ಶಿಕ್ಷಕರು ಸಾಹಿತ್ಯಾಭಿರುಚಿ ಬೆಳೆಸಿಕೊಳ್ಳಲಿ: ಡಾ. ಝಮೀರುಲ್ಲಾ ಷರೀಫ್

ಭಟ್ಕಳ, ಮೇ 7: ಕನ್ನಡ ಸಾಹಿತ್ಯ ಪರಿಷತ್ ಶತಮಾನ ಪೂರೈಸಿ ಮುನ್ನಡೆಯುತ್ತಿರುವುದು ನಮಗೆಲ್ಲ ಅತ್ಯಂತ ಹೆಮ್ಮೆಯ ವಿಚಾರ. ಪ್ರ.ಶಿಕ್ಷಣಾರ್ಥಿಗಳು ಶಿಕ್ಷಕ ತರಬೇತಿಯ ಜೊತೆ ಜೊತೆಗೆ ಸಾಹಿತ್ಯಾಭಿರುಚಿಯನ್ನು ಬೆಳೆಸಿಕೊಂಡು ಸಾಹಿತ್ಯ ಕೃಷಿಯನ್ನು ಮಾಡಬೇಕು ಎಂದು ಹಿರಿಯ ಸಾಹಿತಿ ಝಮೀರುಲ್ಲಾ ಷರೀಫ್ ಹೇಳಿದರು.
ಜ್ಞಾನೇಶ್ವರಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ಕನ್ನಡ ಸಾಹಿತ್ಯ ಪರಿಷತ್‌ನ ಸಂಸ್ಥಾಪನಾ ದಿನಾಚರಣೆಯು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು. ಕಸಾಪದ ಭಟ್ಕಳ ತಾಲೂಕು ಘಟಕದ ನೂತನ ಅಧ್ಯಕ್ಷ ಗಂಗಾಧರ ನಾಯ್ಕ ಅವರ ಅವಧಿಯಲ್ಲಿ ರಚನಾತ್ಮಕ ಕಾರ್ಯಗಳು ನಡೆಯಲಿ ಎಂದು ಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಹಿರಿಯ ಸಾಹಿತಿ ಆರ್.ವಿ.ಸರಾಫ್ ಮಾತನಾಡಿ, ಇಂದಿನ ಯುವಜನತೆ ಮತ್ತು ವಿದ್ಯಾರ್ಥಿಗಳು ಹೆಚ್ಚು ಹೆಚ್ಚು ಪುಸ್ತಕಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ಆ ಮೂಲಕ ಕನ್ನಡ ಸಾಹಿತ್ಯದ ಶ್ರೀಮಂತ ಪರಂಪರೆಯ ಕುರಿತು ತಿಳಿದುಕೊಂಡು ನಮ್ಮ ನಾಡು ನುಡಿಯ ಬಗೆಗೆ ಅಭಿಮಾನ ಬೆಳೆಸಿಕೊಳ್ಳಬೇಕು ಎಂದು ನುಡಿದರು. ಸಾಹಿತಿ ಶ್ರೀಧರ ಶೇಟ್ ವಿಶೇಷ ಉಪನ್ಯಾಸ ನೀಡಿ ಕಸಾಪ ಬೆಳೆದು ಬಂದ ದಾರಿಯ ಕುರಿತು ತಿಳಿಸಿದರಲ್ಲದೇ, ಎರಡು ಸಾವಿರ ವರ್ಷಗಳ ಇತಿಹಾಸ ಹೊಂದಿರುವ ಕನ್ನಡ, ನೂರೊಂದು ವರ್ಷ ಪೂರೈಸಿದ ಸಾಹಿತ್ಯ ಪರಿಷತ್ ಮತ್ತು 60 ವರ್ಷ ತುಂಬಿದ ಕನ್ನಡ ನಾಡು ನಮ್ಮೆಲ್ಲರ ಹೆಮ್ಮೆಯಾಗಿದೆ ಎಂದು ನುಡಿದರು. ಕಸಾಪದ ಭಟ್ಕಳ ಘಟಕದ ಅಧ್ಯಕ್ಷ ಗಂಗಾಧರ ನಾಯ್ಕ ಸ್ವಾಗತಿಸಿ, ಪ್ರಾಸ್ತಾವಿಕ ನುಡಿಗಳನ್ನಾಡಿದರು. ಆರಂಭದಲ್ಲಿ ಇತ್ತೀಚೆಗೆ ನಿಧನರಾದ ಕಸಾಪದ ನಿಕಟಪೂರ್ವ ರಾಜ್ಯಾಧ್ಯಕ್ಷ ದಿ.ಪುಂಡಲೀಕ ಹಾಲಂಬಿಯವರಿಗೆ ಮೌನಾಚರಣೆಯ ಮೂಲಕ ಶ್ರದ್ಧಾಂಜಲಿ ಅರ್ಪಿಸಲಾಯಿತು. ಪ್ರ.ಶಿಕ್ಷಣಾರ್ಥಿಗಳು ನಾಡಗೀತೆ ಹಾಡಿದರು. ಉಪನ್ಯಾಸಕ ಗಜಾನನ ಶಾಸ್ತ್ರಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಕಾರ್ಯಕ್ರಮದಲ್ಲಿ ನಾರಾಯಣ ಯಾಜಿ, ಗೋವಿಂದ ಶೆಟ್ಟಿ, ಪಾಂಡುರಂಗ ಶಿರೂರು, ಪ್ರಕಾಶ್ ಶಿರಾಲಿ, ಶೋಭಾ ಶಂಕರ ನಾಯ್ಕ, ಉಪನ್ಯಾಸಕ ವೃಂದದವರು ಹಾಗೂ ಪ್ರಶಿಕ್ಷಣಾರ್ಥಿಗಳು ಉಪಸ್ಥಿತರಿದ್ದರು.







