ಕೆಳಸ್ತರದ ಜನರನ್ನು ಗೌರವಿಸುವುದೇ ಬಸವಣ್ಣನವರಿಗೆ ನಾವು ನೀಡುವ ಗೌರವ: ಜಿಲ್ಲಾಧಿಕಾರಿ ಮೀರ್ ಅನೀಸ್ ಅಹ್ಮದ್
ಕಾಯಕ ದಿನಾಚರಣೆ ಪ್ರಯುಕ್ತ ಪೌರ ಕಾರ್ಮಿಕರಿಗೆ ಸನ್ಮಾನ
ಕುಶಾಲನಗರ, ಮೇ 7: ಸಮಾಜದಲ್ಲಿನ ಕೆಳಸ್ತರದ ಮಂದಿಯನ್ನು ಗುರುತಿಸಿ ಗೌರವಿಸುವುದೆ ಜಗಜ್ಯೋತಿ ಬಸವೇಶ್ವರರಿಗೆ ನಾವು ನೀಡಬಹುದಾದ ಗೌರವ ಎಂದು ಕೊಡಗು ಜಿಲ್ಲಾಧಿಕಾರಿ ಮೀರ್ ಅನೀಸ್ ಅಹ್ಮದ್ ಅಭಿಪ್ರಾಯಪಟ್ಟರು.
ಕೊಡಗು ಜಿಲ್ಲಾ ಶರಣ ಸಾಹಿತ್ಯ ಪರಿಷತ್‌ನ ವತಿಯಿಂದ ಬಸವ ಜಯಂತಿ ಅಂಗವಾಗಿ ಕುಶಾಲನಗರದ ಪಟ್ಟಣ ಪಂಚಾಯತ್‌ನಲ್ಲಿ ಹಮ್ಮಿಕೊಂಡಿದ್ದ ಕಾಯಕ ದಿನಾಚರಣೆಯನ್ನು ಉದ್ಘಾಟಿಸಿ, ಪೌರಕಾರ್ಮಿಕರನ್ನು ಸನ್ಮಾನಿಸಿ ಮಾತನಾಡಿದರು.
ಸಮಾಜದಲ್ಲಿ ಮೇಲು ಕೀಳು ಎಂಬ ಭಾವನೆಯನ್ನು ದೂರ ಮಾಡಿ ಎಲ್ಲರೂ ಸರಿ ಸಮಾನರು ಎಂದು ಸಾರಿದ ಮಹಾಮಹಿಮ ಬಸವಣ್ಣ ಹನ್ನೆರಡನೆ ಶತಮಾನದಲ್ಲಿ ಹಮ್ಮಿಕೊಂಡಿದ್ದ ಸಮಾಜೋಧಾರ್ಮಿಕ ಚಳವಳಿಗಳಿಂದ ಇಂದು ಜನರು ಸಮಾನತೆಯನ್ನು ಕಾಣಲು ಸಾಧ್ಯವಾಗಿದೆ. ಬಸವಣ್ಣನವರ ವಚನಗಳಲ್ಲಿ ಕಂಡು ಬರುವ ದಲಿತ ಕಾಳಜಿ, ಅಸಮಾನತೆಯ ವಿರುದ್ಧದ ಧ್ವನಿ ದೊಡ್ಡ ಕ್ರಾಂತಿಯನ್ನೇ ಹುಟ್ಟುಹಾಕಿತು ಎಂದು ಹೇಳಿದರು.
ಹನ್ನೆರಡನೆ ಶತಮಾನದಲ್ಲಿ ಪುರೋಹಿತ ಶಾಹಿ, ವರ್ಣಾಶ್ರಮ ವ್ಯವಸ್ಥೆ ಹಾಗೂ ಅಸಮಾನತೆ ವಿರುದ್ಧ ಬಸವಣ್ಣ ಧ್ವನಿ ಎತ್ತಿದ್ದು ಮಾತ್ರ ಅಸಾಮಾನ್ಯ ಎದೆಗಾರಿಕೆ ಎಂದು ಅವರು ವಿಶ್ಲೇಷಿಸಿದರು.
ಸಮಾನತೆಯ ಜಾತ್ಯತೀತ ಸಮಾಜ ಕಟ್ಟಲು ಆಂದೋಲನವನ್ನೇ ನಡೆಸಿದ ಬಸವೇಶ್ವರರ ಅನುಯಾಯಿಗಳು ಎಂದು ಹೇಳಿಕೊಳ್ಳುತ್ತಿರುವವರು ಇಂದು ಜಾತಿಯ ಸಮಾಜವನ್ನು ಕಟ್ಟುತ್ತಿರುವುದು ವಿಪರ್ಯಾಸ ಎಂದು ಜಿಲ್ಲಾಧಿಕಾರಿಗಳು ವಿಷಾದಿಸಿದರು. ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದ ಕೊಡ್ಲಿಪೇಟೆಯ ಕಿರಿಕೊಡ್ಲಿ ಮಠಾಧೀಶ ಸದಾಶಿವ ಸ್ವಾಮೀಜಿ ಆಶೀರ್ವಚನ ನೀಡಿ, ಅಂಬೇಡ್ಕರ್ ಹಿಂದುಳಿದ ವರ್ಗದಲ್ಲಿ ಹುಟ್ಟಿ ಮೇಲ್ಜಾತಿ ವ್ಯವಸ್ಥೆ ಕೆಳ ವರ್ಗದವರಿಗೆ ನೀಡುತ್ತಿದ್ದ ಕಿರುಕುಳದ ವಿರುದ್ಧ ಹೋರಾಟ ನಡೆಸಿದರು. ಆದರೆ ಹನ್ನೆರಡನೇ ಶತಮಾನದಲ್ಲಿ ಮೇಲ್ಜಾತಿಯಲ್ಲಿ ಹುಟ್ಟಿದ ಬಸವಣ್ಣ ಸಮಾಜದ ಕೆಳ ಜಾತಿಯವರಿಗೆ ಅಂದಿನ ವ್ಯವಸ್ಥೆಯಲ್ಲಿ ಆಗುತ್ತಿದ್ದ ಕಿರುಕುಳದ ವಿರುದ್ಧ ಬೇಸತ್ತು ಸಮಾನತೆಗಾಗಿ ಕ್ರಾಂತಿಯನ್ನೇ ಉಂಟು ಮಾಡಿದರು ಎಂದರು.
