ಮಂಗಳೂರು ನಗರದಲ್ಲಿ ಹೆಚ್ಚುತ್ತಿದೆ ವಾಯು ಮಾಲಿನ್ಯ: ಹದಗೆಡುತ್ತಿದೆ ಟ್ರಾಫಿಕ್ ಪೊಲೀಸರ ಆರೋಗ್ಯ
ಆ್ಯಂಟಿ ಪೊಲ್ಯುಶನ್ ಡ್ರೈವ್ ಸಂಸ್ಥೆ ನಡೆಸಿದ ಅಧ್ಯಯನದಲ್ಲಿ ಬಹಿರಂಗ

ಮಂಗಳೂರು, ಮೇ 7: ಆರ್ಥಿಕ ಚಟುವಟಿಕೆಯ ಫಲವಾಗಿ ವೇಗವಾಗಿ ಬೆಳೆಯುತ್ತಿರುವ ಮಂಗಳೂರು ನಗರದಲ್ಲಿ ಜನಸಂಖ್ಯೆ ಮತ್ತು ವಾಹನಗಳ ಸಂಖ್ಯೆಯೂ ಹೆಚ್ಚಾಗಿದೆ. ವಾಹನಗಳು ಉಗುಳುವ ವಿಷಕಾರಿ ಹೊಗೆಯ ಜೊತೆಗೆ ಧೂಳಿನಿಂದಾಗಿ ಸದಾ ರಸ್ತೆಯಲ್ಲಿ ಕರ್ತವ್ಯದಲ್ಲಿರುವ ಟ್ರಾಫಿಕ್ ಪೊಲೀಸರ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗುತ್ತಿದೆ ಎಂಬ ವಿಚಾರ ನಗರದ ಆ್ಯಂಟಿ ಪೊಲ್ಯುಶನ್ ಡ್ರೈವ್ (ಎಪಿಡಿ) ಸಂಸ್ಥೆ ನಡೆಸಿದ ಅಧ್ಯಯನದಲ್ಲಿ ಕಂಡುಬಂದಿದೆ.
ನಗರ ಪ್ರದೇಶದಲ್ಲಿ ವಾಹನದಿಂದ ಉತ್ಪತ್ತಿಯಾಗುವ ವಾಯು ಮಾಲಿನ್ಯವು ಪರಿಸರ ಮಾಲಿನ್ಯಕ್ಕೆ ಒಂದು ಮುಖ್ಯ ಕಾರಣ. ವಾಹನಗಳು ಉಗುಳುವ ವಿಷಕಾರಿ ಅನಿಲಗಳಾದ ಸಲ್ಫರ್, ನೈಟ್ರೋಜನ್ ಆಕ್ಸೈಡ್ ಮತ್ತು ಕಾರ್ಬನ್ ಮೋನೋ ಆಕ್ಸೈಡ್ ಮಾನವ ದೇಹದ ಮೇಲೆ ಪ್ರತಿಕೂಲ ಪರಿಣಾಮವನ್ನು ಬೀರುತ್ತಿರುವುದು ಅಧ್ಯಯನದಲ್ಲಿ ಗೊತ್ತಾಗಿದೆ.
ವಾಯು ಮಾಲಿನ್ಯದಿಂದಾಗಿ ಬಹುಮುಖ್ಯವಾಗಿ ಸಂಚಾರಿ ಪೊಲೀಸರು, ಶಾಲಾ-ಕಾಲೇಜುಗಳ ಮಕ್ಕಳು ಮತ್ತು ಜನರ ಆರೋಗ್ಯ ಹದಗೆಡುತ್ತಾ ಸಾಗಿದೆ. ಪ್ರತಿ ವರ್ಷ ಅಸ್ತಮಾದಿಂದ ಬಳಲುವ ಮಕ್ಕಳ ಸಂಖ್ಯೆಯು ಅಧಿಕವಾಗುತ್ತಾ ಸಾಗಿದೆ.
ಎಪಿಡಿ ಸಂಸ್ಥೆ ನಡೆಸಿದ ಅಧ್ಯಯನ ವರದಿ ಪ್ರಕಾರ ಹೆಚ್ಚಿನ ಸಂಖ್ಯೆಯಲ್ಲಿ ಸಂಚಾರಿ ಪೊಲೀಸರು ಮತ್ತು ಟ್ರಾಫಿಕ್ ವಿಭಾಗದಲ್ಲಿ ಕೆಲಸ ಮಾಡುವವರು ಶ್ವಾಸಕೋಶದ ತೊಂದರೆಯಿಂದ ಬಳಲುತ್ತಿರುತ್ತಾರೆ. ಐದು ವರ್ಷಕ್ಕಿಂತ ಕಡಿಮೆ ಅವಧಿ ಸಂಚಾರಿ ಸೇವೆಯಲ್ಲಿ ಇರುವ ಪೊಲೀಸರಲ್ಲಿ 22.3ಶೇ.ದಷ್ಟು ಶ್ವಾಸಕೋಶದ ತೊಂದರೆ ಇರುವುದು ಕಂಡುಬಂದಿದೆ. ಅಲ್ಲದೆ, ಐದು ವರ್ಷಕ್ಕಿಂತ ಹೆಚ್ಚಿನ ಕಾಲ ಪೊಲೀಸ್ ಸೇವೆಯಲ್ಲಿ ಇರುವವರು ಶ್ವಾಸಕೋಶದ ನಿಯಮಿತವಾದ ತಾಕತ್ತನ್ನು ಹೊಂದಿರುವುದು ಕಂಡುಬಂದಿದೆ.
