ಒಲಿಂಪಿಕ್ಸ್‌ಗೆ ವಿನೇಶ್, ಸಾಕ್ಷಿಗೆ ಸ್ಥಾನ
ಹೊಸದಿಲ್ಲಿ, ಮೇ 7: ಟರ್ಕಿಯ ಇಸ್ತಾಂಬುಲ್‌ನಲ್ಲಿ ನಡೆದ ಒಲಿಂಪಿಕ್ಸ್ ಗೇಮ್ಸ್ ವಿಶ್ವ ಅರ್ಹತಾ ಟೂರ್ನಮೆಂಟ್‌ನಲ್ಲಿ ಫೈನಲ್‌ಗೆ ಪ್ರವೇಶಿಸಿರುವ ಭಾರತದ ಕುಸ್ತಿ ತಾರೆಯರಾದ ವಿನೇಶ್ ಫೋಗಟ್ ಹಾಗೂ ಸಾಕ್ಷಿ ಮಲ್ಲಿಕ್ 2016ರ ರಿಯೋ ಒಲಿಂಪಿಕ್ಸ್‌ನಲ್ಲಿ ಸ್ಥಾನ ಪಡೆದಿದ್ದಾರೆ.
ಇದೇ ಮೊದಲ ಬಾರಿ ಒಲಿಂಪಿಕ್ಸ್‌ನಲ್ಲಿ ಭಾರತದ ಇಬ್ಬರು ಮಹಿಳಾ ಕುಸ್ತಿಪಟುಗಳು ಸ್ಪರ್ಧಿಸಲಿದ್ದಾರೆ. ವಿನೇಶ್ 48 ಕೆ.ಜಿ. ವಿಭಾಗದಲ್ಲಿ ಹಾಗೂ ಸಾಕ್ಷಿ 58 ಕೆ.ಜಿ. ವಿಭಾಗದಲ್ಲಿ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದಿದ್ದಾರೆ. ಆದರೆ, ಈ ಇಬ್ಬರು ಒಲಿಂಪಿಕ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸುವ ಬಗ್ಗೆ ಇನ್ನೂ ದೃಢಪಟ್ಟಿಲ್ಲ.
ಆಗಸ್ಟ್‌ನಲ್ಲಿ ನಡೆಯುವ ರಿಯೋ ಗೇಮ್ಸ್‌ನಲ್ಲಿ ಯಾರು ಸ್ಪರ್ಧಿಸುತ್ತಾರೆಂದು ನ್ಯಾಶನಲ್ ಟ್ರಯಲ್ಸ್‌ನಲ್ಲಿ ನಿರ್ಧರಿಸಲಾಗುತ್ತದೆ. 2012ರ ಲಂಡನ್ ಒಲಿಂಪಿಕ್ಸ್‌ನಲ್ಲಿ ಗೀತಾ ಫೋಗಟ್ ಭಾರತವನ್ನು 55 ಕೆ.ಜಿ. ವಿಭಾಗದಲ್ಲಿ ಪ್ರತಿನಿಧಿಸಿದ್ದ ಮೊದಲ ಮಹಿಳಾ ಕುಸ್ತಿಪಟು ಎನಿಸಿಕೊಂಡಿದ್ದರು.
ವಿನೇಶ್ ಸೆಮಿಫೈನಲ್‌ನಲ್ಲಿ ಟರ್ಕಿಯ ಎವಿನ್ ಎಮಿರಹಾನ್‌ರನ್ನು ಮಣಿಸಿದ್ದರು. ಫೈನಲ್‌ನಲ್ಲಿ ಪೊಲೆಂಡ್‌ನ ಇವೊನಾ ಮಟ್ಕೊಸ್ಕಾರನ್ನು ಎದುರಿಸಲಿದ್ದಾರೆ.
ಚೀನಾದ ಲಾನ್ ಝಾಂಗ್‌ರನ್ನು ಮಣಿಸಿದ್ದ ಸಾಕ್ಷಿ ಒಲಿಂಪಿಕ್ಸ್‌ಗೆ ಸ್ಥಾನ ಪಡೆದಿದ್ದರು. ಸಾಕ್ಷಿ ಫೈನಲ್‌ನಲ್ಲಿ ರಶ್ಯದ ವಾಲೆರಿಯಾ ಕಾಬ್ಲೊವರನ್ನು ಎದುರಿಸುವರು.
ಒಲಿಂಪಿಕ್ಸ್‌ಗೆ ಸ್ಥಾನಪಡೆದಿರುವ ವಿನೇಶ್ ಹಾಗೂ ಸಾಕ್ಷಿ ಈಗಾಗಲೇ ಟೂರ್ನಿಗೆ ಅರ್ಹತೆ ಪಡೆದಿರುವ ನರಸಿಂಗ್ ಯಾದವ್, ಸಂದೀಪ್ ಥೊಮರ್, ಹರ್ದೀಪ್ ಸಿಂಗ್‌ರನ್ನು ಸೇರ್ಪಡೆಯಾಗಿದ್ದಾರೆ.







