ಮಂಗಳೂರು-ಮೂಡುಬಿದಿರೆ ರಸ್ತೆ ಅಗಲೀಕರಣದ ಅಲೈನ್‌ಮೆಂಟ್ ವಿರೋಧಿಸಿ ಭೂ ಮಾಲಕರಿಂದ ರಸ್ತೆ ತಡೆ

ಮಂಗಳೂರು, ಮೇ7: ರಾಷ್ಟ್ರೀಯ ಹೆದ್ದಾರಿ 169 ರಲ್ಲಿ ಮಂಗಳೂರು ಮತ್ತು ಮೂಡುಬಿದಿರೆ ರಸ್ತೆ ಅಗಲೀಕರಣದ ಅಲೈನ್‌ಮೆಂಟ್ ವಿರುದ್ಧ ಇಂದು ನಗರದ ಬಿಕರ್ನಕಟ್ಟೆ ಕೈಕಂಬದ ಪ್ಲೈಓವರ್ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ರಸ್ತೆ ತಡೆ ನಡೆಸಿ ಭೂಮಾಲಕರು ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಮನಪಾ ಸದಸ್ಯೆ ಮರಿಯಮ್ಮ ಥಾಮಸ್, ರಾಷ್ಟ್ರೀಯ ಹೆದ್ದಾರಿಗೆ 30 ಮೀಟರ್ ಭೂ ಸ್ವಾಧೀನ ಮಾಡಬೇಕಾಗಿದ್ದರೂ ಇಲ್ಲಿ 45 ಮೀಟರ್‌ನಲ್ಲಿ ಭೂಸ್ವಾಧೀನ ಮಾಡುತ್ತಿದ್ದಾರೆ. ನಮ್ಮ ತೆರಿಗೆ ಹಣವನ್ನು ಖರ್ಚು ಮಾಡಲು ಈ ರೀತಿಯ ಭೂಸ್ವಾಧೀನ ನಡೆಸಲಾಗುತ್ತಿದೆ. ನಾವು ರಸ್ತೆಯ ಇಕ್ಕೆಲಗಳಲ್ಲಿ 15 ಮೀಟರ್ ಭೂಮಿಯನ್ನು ಬಿಡಲು ತಯಾರಿದ್ದು 30 ಮೀಟರ್‌ಗಿಂತ ಹೆಚ್ಚು ಭೂಮಿಯನ್ನು ಯಾವುದೇ ಕಾರಣಕ್ಕೂ ಬಿಟ್ಟುಕೊಡುವುದಿಲ್ಲ. ಉಪವಾಸ ಸತ್ಯಾಗ್ರಹ ಮಾಡಿ ಸಾಯಲು ಸಿದ್ದ ಎಂದು ಹೇಳಿದರು.
ಪ್ರತಿಭಟನೆಯಲ್ಲಿ ಮನಪಾ ಸದಸ್ಯ ಭಾಸ್ಕರ್ ಕೆ., ಸ್ಥಳೀಯರಾದ ಪ್ರಕಾಶ್‌ಚಂದ್ರ, ಸತ್ಯಜಿತ್, ನತಾಲಿಯಾ ಡಿಸೋಜ, ರಾಘವೇಂದ್ರ ಕಿಣಿ, ಕಿರಣ್ ಕ್ಯಾಸ್ಟಲಿನೋ ಮೊದಲಾದವರು ಉಪಸ್ಥಿತರಿದ್ದರು.





