ಸೌದಿ ಸರಕಾರದಲ್ಲಿ ಭಾರೀ ಬದಲಾವಣೆ !
.jpg)
ರಿಯಾದ್ , ಮೇ 7 : ಸೌದಿ ರಾಜಕೀಯದಲ್ಲಿ ದೊಡ್ಡ ಬೆಳವಣಿಗೆಯೊಂದು ಹಠಾತ್ತನೆ ನಡೆದಿದೆ. ಕಳೆದ ಎರಡು ದಶಕಗಳಿಂದಲೂ ಸೌದಿಯ ತೈಲ ಖಾತೆ ಸಚಿವರಾಗಿ ಇಡೀ ತೈಲ ದೇಶಗಳ ಗುಂಪಿನಲ್ಲೇ ಅತ್ಯಂತ ಪ್ರಭಾವಿ ಸಚಿವರಾಗಿದ್ದ ಅಲಿ ಅಲ್ ನೈಮಿ ಅವರನ್ನು ದೇಶದ ದೊರೆ ಸಲ್ಮಾನ್ ವಜಾಗೊಳಿಸಿದ್ದಾರೆ.
ದೇಶದ ತೈಲ ಆದಾಯದಲ್ಲಿ ತೀವ್ರ ಇಳಿಮುಖವಾಗುತ್ತಿರುವ ಹಾಗು ಆರ್ಥಿಕತೆಗೆ ಪರ್ಯಾಯ ರೂಪ ನೀಡುವ ವಿಶನ್ ೨೦೩೦ ಯೋಜನೆ ಅನಾವರಣಗೊಂಡ ಸಂದರ್ಭದಲ್ಲೇ ತೈಲ ಸಚಿವರನ್ನು ಬದಲಾಯಿಸಲಾಗಿದೆ. ದೊರೆ ಸಲ್ಮಾನ್ ಅವರ ಪುತ್ರ ಯುವರಾಜ್ ಮೊಹಮ್ಮದ್ ಅವರು ಆರ್ಥಿಕ ವಿಷಯಗಳ ಉಸ್ತುವಾರಿ ಹೊತ್ತುಕೊಂಡ ಬಳಿಕ ಪ್ರಭಾವ ಕಡಿಮೆಯಾಗಿದ್ದ ಅಲಿ ಅಲ್ ನೈಮಿ ಅವರು ಇದೀಗ ಸಂಪುಟದಿಂದಲೇ ಹೊರಬಿದ್ದಿದ್ದಾರೆ.
ಈ ಹಿಂದೆ ಆರೋಗ್ಯ ಸಚಿವರಾಗಿದ್ದ ಖಾಲಿದ್ ಅಲ್ ಫ಼ತೆ ಅವರು ನೂತನ ತೈಲ ಸಚಿವರಾಗಿದ್ದಾರೆ. ಅವರಿಗೆ ಇಂಧನ, ಕೈಗಾರಿಕೆ ಹಾಗು ಖನಿಜ ಸಂಪನ್ಮೂಲ ಖಾತೆಗಳ ಜವಾಬ್ದಾರಿಯೂ ಇದೆ.
ಪದಚ್ಯುತ ಅಲಿ ಅಲ್ ನೈಮಿ ಅವರನ್ನು ದೊರೆಯ ಸಲಹೆಗಾರರಾಗಿ ನೇಮಿಸಲಾಗಿದೆ. ಇದೇ ರೀತಿ ಇತರ ಹಲವು ಖಾತೆಗಳಿಗೆ ಹೊಸಬರನ್ನು ತರಲಾಗಿದೆ. ಕೆಲವು ಖಾತೆಗಳನ್ನು ಬರ್ಖಾಸ್ತುಗೊಲಿಸಿದ್ದು ಇನ್ನು ಕೆಲವು ಖಾತೆಗಳ ಹೆಸರು ಬದಲಾಯಿಸಲಾಗಿದೆ. ದೇಶದ ಬ್ಯಾಂಕಿಂಗ್, ಶಿಕ್ಷಣ ಮತ್ತಿತರ ಕ್ಷೇತ್ರಗಳ ಪ್ರಮುಖ ಸಂಸ್ಥೆಗಳಿಗೂ ಹೊಸಬರನ್ನು ನೇಮಿಸಲಾಗಿದೆ.







