ಕಡಬ ಸರಕಾರಿ ಶಾಲೆಯ ಜಾಗ ಅತಿಕ್ರಮಣ: ವರ್ಷ ಕಳೆದರೂ ಕ್ರಮ ಕೈಗೊಳ್ಳದ ಅಧಿಕಾರಿಗಳು
ಶಾಲೆಯ ಜಾಗ ಅನ್ಯರ ಪಾಲಾಗುವ ಆತಂಕ ವ್ಯಕ್ತಪಡಿಸುತ್ತಿದ್ದಾರೆ ನಾಗರಿಕರು

ಕಡಬ, ಮೇ 7. ಇಲ್ಲಿನ ಕೋಡಿಂಬಾಳ ಗ್ರಾಮದ ಪನ್ಯ ಗುರಿಯಡ್ಕ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಸೇರಿದ ಜಮೀನು ಅತಿಕ್ರಮಣಗೊಂಡು ವರ್ಷ ಕಳೆದರೂ ಸಂಬಂಧಪಟ್ಟ ಇಲಾಖಾಧಿಕಾರಿಗಳು ತೆರವುಗೊಳಿಸದೆ ಇರುವುದರಿಂದ ಶಾಲಾ ಜಾಗ ಅನ್ಯರ ಪಾಲಾಗಲಿದೆ ಎಂದು ನಾಗರಿಕರು ಆತಂಕ ವ್ಯಕ್ತಪಡಿಸಿದ್ದಾರೆ.
ಕೋಡಿಂಬಾಳ ಗ್ರಾಮದ ಪನ್ಯದಲ್ಲಿ ಸರ್ವೆ ನಂ. 196/3 ರಲ್ಲಿ ಶಾಲೆಗೆ ಸೇರಿದ 60 ಸೆಂಟ್ಸ್ ಜಾಗ ಇದೆ. ಈ ಜಾಗದಲ್ಲಿ ಸುಮಾರು 9 ಜೋಪಡಿಗಳ ನಿರ್ಮಾಣವಾಗಿ ವರ್ಷವೇ ಕಳೆದಿದೆ. ಆದರೆ ಅದನ್ನು ತೆರವುಗೊಳಿಸಲು ಶಾಲೆಗೆ ಸಂಬಂಧಿಸಿದವರು ಯಾವುದೇ ಕ್ರಮ ಕೈಗೊಂಡಿಲ್ಲ. ಅದಕ್ಕೆ ಕಾರಣ ಅತಿಕ್ರಮಣ ಮಾಡಿದವರಿಗೆ ರಾಜಕೀಯ ಪಕ್ಷಗಳವರು ನೀಡುತ್ತಿರುವ ಬೆಂಬಲ. ಶಿಕ್ಷಣ ಇಲಾಖೆಯವರು ಹಾಗೂ ಕಂದಾಯ ಇಲಾಖೆಯವರು ಅತಿಕ್ರಮಣ ತೆರಮಗೊಳಿಸಲು ಮುಂದಾದಾಗಲೆಲ್ಲಾ ರಾಜಕೀಯ ಪುಡಾರಿಗಳು ಅದಕ್ಕೆ ತಡೆಯೊಡ್ಡಿದ್ದಾರೆ. ಕೆಲವು ಮಂದಿ ಮರಿ ರಾಜಕೀಯ ಪುಡಾರಿಗಳು ಜಾಗ ಅತಿಕ್ರಮಣ ಮಾಡಿ ಜೋಪಡಿ ನಿರ್ಮಿಸಿದ ಮಂದಿಯಿಂದ ಹಣ ಪಡೆದುಕೊಂಡು ಜಾಗಕ್ಕೆ ಹಕ್ಕುಪತ್ರ ಮಾಡಿಸಿಕೊಡುವುದಾಗಿ ಹೇಳಿದ ಬಗ್ಗೆಯೂ ಮಾಹಿತಿ ಇದೆ ಎನ್ನುತ್ತಾರೆ ಸ್ಥಳೀಯರು.
