10 ಜನರ ವಿರುದ್ಧ ಆರೋಪಪಟ್ಟಿ ಸಲ್ಲಿಕೆ
ಬಿಜೆಪಿ ನಾಯಕರ ಜೋಡಿಹತ್ಯೆ ಪ್ರಕರಣ

ಅಹ್ಮದಾಬಾದ್,ಮೇ 7: ಭರೂಚ್‌ನಲ್ಲಿ ಕಳೆದ ವರ್ಷದ ನ.2ರಂದು ನಡೆದಿದ್ದ ಬಿಜೆಪಿ ನಾಯಕರ ಜೋಡಿ ಹತ್ಯೆ ಪ್ರಕರಣದಲ್ಲಿ 10 ಆರೋಪಿಗಳ ವಿರುದ್ಧ ಆರೋಪಪಟ್ಟಿಯನ್ನು ಎನ್‌ಐಎ ಶನಿವಾರ ಇಲ್ಲಿಯ ವಿಶೇಷ ಎನ್‌ಐಎ ನ್ಯಾಯಾಲಯದಲ್ಲಿ ಸಲ್ಲಿಸಿದೆ. ಪಾಕಿಸ್ತಾನ ಮತ್ತು ದಕ್ಷಿಣ ಆಫ್ರಿಕಾಗಳಲ್ಲಿರುವ ಸಹ ಆರೋಪಿಗಳ ಶಾಮೀಲಾತಿಯೊಂದಿಗೆ ರೂಪುಗೊಂಡಿದ್ದ ಸಂಚಿನ ಭಾಗವಾಗಿ ಈ ಹತ್ಯೆಗಳು ನಡೆದಿವೆ. ಸಮಾಜದ ನಿರ್ದಿಷ್ಟ ವರ್ಗವೊಂದಕ್ಕೆ ಸೇರಿದ ಜನರ ಮನಸ್ಸಿನಲ್ಲಿ ಭೀತಿಯನ್ನು ಹುಟ್ಟುಹಾಕುವುದು ಈ ಸಂಚಿನ ಉದ್ದೇಶವಾಗಿತ್ತು ಎಂದು ಅದು ಪ್ರತಿಪಾದಿಸಿದೆ.
ಇನ್ನಿಬ್ಬರು ಆರೋಪಿಗಳ ವಿರುದ್ಧ ನಂತರ ಆರೋಪ ಪಟ್ಟಿಯನ್ನು ಸಲ್ಲಿಸಲಾಗುವದು ಎಂದು ಅದು ನ್ಯಾಯಾಲಯದಲ್ಲಿ ನಿವೇದಿಸಿಕೊಂಡಿತು.
1993ರ ಮುಂಬೈ 2002ರ ಗುಜರಾತ್ ಕೋಮು ಗಲಭೆಗಳ ಪ್ರತೀಕಾರವಾಗಿ ಈ ಇಬ್ಬರು ಬಿಜೆಪಿ ನಾಯಕರ ಹತ್ಯೆಗೆ ತಲೆಮರೆಸಿಕೊಂಡಿರುವ ಭೂಗತ ಲೋಕದ ಪಾತಕಿ ಜಾವೇದ್ ಚಿಕ್ಣಾ ಸುಪಾರಿ ನೀಡಿದ್ದ ಎಂದು ಎನ್‌ಐಎ ಆರೋಪಪಟ್ಟಿಯಲ್ಲಿ ತಿಳಿಸಿದೆ.
ಭರೂಚ್‌ನ ಮಾಜಿ ಬಿಜೆಪಿ ಅಧ್ಯಕ್ಷ ಹಾಗೂ ಹಿರಿಯ ಆರೆಸ್ಸೆಸ್ ಸದಸ್ಯಶಿರೀಷ್ ಬಂಗಾಲಿ ಮತ್ತು ಯುವಮೋರ್ಚಾ ಪ್ರ.ಕಾರ್ಯದರ್ಶಿ ಪ್ರಜ್ಞೇಶ ಮಿಸ್ತ್ರಿ ಅವರನ್ನು ಇಬ್ಬರು ಅಪರಿಚಿತ ದುಷ್ಕರ್ಮಿಗಳು ಗುಂಡಿಟ್ಟು ಹತ್ಯೆಗೈದಿದ್ದರು.







