ಕೋಲ್ಕತಾ ವಿರುದ್ಧ ಗುಜರಾತ್‌ಗೆ ಕಠಿಣ ಸವಾಲು
.jpg)
ಕೋಲ್ಕತಾ, ಮೇ 7: ಇಲ್ಲಿನ ಈಡನ್‌ಗಾರ್ಡನ್ಸ್‌ನಲ್ಲಿ ರವಿವಾರ ನಡೆಯಲಿರುವ ಐಪಿಎಲ್ ಪಂದ್ಯದಲ್ಲಿ ಗುಜರಾತ್ ಲಯನ್ಸ್ ತಂಡ ಆತಿಥೇಯ ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ ಕಠಿಣ ಸವಾಲು ಎದುರಿಸಲಿದೆ.
ತವರು ನೆಲದಲ್ಲಿ ಇನ್ನೂ ನಾಲ್ಕು ಪಂದ್ಯಗಳನ್ನು ಆಡಲಿರುವ ಗಂಭೀರ್ ನಾಯಕತ್ವದ ಕೋಲ್ಕತಾ ತಂಡ ಪ್ರಸ್ತುತ ಭರ್ಜರಿ ಫಾರ್ಮ್‌ನಲ್ಲಿದೆ. ಐಪಿಎಲ್‌ನಲ್ಲಿ ಹ್ಯಾಟ್ರಿಕ್ ಪ್ರಶಸ್ತಿ ಜಯಿಸುವ ವಿಶ್ವಾಸದಲ್ಲಿದೆ. ಸತತ 3 ಸೋಲಿನಿಂದಾಗಿ ಅಂಕಪಟ್ಟಿಯಲ್ಲಿ ಮೊದಲ ಸ್ಥಾನವನ್ನು ಕಳೆದುಕೊಂಡಿರುವ ಗುಜರಾತ್‌ಗೆ ಸ್ಥಿರವಾದ ಪ್ರದರ್ಶನ ನೀಡುತ್ತಿರುವ ಕೋಲ್ಕತಾ ವಿರುದ್ಧ ಗೆಲುವು ಸುಲಭ ಸಾಧ್ಯವಲ್ಲ. ಗುಜರಾತ್ ಶುಕ್ರವಾರ ರಾತ್ರಿ ಹೈದರಾಬಾದ್‌ನ ವಿರುದ್ಧ 5 ವಿಕೆಟ್‌ಗಳಿಂದ ಶರಣಾಗಿ ಹ್ಯಾಟ್ರಿಕ್ ಸೋಲು ಅನುಭವಿಸಿತ್ತು.
ಕೋಲ್ಕತಾ ತಂಡಕ್ಕೆ ಗಂಭೀರ್ ಹಾಗೂ ರಾಬಿನ್ ಉತ್ತಪ್ಪ ಪ್ರತಿ ಪಂದ್ಯದಲ್ಲೂ ಉತ್ತಮ ಆರಂಭ ನೀಡುತ್ತಿದ್ದಾರೆ. ಪಂಜಾಬ್ ವಿರುದ್ಧದ ಕಳೆದ ಪಂದ್ಯದಲ್ಲಿ ಈ ಜೋಡಿ ಮೊದಲ ವಿಕೆಟ್‌ಗೆ 101 ರನ್ ಸೇರಿಸಿತ್ತು. ಇದು ಟೂರ್ನಿಯಲ್ಲಿ ಈ ಜೋಡಿ ಮೊದಲ ವಿಕೆಟ್‌ಗೆ ದಾಖಲಿಸಿದ್ದ 3ನೆ ಶತಕದ ಜೊತೆಯಾಟವಾಗಿತ್ತು.
