ತ್ರಾಸಿ: ಟ್ಯಾಂಕರ್ ಹರಿದು ತಾಯಿ-ಮಗಳು ಮೃತ್ಯು

ಗಂಗೊಳ್ಳಿ, ಮೇ 7: ರಾ.ಹೆ. 66ರ ತ್ರಾಸಿ ಗ್ರಾಮದ ಅಣ್ಣಪ್ಪಯ್ಯ ಸಭಾಭವನದ ಎದುರು ಶನಿವಾರ ಬೆಳಗ್ಗೆ 8:30ಕ್ಕೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ತಾಯಿ ಮತ್ತು ಮಗಳು ಮೃತಪಟ್ಟಿದ್ದಾರೆ.
ಮೃತರನ್ನು ಬೈಂದೂರು ಮೈಯಾಡಿಯ ಸಂಪಿಗೆಕೊಡ್ಲುವಿನ ಸರೋಜಾ (28) ಮತ್ತವರ ಮಗಳು ನಿಶ್ಮಿತಾ (9) ಎಂದು ಗುರುತಿಸಲಾಗಿದೆ. ವಿಶ್ವನಾಥ ಗಾಣಿಗ ಎಂಬವರು ತನ್ನ ದೊಡ್ದಪ್ಪನ ಮಗಳಾದ ಸರೋಜಾ ಹಾಗೂ ಮತ್ತವರ ಮಗಳನ್ನು ತನ್ನ ಬೈಕ್‌ನಲ್ಲಿ ಮನೆಯಿಂದ ಕುಂದಾಪುರ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿರುವಾಗ ಕುಂದಾಪುರ ಕಡೆಯಿಂದ ಬೈಂದೂರು ಕಡೆಗೆ ಬರುತ್ತಿದ್ದ ಟ್ಯಾಂಕರ್ ವಾಹನವೊಂದನ್ನು ಓವರ್ ಟೇಕ್ ಮಾಡುವ ಭರದಲ್ಲಿ ಬೈಕ್‌ಗೆ ಢಿಕ್ಕಿ ಹೊಡೆಯಿತು. ಇದರಿಂದ ಬೈಕ್‌ನಲ್ಲಿದ್ದ ಮೂವರು ರಸ್ತೆಗೆ ಬಿದ್ದಿದ್ದು, ಟ್ಯಾಂಕರ್ ಸರೋಜಾ ಮತ್ತು ನಿಶ್ಮಿತಾರ ಮೇಲೆ ಚಲಿಸಿತು. ಹಾಗಾಗಿ ಇಬ್ಬರೂ ಸ್ಥಳದಲ್ಲೆ ಮೃತಪಟ್ಟರು. ತೀವ್ರವಾಗಿ ಗಾಯಗೊಂಡಿರುವ ವಿಶ್ವನಾಥ ಗಾಣಿಗ ಕುಂದಾಪುರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮೃತ ನಿಶ್ಮಿತಾ ಆರನೆ ತರಗತಿಯ ವಿದ್ಯಾರ್ಥಿನಿ. ಘಟನೆಯ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.





