ಬರ ಪರಿಹಾರಕ್ಕೆ 12,272 ಕೋಟಿ ರೂ.ಅನುದಾನ ಕೋರಿ ಕೇಂದ್ರಕ್ಕೆ ಮನವಿ: ಮುಖ್ಯಮಂತ್ರಿ

ಬೆಂಗಳೂರು/ಹೊಸದಿಲ್ಲಿ, ಮೇ 7: ರಾಜ್ಯದಲ್ಲಿ ಅನುಷ್ಠಾನದಲ್ಲಿರುವ ಬರಪರಿಹಾರ ಕಾಮಗಾರಿಗಳಿಗೆ ಹೆಚ್ಚುವರಿ ನೆರವು ಹಾಗೂ ಪ್ರಸ್ತಾಪಿತ ಬರಪರಿಹಾರ ಯೋಜನೆಗಳಿಗೆ ವಿಶೇಷ ನೆರವಿನ ರೂಪದಲ್ಲಿ 12,272 ಕೋಟಿ ರೂ.ನೀಡಬೇಕೆಂದು ಕೇಂದ್ರ ಸರಕಾರವನ್ನು ಕೋರಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಶನಿವಾರ ಹೊಸದಿಲ್ಲಿಯಲ್ಲಿ ಪ್ರಧಾನಮಂತ್ರಿ ನರೇಂದ್ರಮೋದಿಯೊಂದಿಗೆ ರಾಜ್ಯದ ಬರಗಾಲದ ಸ್ಥಿತಿಗತಿ ಕುರಿತು ನಡೆದ ಸಭೆಯ ಬಳಿಕ ಕರ್ನಾಟಕ ಭವನದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು.
ರಾಜಸ್ಥಾನ ಹೊರತು ಪಡಿಸಿದರೆ ಕರ್ನಾಟಕದಲ್ಲಿ ಅತಿ ಹೆಚ್ಚು ಬರಪೀಡಿತ ಪ್ರದೇಶಗಳಿವೆ. 5 ವರ್ಷಗಳಿಂದ ರಾಜ್ಯ ಸತತವಾಗಿ ಬರಗಾಲಕ್ಕೆ ತುತ್ತಾಗಿದೆ. ರಾಜ್ಯದ 27 ಜಿಲ್ಲೆಗಳು, 136 ತಾಲೂಕುಗಳನ್ನು ಮುಂಗಾರು ಮತ್ತು ಹಿಂಗಾರು ಹಂಗಾಮಿನಲ್ಲಿ ಬರಪೀಡಿತ ತಾಲೂಕುಗಳೆಂದು ಘೋಷಿಸಲಾಗಿದೆ ಎಂದು ಅವರು ಹೇಳಿದರು.
ರಾಜ್ಯ ಸರಕಾರವು ಬರಪರಿಸ್ಥಿತಿಯನ್ನು ಎದುರಿಸಲು ಹಲವಾರು ಅಲ್ಪಕಾಲಿನ ಮತ್ತು ದೀರ್ಘಕಾಲೀನ ಯೋಜನೆಗಳನ್ನು ಅನುಷ್ಠಾನಕ್ಕೆ ತಂದಿದೆ. ಈ ಎಲ್ಲ ಬರಪರಿಹಾರ ಕಾಮಗಾರಿಗಳನ್ನು ಕಾರ್ಯಗತಗೊಳಿಸಲು ಕೇಂದ್ರ ಸರಕಾರದಿಂದ ಹೆಚ್ಚಿನ ನೆರವು ಅಗತ್ಯ ಎಂದು ಪ್ರಧಾನಿಗೆ ಮನವರಿಕೆ ಮಾಡಿಕೊಟ್ಟಿದ್ದೇವೆ ಎಂದು ಸಿದ್ದರಾಮಯ್ಯ ಹೇಳಿದರು.
