ಟೆಂಡರ್ ಅವ್ಯವಹಾರ: ಸಿಐಡಿ ತನಿಖೆಗೆ ಆದೇಶ: ಪಾಟೀಲ್

ಬೆಂಗಳೂರು, ಮೇ 7: ನೀರಿನ ಗುಣಮಟ್ಟ ಪರೀಕ್ಷಾ ಪ್ರಯೋಗಾಲಯ ಟೆಂಡರ್ ಪ್ರಕ್ರಿಯೆ ಮಂತ್ರಿ ಮತ್ತು ಸಂಪುಟದ ಗಮನಕ್ಕೆ ತಾರದೆ ಅಧಿಕಾರಿಗಳ ಮಟ್ಟದಲ್ಲಿ ನಡೆದಿದೆ. ಆದರೆ, ನಿಯಮಗಳನ್ನು ಗಾಳಿಗೆ ತೂರಿರುವುದು ಕಂಡುಬಂದಿದ್ದು, ಈ ಬಗ್ಗೆ ಸಿಐಡಿ ತನಿಖೆಗೆ ಆದೇಶಿಸಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಸಚಿವ ಎಚ್.ಕೆ. ಪಾಟೀಲ್ ತಿಳಿಸಿದ್ದಾರೆ.
ಶನಿವಾರ ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಯೋಗಾಲಯ ಟೆಂಡರ್ ಪ್ರಕ್ರಿಯೆಯಲ್ಲಿ ಸ್ವಜನಪಕ್ಷಪಾತ ನಡೆದಿದೆ ಎಂಬ ವಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಅವರ ಆರೋಪ ನಿರಾಧಾರ ಮತ್ತು ರಾಜಕೀಯ ದುರುದ್ದೇಶದಿಂದ ಕೂಡಿದೆ ಎಂದು ತಿರುಗೇಟು ನೀಡಿದರು.
ಎಚ್.ಕೆ.ಪಾಟೀಲ್ ಮಂತ್ರಿ ಆಗಿರುವವರೆಗೂ ಇಲಾಖೆಯಲ್ಲಿ ಸ್ವಜನಪಕ್ಷಪಾತಕ್ಕೆ ಯಾವುದೇ ಸಂದರ್ಭದಲ್ಲಿಯೂ ಅವಕಾಶ ನೀಡುವುದಿಲ್ಲ ಎಂದು ಗುಡುಗಿದ ಅವರು, ನೀರಿನ ಪರೀಕ್ಷಾ ಪ್ರಯೋಗಾಲಯ ಸ್ಥಾಪನೆಗೆ ಮೆ.ಪ್ರಸಾದ್ ರಾಯಪಾಟಿಗೆ ನೀಡಿರುವ 46ತಾಲೂಕುಗಳ ಟೆಂಡರ್ ಪ್ರಕ್ರಿಯೆಯನ್ನು ರದ್ದುಗೊಳಿಸಲು ಆದೇಶಿಸಿದ್ದೇನೆ ಎಂದು ಹೇಳಿದರು.
ಯಾವುದೇ ಟೆಂಡರ್ ಇಲ್ಲದೆ ಅಧಿಕಾರಿಗಳ ಮಟ್ಟದಲ್ಲಿ 20 ತಾಲೂಕುಗಳ ನೀರಿನ ಪರೀಕ್ಷಾ ಪ್ರಯೋಗಾಲಯಕ್ಕೆ ನೀಡಿದ ಅನುಮೋದನೆಯನ್ನು ರದ್ದುಪಡಿಸಲು ಕಾನೂನು ತಜ್ಞರೊಂದಿಗೆ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಪಾಟೀಲ್ ತಿಳಿಸಿದರು.
80 ತಾಲೂಕುಗಳ ನೀರಿನ ಪರೀಕ್ಷಾ ಪ್ರಯೋಗಾಲಯ ಸ್ಥಾಪನೆಗೆ ನೀಡಿದ್ದ ಟೆಂಡರ್ ಪ್ರಕ್ರಿಯೆಯ ಬಗ್ಗೆಯೂ ಪರಿಶೀಲಿಸಿ ರದ್ದುಪಡಿಸಲು ಕ್ರಮ ಕೈಗೊಳ್ಳಲಾಗುವುದೆಂದ ಅವರು, ಈ ಅವ್ಯವಹಾರ ಅಧಿಕಾರಿಗಳ ಮಟ್ಟದಲ್ಲಿ ‘ಸಂಘಟಿತ ಅಪರಾಧ’ದ ರೂಪದಲ್ಲಿ ನಡೆದಿರುವುದು ಸ್ಪಷ್ಟ. ಹೀಗಾಗಿ ತಪ್ಪಿತಸ್ಥ ಅಧಿಕಾರಿಗಳನ್ನು ಬಿಡುವ ಪ್ರಶ್ನೆಯೇ ಇಲ್ಲ ಎಂದು ಎಚ್ಚರಿಕೆ ನೀಡಿದರು.