ಐಪಿಎಲ್‌ನ ಇತರ ತಂಡಗಳು ವಿದೇಶಿ ಆಟಗಾರರ ಆಟವನ್ನೇ ಹೆಚ್ಚು ನೆಚ್ಚಿಕೊಂಡಿದೆ. ಆದರೆ, ಕೋಲ್ಕತಾ ತಂಡದ ಅಗ್ರ ಐವರು ದಾಂಡಿಗರಲ್ಲಿ ನಾಲ್ವರು ಭಾರತದ ಆಟಗಾರರು. ವಿಂಡೀಸ್‌ನ ಆಂಡ್ರೆ ರಸಲ್ ಬೌಲಿಂಗ್ ಹಾಗೂ ಬ್ಯಾಟಿಂಗ್‌ನಲ್ಲಿ ಮಿಂಚುತ್ತಿದ್ದಾರೆ.
ಕಳೆದ ಪಂದ್ಯದಲ್ಲಿ ತಂಡದಿಂದ ಹೊರಗುಳಿದಿದ್ದ ಇನ್ನೋರ್ವ ವಿಂಡೀಸ್ ಆಟಗಾರ ಸುನೀಲ್ ನರೇನ್ ಗುಜರಾತ್ ವಿರುದ್ಧ ಪಂದ್ಯದಲ್ಲಿ ತಂಡಕ್ಕೆ ವಾಪಸಾಗಲಿದ್ದಾರೆ. ಗುಜರಾತ್ ತಂಡದ ಅಗ್ರ ಕ್ರಮಾಂಕದಲ್ಲಿ ಬ್ರೆಂಡನ್ ಮೆಕಲಮ್, ಆ್ಯರೊನ್ ಫಿಂಚ್, ಡ್ವೆಯ್ನೆ ಸ್ಮಿತ್‌ರಂತಹ ಆಟಗಾರರಿದ್ದಾರೆ. ಈ ಮೂವರು ವಿಫಲರಾದ ಹಿನ್ನೆಲೆಯಲ್ಲಿ ಗುಜರಾತ್ ಸತತ ಸೋಲು ಕಂಡಿದೆ.
ರೈನಾ, ರವೀಂದ್ರ ಜಡೇಜ ಹಾಗೂ ದಿನೇಶ್ ಕಾರ್ತಿಕ್ ತಂಡದ ಗೆಲುವಿನಲ್ಲಿ ಕಾಣಿಕೆ ನೀಡುತ್ತಿಲ್ಲ. ಆ್ಯರೊನ್ ಫಿಂಚ್ ಟೂರ್ನಿಯ ಆರಂಭದಲ್ಲಿ ನಾಲ್ಕು ಅರ್ಧಶತಕಗಳನ್ನು ಬಾರಿಸುವ ಮೂಲಕ ಗುಜರಾತ್‌ನ ಗೆಲುವಿನ ಓಟಕ್ಕೆ ದೊಡ್ಡ ಕಾಣಿಕೆ ನೀಡಿದ್ದರು. ಆದರೆ, ಅವರು ಇದೀಗ ಕೆಳ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುತ್ತಿರುವುದು ತಂಡಕ್ಕೆ ಲಾಭವಾಗುತ್ತಿಲ್ಲ.
ಪಾಲ್ ಆಡಮ್ಸ್ ಶೈಲಿಯಲ್ಲಿ ಬೌಲಿಂಗ್ ಮಾಡುವ ಮೂಲಕ ಎಲ್ಲರಲ್ಲೂ ಕುತೂಹಲ ಕೆರಳಿಸಿದ್ದ ವಿಲಕ್ಷಣ ಬೌಲರ್ ಶಿವಿಲ್ ಕೌಶಿಕ್ ಹಾಗೂ ಹಿರಿಯ ಲೆಗ್ ಸ್ಪಿನ್ನರ್ ಪ್ರವೀಣ್ ತಾಂಬೆ ಸ್ಪಿನ್‌ಗೆ ನೆರವಾಗುವ ಈಡನ್‌ಗಾರ್ಡನ್ ಪಿಚ್‌ನಲ್ಲಿ ಮಿಂಚುತ್ತಾರೋ ಎಂದು ನೋಡಬೇಕಾಗಿದೆ.
ಪಂದ್ಯದ ಸಮಯ: ರಾತ್ರಿ 8:00







