ಸಾಲಮಾಡಿ ರೈತರಿಗೆ ನೆರವುನೀಡಿ: ಮಧು ಬಂಗಾರಪ್ಪ ಆಗ್ರಹ
.jpg)
ಸಾಗರ, ಮೇ 7: ದೇಶದಲ್ಲಿಯೇ ಅತೀಹೆಚ್ಚು ಬರಗಾಲವನ್ನು ಎದುರಿಸುತ್ತಿರುವ ರಾಜ್ಯಗಳ ಪಟ್ಟಿಯಲ್ಲಿ ಕರ್ನಾಟಕ ರಾಜ್ಯ ಎರಡನೆ ಸ್ಥಾನದಲ್ಲಿದೆ. ಇಂತಹ ಸಂಕಷ್ಟ ಸ್ಥಿತಿಯಲ್ಲಿ ರಾಜ್ಯ ಸರಕಾರ ಕೇಂದ್ರ ಸರಕಾರದ ಹಣ ನೀಡುತ್ತದೆ ಎಂದು ಕಾಯದೆ ಸಾಲ ಮಾಡಿಯಾದರೂ ರಾಜ್ಯದ ರೈತರಿಗೆ ನೆರವು ನೀಡಬೇಕು ಎಂದು ಶಾಸಕ ಮಧು ಬಂಗಾರಪ್ಪಸರಕಾರವನ್ನು ಒತ್ತಾಯಿಸಿದ್ದಾರೆ. ಶನಿವಾರ ಕರೆಯಲಾಗಿದ್ದ ಕಾಂಗ್ರೆಸ್ ಮತ್ತು ಜೆಡಿಎಸ್ ಜಂಟಿ ಸುದ್ದಿಗೋಷ್ಠಿಯಲ್ಲಿ ತಾಲೂಕು ಪಂಚಾಯತ್‌ನ ನೂತನ ಅಧ್ಯಕ್ಷ ಹಾಗೂ ಉಪಾಧ್ಯಕ್ಷರನ್ನು ಜೆಡಿಎಸ್ ಪರವಾಗಿ ಅಭಿನಂದಿಸಿ ಮಾತನಾಡಿದ ಅವರು, ಯಡಿಯೂರಪ್ಪಅವರು ಕೇಂದ್ರ ಸರಕಾರದಿಂದ ಬರ ಪರಿಸ್ಥಿತಿ ನಿರ್ವಹಣೆಗೆ ಪೂರಕವಾದ ಹಣ ಬಂದಿದೆ ಎನ್ನುತ್ತಾರೆ. ಆದರೆ 1,500 ಕೋಟಿ ರೂ. ಮಾತ್ರ ಬಂದಿದೆ ಎಂದು ರಾಜ್ಯ ಸರಕಾರ ಹೇಳುತ್ತಿದೆ. ಇಂತಹ ಬರದ ಪರಿಸ್ಥಿತಿಯನ್ನು ಯಾರೂ ರಾಜಕಾರಣಕ್ಕೆ ಉಪಯೋಗಿಸಿಕೊಳ್ಳಬಾರದು ಎಂದವರು ವಿನಂತಿಸಿದ್ದಾರೆ.
ಬಿಜೆಪಿ ಮತ್ತು ಕಾಂಗ್ರೆಸ್ ಸರಕಾರಗಳ ಅವಧಿಯಲ್ಲಿ ರೈತರ ಸಾಲಮನ್ನಾ ಮಾಡಿ ಎನ್ನುವ ಕೂಗಿಗೆ ಬೆಲೆ ಇಲ್ಲದಂತಾಗಿದೆ. ಮುಂದಿನ ದಿನಗಳಲ್ಲಿ ಜೆಡಿಎಸ್ ಅಧಿಕಾರಕ್ಕೆ ಬಂದರೆ ರೈತರ ಸಾಲವನ್ನು ಖಂಡಿತಾ ಮನ್ನಾ ಮಾಡುತ್ತೇವೆ ಎಂದ ಅವರು,ರಾಜ್ಯ ಸರಕಾರ ಸಂಕಷ್ಟದಲ್ಲಿರುವ ರೈತರ ಸ್ಥಿತಿಯನ್ನು ಗಮನಿಸಿ ಸಾಲಮನ್ನಾ ಮಾಡಲು ಮನಸ್ಸು ಮಾಡಬೇಕು ಎಂದು ಒತ್ತಾಯಿಸಿದರು.
ಶಿವಮೊಗ್ಗ ಜಿಲ್ಲಾ ಪಂಚಾಯತ್ ಹಾಗೂ ಸಾಗರ ತಾಲೂಕು ಪಂಚಾಯತ್‌ಗಳು ಅಧಿಕಾರ ಹಿಡಿಯಲು ಜೆಡಿಎಸ್ ಮತ್ತು ಪಕ್ಷೇತರ ಸದಸ್ಯರಿಗೆ ಅನೇಕ ಆಮಿಷಗಳನ್ನು ಬಿಜೆಪಿ ಒಡ್ಡಿತ್ತು. ಆದರೆ, ಸದಸ್ಯರು ಕೋಮುವಾದಿಗಳನ್ನು ಅಧಿಕಾರದಿಂದ ದೂರ ಇಡಲು ಸಂಘಟಿತ ಪ್ರಯತ್ನ ನಡೆಸಿರುವುದು ಅಭಿನಂದನಾರ್ಹ. ಇದು ಪ್ರಜಾಪ್ರಭುತ್ವಕ್ಕೆ ಸಿಕ್ಕ ಜಯ ಎಂದು ಬಣ್ಣಿಸಿದ ಮಧು ಬಂಗಾರಪ್ಪ, ನೂತನ ಅಧ್ಯಕ್ಷ ಮತ್ತು ಉಪಾಧ್ಯಕ್ಷರು ಹಾಗೂ ಸದಸ್ಯರು ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ಕಿವಿಮಾತು ಹೇಳಿದರು.
ತಾಲೂಕು ಪಂಚಾಯತ್ ಉಪಾಧ್ಯಕ್ಷ ಪರಶುರಾಮ್, ಜಿಲ್ಲಾ ಪಂಚಾಯತ್ ಸದಸ್ಯ ಕಾಗೋಡು ಅಣ್ಣಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಲ್.ಟಿ.ತಿಮ್ಮಪ್ಪ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಬಿ.ಆರ್.ಜಯಂತ್, ಪ್ರಮುಖರಾದ ನಾಗರಾಜ ಮಜ್ಜಿಗೆರೆ, ಗಣಪತಿ ಹೆನಗೆರೆ, ರಾಮಚಂದ್ರ ಗೌಡ, ಪುರಂದರ ಗೋಷ್ಟಿಯಲ್ಲಿ ಹಾಜರಿದ್ದರು.







