ಪ್ರೇಯಸಿಯ ಸಾವಿನಿಂದ ನೊಂದು ಸಮುದ್ರಕ್ಕೆ ಹಾರಿ ಪುನಃ ಆತ್ಮಹತ್ಯೆಗೆ ಯತ್ನಿಸಿದ ಯುವಕ
ಪ್ರೇಮಿಗಳಿಂದ ಆತ್ಮಹತ್ಯೆಗೆ ಯತ್ನ: ಯುವತಿ ಮೃತ್ಯು, ಯುವಕ ಗಂಭೀರ

ಭಟ್ಕಳ, ಮೇ 7: ತಾಲೂಕಿನ ಬೈಲೂರಿನ ಶೇರುಗಾರಕೇರಿಯ ನಿವಾಸಿಗಳಾದ ಪ್ರೇಮಿಗಳಿಬ್ಬರು ಗೇರು ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಶನಿವಾರ ಬೆಳಗ್ಗೆ ಬೈಲೂರಿನ ಗುಡ್ಡದ ಬಳಿ ಸಂಭವಿಸಿದೆ.
ತಾಲೂಕಿನ ಬೈಲೂರಿನ ಶೇರುಗಾರಕೇರಿಯ ನಿವಾಸಿಗಳಾದ ಅರುಣ ಕೇಶವ ನಾಯ್ಕ (24) ಮತ್ತು ಮಲ್ಲಿಕಾ ಮಂಜುನಾಥ ನಾಯ್ಕ (17) ಆತ್ಮಹತ್ಯೆಗೆ ಯತ್ನಿಸಿದ ಪ್ರೇಮಿಗಳು. ಘಟನೆಯಿಂದಾಗಿ ಯುವತಿ ಮಲ್ಲಿಕಾ ಸಾವನ್ನಪ್ಪಿದ್ದು, ಅರುಣ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಇವರಿಬ್ಬರೂ ಸಂಬಂಧಿಕರಾಗಿದ್ದು, ಹಲವಾರು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು ಎನ್ನಲಾಗಿದೆ. ಆದರೆ ತನ್ನ ಪ್ರಿಯತಮೆಯ ಸಾವಿನಿಂದ ಮನನೊಂದ ಯುವಕ ಬೈಲೂರಿನಲ್ಲಿ ಸಮುದ್ರಕ್ಕೆ ಹಾರಿ ಪುನಃ ಆತ್ಮಹತ್ಯೆಗೈಲೆತ್ನಿಸಿದ್ದು, ಸ್ಥಳೀಯರು ಆತನನ್ನು ರಕ್ಷಿಸಿ ಭಟ್ಕಳದ ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಪರಿಸ್ಥಿತಿ ಗಂಭೀರವಾಗಿರುವ ಹಿನ್ನೆಲೆಯಲ್ಲಿ ಯುವಕನನ್ನು ಹೆಚ್ಚಿನ ಚಿಕಿತ್ಸೆಗೆ ಮಣಿಪಾಲದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.
ಪ್ರೇಮಿಗಳಿಬ್ಬರೂ ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದರು ಎನ್ನಲಾಗಿದೆ. ಅರುಣ ಈ ಹಿಂದೆ ಬೈಲೂರಿನಲ್ಲಿ ಪೋಸ್ಟ್‌ಮೆನ್ ಆಗಿ ಕೆಲಸ ನಿರ್ವಹಿಸುತ್ತಿದ್ದು, ಕಳೆದ ಕೆಲವು ದಿನಗಳ ಹಿಂದೆಯಷ್ಟೆ ಪೋಸ್ಟ್‌ಮನ್‌ಹುದ್ದೆ ಬಿಟ್ಟು, ಊರಿನಲ್ಲಿಯೇ ಲೈನ್‌ಮೆನ್ ಉದ್ಯೋಗ ಮಾಡಿಕೊಂಡಿದ್ದ ಎನ್ನಲಾಗಿದೆ. ಯುವತಿ ಮಲ್ಲಿಕಾ ಎಸ್ಸೆಸ್ಸೆಲ್ಸಿ ಓದುತ್ತಿದ್ದಳು ಎನ್ನಲಾಗಿದೆ. ಯುವತಿಯ ಮೃತ ದೇಹವನ್ನು ಮುರ್ಡೇಶ್ವರದ ಆರ್.ಎನ್.ಶೆಟ್ಟಿ ಆಸ್ಪತ್ರೆಯಲ್ಲಿರಿಸಲಾಗಿದ್ದು, ಈ ಸಂಬಂಧ ಮುರ್ಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನೆಗೆ ಕಾರಣವೇನೆಂಬುದು ನಿಗೂಢವಾಗಿದ್ದು, ತನಿಖೆಯಿಂದಷ್ಟೇ ಆತ್ಮಹತ್ಯೆಗೆ ಕಾರಣ ತಿಳಿದು ಬರಬೇಕಾಗಿದೆ.







