ತನ್ನ ಭಾರತ ರಾಯಭಾರಿಯನ್ನು ವಾಪಸ್ ಕರೆಸಿಕೊಂಡ ನೇಪಾಳ
ರಾಯಭಾರಿ ವಿರುದ್ಧ 3 ಆರೋಪಗಳು

ಕಠ್ಮಂಡು, ಮೇ 7: ತನ್ನ ಭಾರತ ರಾಯಭಾರಿ ದೀಪ್ ಕುಮಾರ್ ಉಪಾಧ್ಯಾಯರನ್ನು ವಾಪಸ್ ಕರೆಸಿಕೊಳ್ಳಲು ನೇಪಾಳ ಸರಕಾರ ಇಂದು ನಿರ್ಧರಿಸಿದೆ. ಪ್ರತಿಪಕ್ಷ ನೇಪಾಳಿ ಕಾಂಗ್ರೆಸ್ ಕೋಟದಿಂದ ಕಳೆದ ವರ್ಷದ ಎಪ್ರಿಲ್‌ನಲ್ಲಿ ಅವರನ್ನು ಈ ಹುದ್ದೆಗೆ ನೇಮಿಸಲಾಗಿತ್ತು.
ಅವರು ರಾಷ್ಟ್ರೀಯ ಹಿತಾಸಕ್ತಿಗೆ ವಿರುದ್ಧವಾಗಿ ಕೆಲಸ ಮಾಡುತ್ತಿದ್ದಾರೆ ಎಂದು ನೇಪಾಳದ ಅಧಿಕಾರಿಗಳು ಶನಿವಾರ ಆರೋಪಿಸಿದ್ದಾರೆ.
ನೇಪಾಳ ಸರಕಾರವು ಅವರ ವಿರುದ್ಧ ಮೂರು ಆರೋಪಗಳನ್ನು ಹೊರಿಸಿದೆ.
‘‘ರಾಯಭಾರಿಗಳು ಸರಕಾರದ ನಿರ್ದೇಶನಗಳನ್ನು ಪಾಲಿಸಬೇಕು ಹಾಗೂ ರಾಜತಾಂತ್ರಿಕ ಶಿಷ್ಟಾಚಾರವನ್ನು ಕಾಪಾಡಿಕೊಂಡು ಬರಬೇಕು’’ ಎಂದು ರಕ್ಷಣಾ ಸಚಿವ ಭೀಮ್ ರಾವಲ್ ಕಠ್ಮಂಡುವಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಹೇಳಿದರು.
ಶುಕ್ರವಾರ ತಡರಾತ್ರಿ ನಡೆದ ಬೆಳವಣಿಗೆಯೊಂದರಲ್ಲಿ, ಅಸಹಕಾರ ಮತ್ತು ಸರಕಾರ-ವಿರೋಧಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡ ಆರೋಪಗಳಲ್ಲಿ ನೇಪಾಳವು ಉಪಾಧ್ಯಾಯರನ್ನು ಹಿಂದಕ್ಕೆ ಕರೆಸಿಕೊಂಡಿತ್ತು.
ನೇಪಾಳದ ಅಧ್ಯಕ್ಷೆ ಬಿದ್ಯಾ ದೇವಿ ಭಂಡಾರಿಯ ನಿಗದಿತ ಭಾರತ ಭೇಟಿ ರದ್ದಾದ ಬಳಿಕ ಈ ಬೆಳವಣಿಗೆ ನಡೆದಿದೆ. ಪ್ರಧಾನಿ ಕೆ.ಪಿ. ಶರ್ಮ ಒಲಿ ಸರಕಾರವನ್ನು ಉರುಳಿಸುವುದಾಗಿ ಮಾವೊವಾದಿ ಪಕ್ಷ ಹಾಕಿದ ಬೆದರಿಕೆಯನ್ನು ಪ್ರತಿಪಕ್ಷ ನೇಪಾಳಿ ಕಾಂಗ್ರೆಸ್ ಸಮರ್ಥಿಸುತ್ತಿದೆ ಹಾಗೂ ಭಾರತಕ್ಕೆ ನೇಪಾಳದ ರಾಯಭಾರಿ ಪಕ್ಷದ ನಿಲುವನ್ನೇ ಬೆಂಬಲಿಸುತ್ತಿದ್ದಾರೆ ಎಂದು ಸರಕಾರ ಆರೋಪಿಸಿದೆ.
ಸರಕಾರ ಉರುಳಿಸುವ ಸಂಚಿನಲ್ಲಿ ಉಪಾಧ್ಯಾಯ ಶಾಮೀಲಾಗಿದ್ದಾರೆ, ಸರಕಾರಕ್ಕೆ ತಿಳಿಸದೆ ತನ್ನ ಕಾರ್ಯವ್ಯಾಪ್ತಿಯನ್ನು ಮೀರುತ್ತಿದ್ದಾರೆ ಹಾಗೂ ನೇಪಾಳಕ್ಕೆ ಭಾರತದ ರಾಯಭಾರಿ ರಂಜಿತ್ ರೇ ಜೊತೆಗೂಡಿ ಪಶ್ಚಿಮ ನೇಪಾಳದ ಕೆಲವು ಜಿಲ್ಲೆಗಳಿಗೆ ಭೇಟಿ ಕೊಡುತ್ತಿದ್ದಾರೆ ಎಂಬ ಆರೋಪಗಳನ್ನು ಸರಕಾರ ಅವರ ವಿರುದ್ಧ ಮಾಡಿದೆ.
ಅಧ್ಯಕ್ಷೆ ಬಿದ್ಯಾ ದೇವಿ ಭಂಡಾರಿಯ ಭಾರತ ಭೇಟಿ ರದ್ದಾಗಿರುವುದಕ್ಕೂ, ಭಾರತದಿಂದ ನೇಪಾಳ ರಾಯಭಾರಿಯನ್ನು ವಾಪಸ್ ಕರೆಸಿಕೊಂಡಿರುವುದಕ್ಕೂ ಯಾವುದೇ ಸಂಬಂಧವಿಲ್ಲ ಎಂದು ರಕ್ಷಣಾ ಸಚಿವ ರಾವಲ್ ಹೇಳಿದರು.
ಅಧ್ಯಕ್ಷೆಗೆ ದೇಶದಲ್ಲಿ ಕೆಲವು ತುರ್ತು ಕಾರ್ಯಗಳಿದ್ದವು, ಅವರು ಸೋಮವಾರ ಸಂಸತ್ತಿನಲ್ಲಿ ಸರಕಾರದ ಧೋರಣಾ ದಾಖಲೆಗಳನ್ನು ಘೋಷಿಸಬೇಕಾಗಿತ್ತು, ಹಾಗಾಗಿ ಅವರ ಭಾರತ ಭೇಟಿ ರದ್ದಾಯಿತು ಎಂದು ಅವರು ಹೇಳಿಕೊಂಡರು.