ಮಂಗಳೂರಿನ ಯೆನೆಪೊಯ ಮೆಡಿಕಲ್ ಕಾಲೇಜಿನ ರೆಸ್ಪಿರೇಟರಿ ಮೆಡಿಸಿನ್ ವಿಭಾಗದ ಸಹಯೋಗದೊಂದಿಗೆ ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ಸಹಕಾರದೊಂದಿಗೆ ಸಮಾಜ ಸೇವೆಯಲ್ಲಿ ತೊಡಗಿರುವ ಆ್ಯಂಟಿ ಪೊಲ್ಯುಶನ್ ಡ್ರೈವ್ ಸಂಸ್ಥೆಯು ಈ ಅಧ್ಯಯನವನ್ನು ಕೈಗೊಂಡಿತ್ತು.
ಮಂಗಳೂರು ನಗರ ಸಂಚಾರ ಪೊಲೀಸ್ ವಿಭಾಗದ ಸಹಾಯಕ ಪೊಲೀಸ್ ಆಯುಕ್ತ ಉದಯ ನಾಯಕ್, ಆರೋಗ್ಯ ತಪಾಸಣೆಯಲ್ಲಿ ಭಾಗವಹಿಸಿದಲ್ಲದೆ ಸಂಚಾರ ವಿಭಾಗದ ಹಲವಾರು ಅಧಿಕಾರಿಗಳು ಮತ್ತು ಸಿಬ್ಬಂದಿ ಈ ಅಧ್ಯಯನ ಪ್ರಕ್ರಿಯೆಯಲ್ಲಿ ಭಾಗವಹಿಸಿ ಸಹಕರಿಸಿದ್ದರು. ನಗರದಲ್ಲಿ ಯಾವ ಗುಂಪಿನ ಜನರು ಅತ್ಯಧಿಕ ವಾಯು ಮಾಲಿನ್ಯದಿಂದ ಬಳಲುತ್ತಾರೆ ಎಂಬುದು ತಿಳಿಯುವುದು ಅಧ್ಯಯನದ ಮುಖ್ಯ ಉದ್ದೇಶ ಆಗಿತ್ತು.
ಸಹಜವಾಗಿ ಸಂಚಾರಿ ಪೊಲೀಸರು ವಾಯು ಮಾಲಿನ್ಯಕ್ಕೆ ಹೆಚ್ಚಾಗಿ ಬಲಿಯಾಗುವ ಗುಂಪು. ಅವರಿಗೆ ಶ್ವಾಸಕೋಶ ಸಂಬಂಧಿ ವೈದ್ಯಕೀಯ ಪರೀಕ್ಷೆ ನಡೆಸಿ ಅಂಕಿ ಅಂಶಗಳ ಸಂಗ್ರಹ ಅಧ್ಯಯನ ಮಹತ್ವದ ಭಾಗವಾಗಿತ್ತು. ಈ ಅಧ್ಯಯನದ ಫಲಿತಾಂಶವನ್ನು ಮಂಗಳೂರು ಪೊಲೀಸರ ಗಮನಕ್ಕೆ ತಂದು ಮಾಲಿನ್ಯ ನಿಯಂತ್ರಿಸಲು ಮಾಡಬಹುದಾದ ಕೆಲಸಗಳಲ್ಲಿ ಕೈಜೋಡಿಸುವುದು ಸಂಸ್ಥೆಯ ಗುರಿಯಾಗಿತ್ತು. ವಾಯುಮಾಲಿನ್ಯವನ್ನು ತಡೆಯುವ ಮೂಲಕ ಸಂಚಾರಿ ಪೊಲೀಸರಲ್ಲಿ ಶ್ವಾಸಕೋಶದ ತೊಂದರೆಯಿಂದ ಬಳಲುವವರ ಸಂಖ್ಯೆಯನ್ನು ನಿಯಂತ್ರಿಸಬಹುದು ಎಂದು ಆ್ಯಂಟಿ ಪೊಲ್ಯುಶನ್ ಡ್ರೈವ್‌ನ ಸ್ಥಾಪಕ ಅಬ್ದುಲ್ಲ ಎ. ರಹ್ಮಾನ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.







