ಆಡುತ್ತಿರುವಾಗ ಕುಸಿದು ಬಿದ್ದು ಕ್ಯಾಮರೂನ್ ಫುಟ್ಬಾಲ್ ಆಟಗಾರ ಸಾವು

ಬುಚಾರೆಸ್ಟ್, ಮೇ 7: ಕ್ಯಾಮರೂನ್ ಫುಟ್ಬಾಲ್ ಆಟಗಾರನೊಬ್ಬ ಕ್ರೀಡಾಂಗಣದಲ್ಲಿ ಆಡುತ್ತಿರುವಾಗಲೇ ಕುಸಿದು ಬಿದ್ದು ಮೃತಪಟ್ಟ ಘಟನೆ ಶುಕ್ರವಾರ ನಡೆದಿದೆ.
26ರ ಹರೆಯದ ಪ್ಯಾಟ್ರಿಕ್ ಎಕೆಂಗ್ ಅವರು ರೊಮೇನಿಯನ್ ಲೀಗ್ ಪಂದ್ಯದಲ್ಲಿ ಡಿನಾಮೊ ಬುಚೆರೆಸ್ಟ್ ತಂಡದ ಪರ ಆಡುತ್ತಿರುವಾಗ ಈ ಘಟನೆ ನಡೆದಿದೆ. ಬುಚಾರೆಸ್ಟ್ ಮತ್ತು ವಿಟ್ರೊಲ್ ಕಾನ್ಸೆಂಟಾ ತಂಡಗಳ ನಡುವಿನ ಪಂದ್ಯದ 70ನೆ ನಿಮಿಷದಲ್ಲಿ ಈ ದುರ್ಘಟನೆ ಸಂಭವಿಸಿದೆ.
ಮಿಡ್‌ಫೀಲ್ಡರ್ ಪ್ಯಾಟ್ರಿಕ್ ಅವರು 63ನೆ ನಿಮಿಷದಲ್ಲಿ ಬದಲಿ ಆಟಗಾರನಾಗಿ ಕಣಕ್ಕಿಳಿದಿದ್ದರು. ಕ್ರೀಡಾಂಗಣ ಪ್ರವೇಶಿಸಿ ಏಳು ನಿಮಿಷ ಉರುಳುವಷ್ಟರಲ್ಲಿ ಅವರು ಕುಸಿದು ಬಿದ್ದರು. ತಕ್ಷಣ ಸಮೀಪದ ಆಸ್ಪತ್ರೆಗೆ ದಾಖಲಿಸಿದರೂ, ಚಿಕಿತ್ಸೆ ಫಲಕಾರಿಯಾಗಲಿಲ್ಲ. ತೀವ್ರ ಹೃದಯಾಘಾತದಿಂದ ಪ್ಯಾಟ್ರಿಕ್ ಸಾವನ್ನಪ್ಪಿರುವುದಾಗಿ ಅಧಿಕೃತ ಮೂಲಗಳು ತಿಳಿಸಿವೆ.
ಪ್ಯಾಟ್ರಿಕ್ ಕಳೆದ ಜನವರಿಯಲ್ಲಿ ಡಿನಾಮೊ ತಂಡವನ್ನು ಸೇರಿದ್ದರು. ಈಗಾಗಲೇ ಆರು ಪಂದ್ಯಗಳನ್ನು ಆಡಿದ್ದ ಪ್ಯಾಟ್ರಿಕ್ ಡಿನಾಮೊ ತಂಡದ ಪರ ಏಳನೆ ಪಂದ್ಯ ಆಡುತ್ತಿರುವಾಗ ಕುಸಿದು ಬಿದ್ದು ಮೃತಪಟ್ಟಿದ್ದಾರೆ. ಈ ಪಂದ್ಯದಲ್ಲಿ ಅವರ ತಂಡ 3-2 ಅಂತರದಲ್ಲಿ ಜಯ ಗಳಿಸಿದೆ.





