ಈ ಜಗತ್ತಿನಲ್ಲಿ ನಾನು ತೆಗೆದುಕೊಳ್ಳದೆ ಇರುವ ಯಾವುದೇ ಅಮಲು ಪದಾರ್ಥ ಇಲ್ಲ : ಸಂಜಯ್ ದತ್

ಹೊಸದಿಲ್ಲಿ , ಮೇ 7: "ಈ ಜಗತ್ತಿನಲ್ಲಿ ನಾನು ತೆಗೆದುಕೊಳ್ಳದೆ ಇರುವ ಯಾವುದೇ ಅಮಲು ಪದಾರ್ಥ ಇಲ್ಲ" ಎಂದು ಹೇಳಿದವರು ಖ್ಯಾತ ಬಾಲಿವುಡ್ ನಟ, ಇತ್ತೀಚಿಗೆ ಜೈಲು ವಾಸ ಪೂರ್ಣಗೊಳಿಸಿ ಬಿಡುಗಡೆಯಾಗಿರುವ ಸಂಜಯ್ ದತ್ !
ದೆಹಲಿಯಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ದತ್ ತಮ್ಮ ಬದುಕಿನ ಹಲವಾರು ವಿಷಯಗಳನ್ನು ಹಂಚಿಕೊಂಡರು. ಅದರಲ್ಲಿ ಅವರು ತಮ್ಮ ಮಾದಕ ವ್ಯಸನದ ಕುರಿತು ಮಾತನಾಡಿದ್ದು ಇಲ್ಲಿದೆ :
" ನಾನು ನನ್ನ ತಾಯಿ ನರ್ಗಿಸ್ ನಿಧನದ ಬಳಿಕ ಡ್ರಗ್ಸ್ ತಗೆದುಕೊಳ್ಳಲು ಪ್ರಾರಂಭಿಸಿದ್ದು ಎಂದು ಜನ ಹೇಳುತ್ತಾರೆ. ಆದರೆ ಅದಕ್ಕೂ ನನ್ನ ತಾಯಿಯ ನಿಧನಕ್ಕೂ ಯಾವುದೇ ಸಂಬಂಧವಿಲ್ಲ. ನನ್ನ ನಾಯಿ ಸತ್ತಿದೆ ಎನ್ನುವುದು, ನನ್ನ ಕತ್ತೆ ಸತ್ತಿದೆ ಎನ್ನುವುದು ಇವೆಲ್ಲಾ ಕೇವಲ ಕಾರಣಗಳು. ಯಾವುದೇ ವ್ಯಕ್ತಿ ಮಾದಕ ವ್ಯಸನಿಯಾಗುವುದು ಸ್ವತ: ಆತನಿಂದಲೇ. ಆತನಿಗೆ ಅದನ್ನು ತೆಗೆದುಕೊಳ್ಳಬೇಕು ಅನ್ನಿಸಿದೆ. ಅದಕ್ಕೆ ಆತ ತೆಗೆದುಕೊಂಡಿದ್ದಾನೆ ಅಷ್ಟೇ . ಒಮ್ಮೆ ಅದರ ಜಗತ್ತಿನೊಳಗೆ ಹೋದರೆ ಮತ್ತೆ ಹಿಂದಿರುಗುವುದು ಕಷ್ಟ. ಅದು ಅತ್ಯಂತ ಕೆಟ್ಟ ಜಗತ್ತು. ನಾನು ಅದರಲ್ಲಿ ೧೨ ವರ್ಷ ಕಳೆದಿದ್ದೇನೆ. ನಾನು ತೆಗೆದುಕೊಳ್ಳದೆ ಇರುವ ಅಮಲು ಪದಾರ್ಥ ಈ ಜಗತ್ತಿನಲ್ಲೇ ಇಲ್ಲ. ನನ್ನ ತಂದೆ ನನಗೆ ಅಮಲು ಪುನರ್ವಸತಿ ಚಿಕಿತ್ಸೆ ನೀಡಲು ಅಮೇರಿಕಕ್ಕೆ ಕರೆದುಕೊಂಡು ಹೋದರು. ಅಲ್ಲಿ ಅವರು ಒಂದು ಪಟ್ಟಿ ಕೊಟ್ಟು ಇದರಲ್ಲಿ ಯಾವ್ಯಾವ ಅಮಲು ಪದಾರ್ಥ ತೆಗೆದುಕೊಂಡಿದ್ದಿ ಎಂದು ಟಿಕ್ ಮಾಡು ಎಂದರು. ನಾನು ಎಲ್ಲದಕ್ಕೂ ಟಿಕ್ ಮಾಡಿದೆ. ಏಕೆಂದರೆ ನಾನು ಅವೆಲ್ಲವನ್ನೂ ತೆಗೆದುಕೊಂಡಿದ್ದೆ ! ಅದನ್ನು ನೋಡಿ ಅಲ್ಲಿನ ವೈದ್ಯರು ಬೆಚ್ಚಿ ಬಿದ್ದರು. ನೀವು ಭಾರತದಲ್ಲಿ ಯಾವ ರೀತಿಯ ಆಹಾರ ಸೇವಿಸುತ್ತೀರಿ ? ಈತ ತೆಗೆದುಕೊಳ್ಳುವ ಡ್ರಗ್ ಗಳ ಪಟ್ಟಿ ನೋಡಿದರೆ ಈತ ಯಾವತ್ತೋ ಸತ್ತಿರಬೇಕಿತ್ತು ಎಂದರು "
" ಇನ್ನು ನಾನು ಡ್ರಗ್ಸ್ ಬಿಟ್ಟಿದ್ದು ಕುಟುಂಬಕ್ಕಾಗಿ ಅಲ್ಲ. ನನಗೆ ಅದನ್ನು ಬಿಡಬೇಕು ಎಂದು ಅನಿಸಿತು, ಬಿಟ್ಟು ಬಿಟ್ಟೆ. ಅದನ್ನು ಬಿಟ್ಟ ಮೇಲೆ ದೇಹದಲ್ಲಿ ಬಹಳ ಬದಲಾವಣೆಗಳು ಆಗುತ್ತವೆ. ಒಮ್ಮೊಮ್ಮೆ ಈಗ ಎಲ್ಲ ಸರಿಯಾಯಿತು , ಇನ್ನೊಂದು ಬಾರಿ ತೆಗೆದುಕೊಳ್ಳೋಣ ಎಂದು ಅನಿಸುತ್ತದೆ. ಆಗ ನಾವು ನಮ್ಮ ಮೇಲೆ ನಿಯಂತ್ರಣ ಸಾಧಿಸಬೇಕು. ನಾನು ಯುವಕರಿಗೆ ಹೇಳುವುದಿಷ್ಟೇ - ನೀವು ನಿಮ್ಮ ಬದುಕನ್ನು ಆನಂದದಿಂದ ಕಳೆಯಿರಿ , ನಿಮ್ಮ ಕೆಲಸವನ್ನು ಪ್ರೀತಿಸಿ, ಕುಟುಂಬವನ್ನು ಪ್ರೀತಿಸಿ . ಅದು ಕೊಕೇನ್ ಗಿಂತ ಒಳ್ಳೆಯದು !