ಅಕ್ಟೋಬರ್‌ನಲ್ಲೇ ತನಿಖೆಗೆ ಆದೇಶ: ನೀರು ಪರೀಕ್ಷಾ ಪ್ರಯೋಗಾಲಯ ಟೆಂಡರ್ ಪ್ರಕ್ರಿಯೆಯಲ್ಲಿ ಅವ್ಯವಹಾರದ ಬಗ್ಗೆ ಖಾಸಗಿ ಸುದ್ದಿವಾಹಿನಿಯಲ್ಲಿ ಸುದ್ದಿ ಬಿತ್ತರಗೊಂಡ ಹಿನ್ನೆಲೆಯಲ್ಲಿ 2015ರ ಅಕ್ಟೋಬರ್ 29ರಂದೇ ತನಿಖೆಗೆ ಆದೇಶಿಸಿದ್ದೆ. ಆದರೆ, ಆ ವರದಿ ಇನ್ನೂ ಬಂದಿಲ್ಲ ಎಂದು ಸ್ಪಷ್ಟಣೆ ನೀಡಿದರು.
ಗ್ರಾಮೀಣಾಭಿವೃದ್ಧಿ ಇಲಾಖೆಯಲ್ಲಿ ಪಾರದರ್ಶಕತೆ ತರುವ ಉದ್ದೇಶದಿಂದ ‘ಗಾಂಧಿ ಸಾಕ್ಷಿ ಕಾಯಕ ತಂತ್ರಾಂಶ’ ರೂಪಿಸಲಾಗಿದೆ. ನೀರು ಪರೀಕ್ಷಾ ಪ್ರಯೋಗಾಲಯ ಸ್ಥಾಪನೆ ಟೆಂಡರ್ ಪ್ರಕ್ರಿಯೆ ಪ್ರಧಾನ ಕಾರ್ಯದರ್ಶಿ, ಮುಖ್ಯ ಎಂಜಿನಿಯರ್ ಸೇರಿದಂತೆ ಅಧಿಕಾರಿಗಳ ಮಟ್ಟದಲ್ಲಿ ನಡೆದಿದೆ. ಈ ಬಗ್ಗೆ ಪರಿಶೀಲಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದರು.
ಜೂನ್‌ಗೆ ಪೂರ್ಣ: ರಾಜ್ಯದಲ್ಲಿ 3,551 ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಅಳವಡಿಸಲಾಗಿದ್ದು, 3,303 ಘಟಕಗಳು ಪ್ರಾರಂಭವಾಗಿವೆ. ಈ ಬಗ್ಗೆ ಪ್ರತ್ಯೇಕ ವೆಬ್‌ಸೈಟ್ ಸ್ಥಾಪಿಸಲಾಗಿದೆ ಎಂದ ಅವರು, 2016ರ ಜೂನ್ ಅಂತ್ಯದ ವೇಳೆಗೆ 7 ಸಾವಿರ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ನಿಶ್ಚಿತವಾಗಿಯೂ ಸ್ಥಾಪಿಸುತ್ತೇವೆ ಎಂದು ಘೋಷಿಸಿದರು.
ಕಲುಷಿತ ನೀರು ಸೇವಿಸುತ್ತಿದ್ದ ರಾಜ್ಯದ 1.50 ಕೋಟಿಗೂ ಅಧಿಕ ಜನರಿಗೆ ರಾಜ್ಯ ಸರಕಾರ ಶುದ್ಧ ಕುಡಿಯುವ ನೀರು ಪೂರೈಕೆಗೆ ಕ್ರಮ ಕೈಗೊಂಡಿದೆ. ಶುದ್ಧ ಕುಡಿಯುವ ನೀರಿನ ಘಟಕಗಳ ಸ್ಥಾಪನೆ ಕಾರ್ಯ ಸಮರೋಪಾದಿಯಲ್ಲಿ ಸಾಗುತ್ತಿದೆ ಎಂದು ಪಾಟೀಲ್ ಸ್ಪಷ್ಟಪಡಿಸಿದರು.
ಕಲುಷಿತ ನೀರು ಸೇವಿಸುತ್ತಿದ್ದ ರಾಜ್ಯದ 1.50 ಕೋಟಿಗೂ ಅಧಿಕ ಜನರಿಗೆ ರಾಜ್ಯ ಸರಕಾರ ಶುದ್ಧ ಕುಡಿಯುವ ನೀರು ಪೂರೈಕೆಗೆ ಕ್ರಮ ಕೈಗೊಂಡಿದೆ. ಶುದ್ಧ ಕುಡಿಯುವ ನೀರಿನ ಘಟಕಗಳ ಸ್ಥಾಪನೆ ಕಾರ್ಯ ಸಮರೋಪಾದಿಯಲ್ಲಿ ಸಾಗುತ್ತಿದೆ ಎಂದು ಪಾಟೀಲ್ ಸ್ಪಷ್ಟಪಡಿಸಿದರು.