ಮುಂಗಾರಿನಲ್ಲಿ ಶೇ.32ರಷ್ಟು ಮಳೆ ಕೊರತೆಯುಂಟಾಗಿ 15,635 ಕೋಟಿ ರೂ.ಬೆಳೆನಷ್ಟ ಸಂಭವಿಸಿದೆ. ಎನ್‌ಡಿಆರ್‌ಎಫ್ ನಿಯಮಾವಳಿ ಪ್ರಕಾರ 3,830 ಕೋಟಿ ರೂ.ನೀಡುವಂತೆ ಕೇಂದ್ರಕ್ಕೆ ಮನವಿ ಸಲ್ಲಿಸಲಾಗಿತ್ತು. ಆದರೆ, ಕೇವಲ 1,540 ಕೋಟಿ ರೂ.ಬಿಡುಗಡೆ ಮಾಡಲಾಗಿದೆ ಎಂಬುದನ್ನು ಪ್ರಧಾನಿಯ ಗಮನಕ್ಕೆ ತರಲಾಗಿದೆ ಎಂದು ಅವರು ತಿಳಿಸಿದರು. ಹಿಂಗಾರಿನಲ್ಲಿ 22.33 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಕೃಷಿ ಬೆಳೆಗಳು ಹಾನಿಯಾಗಿದ್ದು, 6,733 ಕೋಟಿ ರೂ.ನಷ್ಟ ಸಂಭವಿಸಿದೆ. ಈ ಹಿನ್ನೆಲೆಯಲ್ಲಿ 1,417 ಕೋಟಿ ರೂ. ನೆರವು ನೀಡುವಂತೆ ಮನವಿ ಸಲ್ಲಿಸಲಾಗಿದೆ. ಕೇಂದ್ರ ಗೃಹ ಸಚಿವರ ಅಧ್ಯಕ್ಷತೆಯ ಸಮಿತಿಯು ಎನ್‌ಡಿಆರ್‌ಎಫ್‌ನಡಿ 723 ಕೋಟಿ ರೂ.ಅನುದಾನಕ್ಕೆ ಮಂಜೂರಾತಿ ನೀಡಬೇಕಾಗಿದ್ದು, ಇನ್ನೂ ಬಿಡುಗಡೆಯಾಗಿಲ್ಲ ಎಂದು ಮುಖ್ಯಮಂತ್ರಿ ಹೇಳಿದರು.
ಕುಡಿಯುವ ನೀರು, ಮೇವು, ಉದ್ಯೋಗಖಾತರಿ, ಪೌಷ್ಠಿಕಾಂಶ, ಜಲಸಂವರ್ಧನೆ, ಸಾಲಸೌಲಭ್ಯಕ್ಕೆ ಸಂಬಂಧಿಸಿದಂತೆ ರಾಜ್ಯ ಸರಕಾರ ಕೈಗೊಂಡಿರುವ ಕ್ರಮಗಳ ಕುರಿತು ಪ್ರಧಾನಮಂತ್ರಿಗೆ ಮಾಹಿತಿ ಒದಗಿಸಲಾಗಿದ್ದು, ಎಲ್ಲ ವಿಚಾರಗಳನ್ನು ಅವರು ಆಲಿಸಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದರು.
ಮಹದಾಯಿ ವಿಚಾರ: ಮಹದಾಯಿ ವಿವಾದವನ್ನು ನ್ಯಾಯಾಧೀಕರಣದ ಹೊರಗೆ ತಮ್ಮ ಮಧ್ಯಸ್ಥಿಕೆಯಲ್ಲಿ ಬಗೆಹರಿಸುವಂತೆ ಪ್ರಧಾನಿಗೆ ಮನವಿ ಸಲ್ಲಿಸಲಾಗಿದೆ. ಈ ಸಂಬಂಧ ವಿಧಾನಸಭೆಯಲ್ಲಿ ನಿರ್ಣಯ ಅಂಗೀಕರಿಸಿರುವ ಕುರಿತು ಅವರಿಗೆ ಮಾಹಿತಿ ನೀಡಿದ್ದೇನೆ ಎಂದು ಮುಖ್ಯಮಂತ್ರಿ ತಿಳಿಸಿದರು.