ಶಾಲೆಗೆ ಸೇರಿದ 60 ಸೆಂಟ್ಸ್ ಜಾಗದ ಪಕ್ಕದಲ್ಲಿ ಪನ್ಯ ಅಂಗನವಾಡಿ ಕೇಂದ್ರಕ್ಕೆ ಸೇರಿದ 10 ಸೆಂಟ್ಸ್ ಜಾಗವೂ ಇದೆ. ಅದು ಕೂಡ ಅತಿಕ್ರಮಣಗೊಂಡಿದೆ. ಸದ್ರಿ ಜಮೀನಿನಲ್ಲಿ ಸ್ತ್ರೀ ಶಕ್ತಿ ಸಂಘದ ಕಟ್ಟಡ ನಿರ್ಮಿಸುವ ಸಲುವಾಗಿ ಅತಿಕ್ರಮಣವನ್ನು ತೆರವು ಮಾಡಿಕೊಡಬೇಕೆಂದು ಕಂದಾಯ ಇಲಾಖೆಗೆ ಮಾಡಿಕೊಂಡ ಮನವಿಗೆ ಯಾವುದೇ ಸ್ಪಂದನೆ ಸಿಕ್ಕಿಲ್ಲ. ಒಟ್ಟಿನಲ್ಲಿ ಅಧಿಕಾರಿಗಳ ನಿರಾಸಕ್ತಿಯ ಪರಿಣಾಮವಾಗಿ ಹಿರಿಯರು ಶಾಲೆಗಾಗಿ ಕಾದಿರಿಸಿದ ಜಾಗಗಳು ಯಾರದೋ ಪಾಲಾಗುವ ಪರಿಸ್ಥಿತಿ ಎದುರಾಗಿದೆ.
ಈ ಜಮೀನನ್ನು ಪನ್ಯ ಗುರಿಯಡ್ಕ ಶಾಲೆಗೆ ಮಂಜೂರುಗೊಳಿಸಿ ಸುಮಾರು 30 ವರ್ಷಗಳಾಗಿದೆ. ಆದರೆ ಶಾಲೆಯವರ ಬೇಜವಾಬ್ದಾರಿಯಿಂದಾಗಿ ಅತಿಕ್ರಮಣಗೊಂಡಿದೆ. ಶಾಲೆಗೆ ಸೇರಿದ ಜಾಗವನ್ನು ಭದ್ರಪಡಿಸಿಕೊಳ್ಳುವುದು ಶಾಲೆಯವರ ಕರ್ತವ್ಯ. ಆ ಬಗ್ಗೆ ಯಾವುದೇ ಆಸಕ್ತಿ ವಹಿಸದೇ ಈಗ ಜಾಗ ಅತಿಕ್ರಮಣಗೊಂಡಾಗ ಅದನ್ನು ತೆರವುಗೊಳಿಸಿಕೊಡಬೇಕೆಂದು ಮನವಿ ಸಲ್ಲಿಸಿದ್ದಾರೆ. ಈ ಕುರಿತು ಗಡಿ ಗುರುತು ಮಾಡಿಕೊಡಲು ಸರ್ವೆ ವಿಭಾಗಕ್ಕೆ ಪತ್ರ ಬರೆಯಲಾಗಿದೆ. ಈ ಬಗ್ಗೆ ಶಿಕ್ಷಣ ಇಲಾಖಾಧಿಕಾರಿಯವರಿಗೂ ನೋಟಿಸ್ ಜಾರಿಗೊಳಿಸಿ ಅವರ ಸಮಕ್ಷಮದಲ್ಲಿ ಶೀಘ್ರದಲ್ಲಿ ಗಡಿ ಗುರುತು ಮಾಡಿಕೊಡಲಾಗುವುದು. ಅತಿಕ್ರಮಣವನ್ನು ತೆರವುಗೊಳಿಸಲು ಶಿಕ್ಷಣ ಇಲಾಖೆಗೆ ಸಹಕರಿಸಲಾಗುವುದು.
