ನಾರಾಯಣಪುರ ಜಲಾಶಯದಿಂದ ಮಹಾರಾಷ್ಟ್ರಕ್ಕೆ ಒಂದು ಟಿಎಂಸಿ ನೀರು ಬಿಡುಗಡೆ: ಎಂ.ಬಿ.ಪಾಟೀಲ್

ಬೆಂಗಳೂರು, ಮೇ 7: ಭೀಮಾನದಿ ತೀರದಲ್ಲಿರುವ ಕರ್ನಾಟಕ ಮತ್ತು ನೆರೆಯ ಮಹಾರಾಷ್ಟ್ರ ರಾಜ್ಯಗಳ ಹಳ್ಳಿಗಳು ಮತ್ತು ಪಟ್ಟಣಗಳ ಕುಡಿಯುವ ನೀರಿನ ಸಮಸ್ಯೆಯನ್ನು ನೀಗಿಸಲು, ರಾಜ್ಯ ಸರಕಾರವು ನಾರಾಯಣಪುರ ಜಲಾಶಯದ ಇಂಡಿ ಶಾಖಾ ಕಾಲುವೆ ಮೂಲಕ ಭೀಮಾನದಿ ಪಾತ್ರಕ್ಕೆ ಒಂದು ಟಿಎಂಸಿಯಷ್ಟು ಪ್ರಮಾಣದ ನೀರನ್ನು ಹರಿಸಲು ನಿರ್ಧರಿಸಿ ಎಂದು ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್ ಹೇಳಿದ್ದಾರೆ.
ಮಹಾರಾಷ್ಟ್ರದ ರಾಜ್ಯ ಸರಕಾರವು ಭೀಕರ ಜಲಕ್ಷಾಮವನ್ನು ಎದುರಿಸುತ್ತಿರುವ ಉತ್ತರ ಕರ್ನಾಟಕ ಭಾಗದ ಕುಡಿಯುವ ನೀರಿನ ಸಮಸ್ಯೆಯನ್ನು ನೀಗಿಸಲು ತನ್ನ ಕೋಯ್ನೆ ಜಲಾಶಯದ ಮೂಲಕ ಕೃಷ್ಣ ನದಿಗೆ ಸುಮಾರು ಟಿಎಂಸಿ ನೀರನ್ನು ಬಿಡುಗಡೆ ಮಾಡಿದೆ. ಇದಕ್ಕೆ ಪ್ರತಿಯಾಗಿ ತಮ್ಮ ರಾಜ್ಯದ ಅಕ್ಕಲಕೋಟೆ ಹಾಗೂ ಸೊಲ್ಲಾಪುರ ಪಟ್ಟಣಗಳಿಗೆ ಕುಡಿಯುವ ನೀರಿನ ಸಮಸ್ಯೆ ನೀಗಿಸಲು ಆಲಮಟ್ಟಿ ಜಲಾಶಯದಿಂದ ಭೀಮಾನದಿಗೆ ನೀರನ್ನು ಹರಿಸಲು ಮನವಿ ಸಲ್ಲಿಸಿತ್ತು ಎಂದು ಅವರು ತಿಳಿಸಿದ್ದಾರೆ.
ರಾಜ್ಯ ಸರಕಾರದ ಈ ನಿರ್ಧಾರದಿಂದ ಮಹಾರಾಷ್ಟ್ರ ಹಾಗೂ ಕರ್ನಾಟಕ ಗಡಿಯಲ್ಲಿ ಬರುವ ಹತ್ತು ಹಲವು ಹಳ್ಳಿಗಳು ಮತ್ತು ಪಟ್ಟಣಗಳ ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ ದೊರಕಿದಂತಾಗಿದೆ. ಇಂಡಿ ಶಾಖಾ ಕಾಲುವೆಗಳ ‘ಎಸ್ಕೇಪ್‌ಗೇಟ್’ಗಳ ಮುಖಾಂತರ ಬಿಡುಗಡೆ ಮಾಡಲಾಗುವ ನೀರು, ಭೀಮಾನದಿಗೆ ಅಡ್ಡಲಾಗಿ ಕಟ್ಟಲಾದ ಹಾಗೂ ಪ್ರಸ್ತುತ ಬರಿದಾದ ಒಟ್ಟು ಎಂಟು ಬಾಂದಾರಗಳಿಗೆ ಸುಮಾರು 2 ಸಾವಿರ ಕ್ಯೂಸೆಕ್ಸ್‌ನಷ್ಟು ನೀರನ್ನು ಹರಿಸಲಾಗುವುದು ಎಂದು ಎಂ.ಬಿ.ಪಾಟೀಲ್ ಹೇಳಿದ್ದಾರೆ.