ಪ್ರಧಾನಮಂತ್ರಿ ಬರಪೀಡಿತ ರಾಜ್ಯಗಳ ವಾಸ್ತವ ಪರಿಸ್ಥಿತಿ ತಿಳಿದುಕೊಳ್ಳುವ ನಿಟ್ಟಿನಲ್ಲಿ ಸಭೆ ಕರೆದದ್ದು ಒಳ್ಳೆಯ ಬೆಳವಣಿಗೆ. ಕೇಂದ್ರಕ್ಕೆ ರಾಜ್ಯದಿಂದ ಹೆಚ್ಚಿನ ನೆರವು ಸಿಗಬಹುದು ಎಂಬ ನಿರೀಕ್ಷೆಯಿದೆ ಎಂದು ಸಿದ್ದರಾಮಯ್ಯ ಹೇಳಿದರು.
ಸಂಪುಟ ಪುನರ್ರಚನೆಗೆ ಬ್ರೇಕ್?: ರಾಜ್ಯದಲ್ಲಿ ತೀವ್ರ ಬರಗಾಲವಿರುವುದರಿಂದ ಮಳೆಗಾಗಿ ನಾವೆಲ್ಲಾ ಪ್ರಾರ್ಥಿಸುತ್ತಿದ್ದೇವೆ. ನಿನ್ನೆ ಒಂದೆರೆಡು ಜಿಲ್ಲೆಗಳಲ್ಲಿ ಮಳೆ ಬಂದಿದೆ. ಇನ್ನುಳಿದ ಜಿಲ್ಲೆಗಳಲ್ಲೂ ಮಳೆ ಬರಲಿ. ಆನಂತರ ಸಚಿವ ಸಂಪುಟ ಪುನರ್ರಚನೆ ಬಗ್ಗೆ ಚರ್ಚೆ ಮಾಡೋಣ ಎಂದು ಮುಖ್ಯಮಂತ್ರಿ ತಿಳಿಸಿದರು.
ರಾಜ್ಯ ಸರಕಾರವು ಮೂರು ವರ್ಷ ಪೂರೈಸುತ್ತಿರುವ ಹಿನ್ನೆಲೆಯಲ್ಲಿ ಆಯೋಜಿಸಲು ಉದ್ದೇಶಿಸಲಾಗಿದ್ದ ಸಾಧನಾ ಸಮಾವೇಶವನ್ನು ಬರಪರಿಸ್ಥಿತಿಯ ಹಿನ್ನೆಲೆಯಲ್ಲಿ ರದ್ದುಗೊಳಿಸಲಾಗಿದೆ ಎಂದು ಮುಖ್ಯಮಂತ್ರಿ ತಿಳಿಸಿದರು.
ಸಂಸದರ ಸಭೆ: ರಾಜ್ಯದಲ್ಲಿನ ಎಲ್ಲ ಅಭಿವೃದ್ಧಿ ವಿಚಾರಗಳ ಬಗ್ಗೆ ಚರ್ಚೆ ನಡೆಸಲು ಮೇ 11ರಂದು ಹೊಸದಿಲ್ಲಿಯ ಕರ್ನಾಟಕ ಭವನದಲ್ಲಿ ಎಲ್ಲ ಸಂಸದರ ಸಭೆಯನ್ನು ಕರೆಯಲಾಗಿದೆ ಎಂದು ಸಿದ್ದರಾಮಯ್ಯ ಹೇಳಿದರು.
ಪ್ರಧಾನಮಂತ್ರಿಯೊಂದಿಗೆ ನಡೆದ ಸಭೆಯಲ್ಲಿ ರಾಜ್ಯ ಸರಕಾರದ ಮುಖ್ಯಕಾರ್ಯದರ್ಶಿ ಅರವಿಂದ್‌ಜಾಧವ್, ಅಭಿವೃದ್ಧಿ ಆಯುಕ್ತೆ ಹಾಗೂ ಹೆಚ್ಚುವರಿ ಮುಖ್ಯಕಾರ್ಯದರ್ಶಿ ಲತಾ ಕೃಷ್ಣರಾವ್, ಮುಖ್ಯಮಂತ್ರಿಯ ಪ್ರಧಾನಕಾರ್ಯದರ್ಶಿ ಅತೀಖ್, ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ(ವಿಪತ್ತು ಮತ್ತು ನಿರ್ವಹಣೆ) ಸೇರಿದಂತೆ ರಾಜ್ಯ ಹಾಗೂ ಕೇಂದ್ರ ಸರಕಾರದ ಅಧಿಕಾರಿಗಳು ಉಪಸ್ಥಿತರಿದ್ದರು.







