡಿತರಾದಾಗ ಪರಿಹಾರವಾಗಿ ಅವರ ಕೆಲಸ ತನಗೆ ದೊರೆತಿದ್ದಾಗಿ ವಿವರಿಸುವ ಯಾದವ್ ತಾನಾಗ ಹತ್ತನೇ ತರಗತಿ ನಾಪಾಸಾಗಿದ್ದೆ ಹಾಗೂ ಖರ್ಚುವೆಚ್ಚಗಳನ್ನು ತೂಗಿಸಲು ಹೆಣಗಾಡುತ್ತಿದ್ದೆ ಎಂದರು.
ಮಹಾಲಕ್ಷ್ಮಿ ಪ್ರದೇಶದ ಕೊಳಚೆಗೇರಿಯಲ್ಲಿ ವಾಸಿಸುತ್ತಿದ್ದ ಅವರು ಅಲ್ಲಿನ ಗ್ಯಾಂಗುಗಳ ಹೊಡೆದಾಟದಿಂದ ಬೇಸತ್ತಿದ್ದರು ಹಾಗೂ ಇದು ಅವರ ಶಿಕ್ಷಣದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿತ್ತು.‘‘ಆದರೂ ನಾನು ಮುಂದೆ ಧೃತಿಗೆಡೆದೆ ಶಿಕ್ಷಣ ಮುಂದುವರಿಸಿದೆ ಎಂದು ಇಬ್ಬರು ಶಾಲೆಗೆ ಹೋಗುವ ಹೆಣ್ಣು ಮಕ್ಕಳ ತಂದೆಯಾಗಿರುವ ಯಾದವ್ ಹೇಳುತ್ತಾರೆ.
ಈಗ ಚೆಂಬೂರಿನಲ್ಲಿ ವಾಸವಾಗಿರುವ ಯಾದವ್ ಎಸ್ ಎಸ್ ಸಿ ಹಾಗೂ ಹೆಚ್ ಎಸ್ ಸಿ ಪೂರೈಸಿದ ಬಳಿಕ ಬಿ.ಕಾಂ ಪದವಿ ಪಡೆದು ಮತ್ತೆ ಪತ್ರಿಕೋದ್ಯಮದಲ್ಲಿ ಪದವಿ ಪಡೆದು ಮುಂದೆ 2011ರಲ್ಲಿ ಸಮಾಜ ಸೇವೆಯಲ್ಲಿ ಸ್ನಾತ್ತಕೋತ್ತರಪದವಿ ಪಡೆದಿದ್ದಾರೆ. ಆದರೆ ಇಷ್ಟೆಲ್ಲಾ ಮಾಡಲು ಅವರು ಹರಸಾಹಸ ಪಡಬೇಕಾಗಿ ಬಂದಿತ್ತು. ಹಲವು ಬಾರಿ ಬಿ ಎಂ ಸಿ ಅವರಿಗೆ ಅಸಹಕಾರ ತೋರಿತ್ತು ಎಂದು ಹೇಳುವ ಅವರು ತಮ್ಮ ಶಿಕ್ಷಣದ ಭಾಗವಾಗಿ ಒಮ್ಮೆ ದಕ್ಷಿಣ ಆಫ್ರಿಕಾಗೆ ಹೋಗಬೇಕಾಗಿ ಬಂದಾಗ ಬಿ ಎಂ ಸಿ ಅವಕಾಶ ನಿರಾಕರಿಸಿತ್ತು. ನಂತರ ಟಿಐಎಸ್‌ಎಸ್ ಅಧಿಕಾರಿಗಳ ಮಧ್ಯ ಪ್ರವೇಶದಿಂದ ಅನುಮತಿ ನೀಡಿತ್ತು ಎಂದು ನೆನಪಿಸುತ್ತಾರೆ.
ಕೆಳ ವರ್ಗದ ನೌಕರರನ್ನು ಇನ್ನೂ ತಾರತಮ್ಯದ ದೃಷ್ಟಿಯಿಂದಲೇ ನೋಡಲಾಗುತ್ತಿದೆಯೆಂದು ಹೇಳುವ ಅವರು ತಾನು ಇದರ ವಿರುದ್ಧ ಬಾಂಬೆ ಹೈಕೋರ್ಟಿಗೆ ಅಪೀಲು ಸಲ್ಲಿಸುವುದಾಗಿ ಹೇಳಿದರು.