-ಬಿ.ಲಿಂಗಯ್ಯ, ಕಡಬ ತಹಶೀಲ್ದಾರ್
ಜಮೀನು ಶಾಲೆಯಿಂದ ಸ್ವಲ್ಪ ದೂರದಲ್ಲಿ ಇರುವುದರಿಂದ ಅತಿಕ್ರಮಣ ಆಗಿರುವುದು ಆರಂದಲ್ಲಿ ನಮ್ಮ ಗಮನಕ್ಕೆ ಬರಲಿಲ್ಲ. ಶಾಲೆಯ ಜಾಗವನ್ನು ಸಂರಕ್ಷಣೆ ಮಾಡಿಕೊಳ್ಳುವುದು ಇಲಾಖೆಯ ಜವಾಬ್ದಾರಿ. ಅದಕ್ಕೆ ಊರವರ ಹಾಗೂ ಜನಪ್ರತಿನಿಧಿಗಳ ಸಹಕಾರದ ಅಗತ್ಯವಿದೆ. ಅತಿಕ್ರಮಣವನ್ನು ತೆರವುಗೊಳಿಸಿಕೊಡುವಂತೆ ಕಂದಾಯ ಅಧಿಕಾರಿಗಳಿಗೆ ಮನವಿ ಮಾಡಲಾಗಿದೆ. ಕಡಬ ತಾಲೂಕು ಕೇಂದ್ರವಾಗಿ ಘೋಷಣೆಯಾಗಿರುವುದರಿಂದ ಇಲಾಖೆಗೆ ಜಮೀನಿನ ಅಗತ್ಯವಿದೆ. ಮುಂದಿನ ದಿನಗಳಲ್ಲಿ ಪ್ರೌಢಶಾಲೆ ಅಥವಾ ಶಿಕ್ಷಣ ಇಲಾಖೆಗೆ ಸಂಬಂಧಿಸಿದ ಕಟ್ಟಡಗಳ ನಿರ್ಮಾಣಕ್ಕೆ ಜಮೀನು ಬೇಕು. ಈ ಕುರಿತು ವಾರದೊಳಗೆ ಆಡಳಿತಾತ್ಮಕ ಕ್ರಮ ತೆಗೆದುಕೊಂಡು ಕಂದಾಯ ಇಲಾಖೆಯ ನೆರವಿನೊಂದಿಗೆ ಪೊಲೀಸ್ ರಕ್ಷಣೆಯಲ್ಲಿ ಅತಿಕ್ರಮಣ ತೆರವುಗೊಳಿಸಿ ನಮ್ಮ ಜಾಗವನ್ನು ಬೇಲಿ ಹಾಕಿ ಭದ್ರಪಡಿಸಿಕೊಳ್ಳುತ್ತೇವೆ.
-ಶಶಿಧರ ಜಿ.ಎಸ್., ಕ್ಷೇತ್ರ ಶಿಕ್ಷಣಾಧಿಕಾರಿ, ಪುತ್ತೂರು.
ಶಾಲಾಭಿವೃದ್ಧಿ ಸಮಿತಿಯಿಂದ ಅತಿಕ್ರಮಣ ತೆರವುಗೊಳಿಸಿಕೊಡುವಂತೆ ಕಂದಾಯ ಇಲಾಖೆ ಮತ್ತು ಶಿಕ್ಷಣ ಇಲಾಖೆಗೆ ಹಲವಾರು ಬಾರಿ ಪತ್ರ ಬರೆಯಲಾಗಿದೆ. ಕ್ಷೇತ್ರ ಶಿಕ್ಷಣಾಧಿಕಾರಿಯವರು ಅತಿಕ್ರಮಣ ತೆರವುಗೊಳಿಸಿಕೊಡುವಂತೆ ತಿಂಗಳ ಹಿಂದೆ ಕಡಬ ತಹಶೀಲ್ದಾರರಿಗೆ ಮನವಿ ಮಾಡಿಕೊಂಡಿದ್ದಾರೆ. ಪನ್ಯದಿಂದ ಕಡಬಕ್ಕೆ ಸುಮಾರು 5 ಕಿ.ಮೀ. ದೂರ ಇರುವುದರಿಂದ ಸ್ಥಳೀಯ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಪನ್ಯದಲ್ಲಿ ಪ್ರೌಢಶಾಲೆ ಆಗಬೇಕು ಎನ್ನುವುದು ನಮ್ಮ ಆಶಯ. ಅದಕ್ಕೆ ಸದ್ರಿ ಜಮೀನನ್ನು ಉಪಯೋಗಿಸಲು ಕಾದಿರಿಸಬೇಕು. ಶಾಲಾಭಿವೃದ್ಧಿ ಸಮಿತಿಯ ಸಬೆಯಲ್ಲಿ ಕೂಡ ಈ ಬಗ್ಗೆ ನಿರ್ಣಯ ಕೈಗೊಂಡು ಇಲಾಖಾಧಿಕಾರಿಗಳಿಗೆ ಸಲ್ಲಿಸಲಾಗಿದೆ. ಅತೀ ಶೀಘ್ರದಲ್ಲಿ ಅತಿಕ್ರಮಣ ತೆರವುಗೊಳಿಸಿ ಜಾಗವನ್ನು ಶಾಲೆಯ ಸುರ್ದಿಗೆ ಒಪ್ಪಿಸಬೇಕು ಎನ್ನುವುದು ಊರವರ ಆಗ್ರಹ.ಇಬ್ರಾಹಿಂ ಟಿ.ಎಚ್, ಅಧ್ಯಕ್ಷರು, ಶಾಲಾಭಿವೃದ್ಧಿ ಸಮಿತಿ ಪನ್ಯ