ದೇಶದಲ್ಲಿ ನಿಜವಾದ ಕಾಯಕ ಮಾಡುತ್ತಿರುವವರು ಪೌರಕಾರ್ಮಿಕರು ಮತ್ತು ರೈತರು ಎಂದು ಹೇಳಿದ ಅವರು, ಬಿಸಿಲು-ಮಳೆ ಎನ್ನದೆ ಶ್ರಮವಹಿಸಿ ದುಡಿಯುತ್ತಿರುವ ಕಾಯಕ ಯೋಗಿಗಳನ್ನು ಗುರುತಿಸಿ ಗೌರವಿಸುತ್ತಿರುವುದು ಬಸವ ತತ್ವಕ್ಕೆ ಬದ್ಧವಾಗಿದೆ. ನರೇಂದ್ರ ಮೋದಿ ಕರೆಕೊಟ್ಟ ಸ್ವಚ್ಛ ಭಾರತ ಘೋಷಣೆಯಂದು ಪೊರಕೆ ಹಿಡಿದವರು ಆವತ್ತಿನಿಂದ ಈವರೆಗೆ ಹಿಡಿಯಲಿಲ್ಲ. ಆದರೆ ನಿಜವಾದ ಕಾಯಕ ಯೋಗಿಗಳಾದ ಪೌರ ಕಾರ್ಮಿಕರು ನಿತ್ಯವೂ ಪೊರಕೆ ಹಿಡಿದರೆ ಮಾತ್ರ ಸಮಾಜದಲ್ಲಿ ಸ್ವಚ್ಛತೆ ಕಾಣಲು ಸಾಧ್ಯ ಎಂದು ಹೇಳಿದರು. ತೊರೆನೂರು ವಿರಕ್ತ ಮಠದ ಮಲ್ಲೇಶ ಸ್ವಾಮೀಜಿ ಆಶೀರ್ವಚನ ನೀಡಿದರು. ಪಿರಿಯಾಪಟ್ಟಣ ತಾಲೂಕಿನ ವೀರಶೈವ ಮಹಾಸಭಾದ ಅಧ್ಯಕ್ಷ ಸಿ.ಸಿ.ಸದಾಶಿವಪ್ಪ, ಕೊಡಗು ಜಿಪಂ ಸದಸ್ಯೆ ಕುಮುದಾ ಧರ್ಮಪ್ಪ, ಪಪಂ ಅಧ್ಯಕ್ಷ ಎಂ.ಎಂ.ಚರಣ್, ಉಪಾಧ್ಯಕ್ಷ ಟಿ.ಆರ್.ಶ್ರವಣಕುಮಾರ್, ಸದಸ್ಯ ಡಿ.ಕೆ.ತಿಮ್ಮಪ್ಪ ಮಾತನಾಡಿದರು.
ಶರಣ ಸಾಹಿತ್ಯ ಪರಿಷತ್‌ನ ಜಿಲ್ಲಾಧ್ಯಕ್ಷ ಕೆ.ಎಸ್.ಮೂರ್ತಿ, ತಾಲೂಕು ಅಧ್ಯಕ್ಷ ಪಿ.ಮಹದೇವಪ್ಪ, ಕಾವೇರಿ ನದಿ ಸ್ವಚ್ಛತಾ ಅಭಿಯಾನದ ರಾಜ್ಯ ಸಂಚಾಲಕ ಎಂ.ಎನ್.ಚಂದ್ರಮೋಹನ್, ನಿವೃತ್ತ ಶಿಕ್ಷಕ ಎಂ.ಎಚ್.ನಝೀರ್ ಅಹ್ಮದ್, ಜಿಲ್ಲಾ ಬಿಸಿಎಂ ಅಧಿಕಾರಿ ಕೆ.ವಿ.ಸುರೇಶ್, ಪರಿಷತ್‌ನ ಪ್ರಧಾನ ಕಾರ್ಯದರ್ಶಿ ಸಾಂಭ ಶಿವಮೂರ್ತಿ, ಕೋಶಾಧಿಕಾರಿ ಎಚ್.ಪಿ.ಉದಯಕುಮಾರ್, ನಿರ್ದೇಶಕ ಬಿ.ಬಿ.ಲೋಕೇಶ್, ಎಂ.ಇ.ಮೊದೀನ್, ಪಂಚಾಯತ್ ಆರೋಗ್ಯಾಧಿಕಾರಿ ಲಿಂಗರಾಜು ಉಪಸ್ಥಿತರಿದ್ದರು.







