ನರೇಶ್ ಶೆಣೈಗೆ ಮುಂದುವರಿದ ಶೋಧ; ಸ್ವಾಮೀಜಿಯ ಸಹಾಯಕ ವಶಕ್ಕೆ
ಆರ್‌ಟಿಐ ಬಾಳಿಗಾ ಕೊಲೆ ಪ್ರಕರಣ

ಮಂಗಳೂರು, ಮೇ 7: ಆರ್‌ಟಿಐ ಕಾರ್ಯಕರ್ತ ವಿನಾಯಕ ಪಾಂಡುರಂಗ ಬಾಳಿಗಾರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆಮರೆಸಿಕೊಂಡಿರುವ ‘ನಮೋ ಬ್ರಿಗೇಡ್’ನ ಸ್ಥಾಪಕಾಧ್ಯಕ್ಷ ನರೇಶ್ ಶೆಣೈಗಾಗಿ ಪೊಲೀಸರ ಶೋಧ ಕಾರ್ಯ ಮುಂದುವರಿದಿರುವಂತೆಯೇ ಆತನ ಆಪ್ತ ಹಾಗೂ ಸ್ವಾಮೀಜಿಯೊಬ್ಬರ ಸಹಾಯಕ ಎನ್ನಲಾದ ವಿಶ್ವನಾಥ ಭಟ್ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಮಾಹಿತಿ ಹಕ್ಕು ಕಾರ್ಯಕರ್ತ ವಿನಾಯಕ ಪಿ.ಬಾಳಿಗಾ ಅವರನ್ನು ದುಷ್ಕರ್ಮಿಗಳು ಮಾಹಿತಿ ಮಾರ್ಚ್ 21ರಂದು ಅವರ ನಿವಾಸದ ಬಳಿ ಹತ್ಯೆ ಮಾಡಿದ ಘಟನೆಯ ಬಳಿಕ ನರೇಶ್ ಶೆಣೈ ತಲೆಮರೆಸಿಕೊಂಡಿದ್ದರು. ಪ್ರಕರಣದಲ್ಲಿ ಪ್ರಮುಖ ಆರೋಪಿ ಎಂದು ಶಂಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಪೊಲೀಸರು ನರೇಶ್ ಶೆಣೈಯ ಶೋಧ ಕಾರ್ಯವನ್ನು ಮುಂದುವರಿಸಿದ್ದರೂ ಆತನನ್ನು ಪತ್ತೆ ಹಚ್ಚಲು ಈವರೆಗೂ ಸಾಧ್ಯವಾಗಿಲ್ಲ.
ಇದೀಗ ನರೇಶ್ ಶೆಣೈನ ಆಪ್ತ ಎನ್ನಲಾದ ಕೇರಳದ ಕೊಚ್ಚಿನ್ ಮೂಲದ ವಿಶ್ವನಾಥ ಭಟ್ ಎಂಬಾತನನ್ನು ಪೊಲೀಸರು ಕಾರ್ಕಳದಿಂದ ವಶಕ್ಕೆ ಪಡೆದಿದ್ದಾರೆ. ಈತ ನರೇಶ್ ಶೆಣೈಯೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾನೆ ಎನ್ನಲಾಗಿದ್ದು, ಈ ಹಿನ್ನೆಲೆಯಲ್ಲಿ ಪೊಲೀಸರು ನರೇಶ್ ಶೆಣೈಯ ಇರುವಿಕೆಯ ಬಗ್ಗೆ ಮಾಹಿತಿ ಕಲೆ ಹಾಕಲು ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ.
ಸ್ವಾಮೀಜಿಯೊಂದಿಗಿದ್ದ ವಿಶ್ವನಾಥ
ವಿಶ್ವನಾಥ ಭಟ್ ಗೌಡ ಸಾರಸ್ವತ ಬ್ರಾಹ್ಮಣ (ಜಿಎಸ್‌ಬಿ) ಸಮುದಾಯಕ್ಕೆ ಸೇರಿದ ಮಠಗಳಲ್ಲಿ ಒಂದಾಗಿರುವ ಕಾಶೀ ಮಠದ ಸ್ವಾಮೀಜಿಯಾಗಿರುವ ಸಂಯಮೀಂದ್ರ ಸ್ವಾಮೀಜಿಯ ಸಹಾಯಕ. ಸಂಯಮೀಂದ್ರ ಸ್ವಾಮೀಜಿ ಕಾರ್ಕಳಕ್ಕೆ ಆಗಮಿಸಿದ ಸಂದರ್ಭದಲ್ಲಿ ವಿಶ್ವನಾಥ ಭಟ್ ಕೂಡ ಅವರೊಂದಿಗಿದ್ದ. ಈ ಮಾಹಿತಿ ಪಡೆದ ಪೊಲೀಸರು ಕಾರ್ಕಳದಿಂದ ವಿಶ್ವನಾಥ ಭಟ್‌ನನ್ನು ವಶಕ್ಕೆ ಪಡೆದಿದ್ದಾರೆ ಎಂದು ಮೂಲಗಳು ತಿಳಿಸಿವೆ.
ವಿಶ್ವನಾಥ ಭಟ್ ನರೇಶ್ ಶೆಣೈನ ಸಂಪರ್ಕದಲ್ಲಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಲಭಿಸಿರುವ ಹಿನ್ನೆಲೆಯಲ್ಲಿ ವಿಶ್ವನಾಥ್ ಭಟ್‌ನನ್ನು ವಿಚಾರಣೆಗಾಗಿ ವಶಕ್ಕೆ ಪಡೆದಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.