ರಾಜ್ಯದ ಭುಯ್ಯರ್, ಕುಡಗಿ, ಕಲ್ಲೂರು ಬಾಂದಾರಾ ಮತ್ತು ಜೇವರ್ಗಿ ಪಟ್ಟಣಕ್ಕೆ ಅನುಕೂಲವಾಗುವಂತೆ ಸುಮಾರು 850 ಕ್ಯೂಸೆಕ್ಸ್ ನೀರನ್ನು ಹರಿಸಿದರೆ, ಮಹಾರಾಷ್ಟ್ರದ ಔಜ್-ಚಿಂಚಾಪುರ, ಖಾನಾ ಪುರ ಮತ್ತು ಹಿಲ್ಲಿ ಬಾಂದಾರಗಳಿಗೆ ಸುಮಾರು 700 ಕ್ಯೂಸೆಕ್ಸ್‌ನಷ್ಟು ನೀರನ್ನು ಇಂಡಿ ಶಾಖಾಕಾಲುವೆಗಳ ಎಸ್ಕೇಪ್ ಕಿಂಡಿಯಿಂದ ಹರಿಸಲಾ ಗುವುದು ಎಂದು ಅವರು ತಿಳಿಸಿದ್ದಾರೆ.
ರಾಜ್ಯದ ಭೀಮಾ ತೀರದಲ್ಲಿ ಬರುವ ಭೂಯ್ಯರ್, ಸೊನ್ನ, ಮತ್ತರಗಿ, ಕಲ್ಲೂರು, ಸರಡಗಿ, ಸೊಂತಿ ಮತ್ತು ಯಾದಗಿರಿ ಬಾಂದಾರ ಗಳಿಗೆ ಹರಿ ಬಿಡಲಾಗುವ ನೀರನ್ನು ಕೇವಲ ಕುಡಿಯುವ ನೀರಿನ ಕೊರತೆ ನೀಗಿಸಲು ಮಾತ್ರ ಬಳಕೆಯಾಗುವಂತೆ ನೋಡಲು ಕ್ರಮ ತೆಗೆದುಕೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಎಂ.ಬಿ.ಪಾಟೀಲ್ ಹೇಳಿದ್ದಾರೆ.
ಇಂಡಿ ಶಾಖಾ ಕಾಲುವೆಯಿಂದ ಭೀಮಾ ನದಿಗೆ ಬಿಡಲಾ ಗುವ ನೀರಿನಿಂದ, ನೆರೆಯ ಮಹಾರಾಷ್ಟ್ರದ ಅಕ್ಕಲಕೋಟೆ ಹಾಗೂ ಸೊಲ್ಲಾಪುರ ತಾಲೂಕುಗಳ ಜೊತೆಗೆ ರಾಜ್ಯದ ಅಪ್ಝಲ್‌ಪುರ, ಕಲಬುರಗಿ, ಜೇವರ್ಗಿ, ಶಹಾಪುರ ಮತ್ತು ಯಾದಗಿರಿ ತಾಲೂಕುಗಳು ಎದುರಿಸುತ್ತಿರುವ ಕುಡಿಯುವ ನೀರಿನ ಬವಣೆ ನೀಗಿಸಲು ಸಹಕಾರಿಯಾಗಲಿದೆ ಎಂದು ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.







