ಅಂಬೇಡ್ಕರ್ ಭಾವಚಿತ್ರವಿರುವ ನೋಟುಗಳು ಚಲಾವಣೆಗೆ ಬರಲಿ: ಬಂಜಗೆರೆ ಜಯಪ್ರಕಾಶ್

ಬೆಂಗಳೂರು, ಮೇ 7: ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್‌ರವರ 125ನೆ ಜನ್ಮದಿನಾಚರಣೆಯ ಜ್ಞಾಪಕಾರ್ಥವಾಗಿ ಅವರ ಭಾವ ಚಿತ್ರವಿರುವ ನೋಟುಗಳನ್ನು ಚಲಾವಣೆಗೆ ತರಬೇಕು ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ.ಬಂಜಗೆರೆ ಜಯಪ್ರಕಾಶ್ ಒತ್ತಾಯಿಸಿದ್ದಾರೆ.
ಶನಿವಾರ ನಗರದ ಯವನಿಕ ಸಭಾಂಗಣದಲ್ಲಿ ರಾಜ್ಯ ಸರಕಾರಿ ಎಸ್ಸಿ, ಎಸ್ಟಿ ನೌಕರರ ಸಮನ್ವಯ ಸಮಿತಿ ಆಯೋಜಿಸ್ದಿದ್ದ ಡಾ.ಬಿ.ಆರ್.ಅಂಬೇಡ್ಕರ್‌ರವರ 125ನೆ ಜನ್ಮದಿನಾಚರಣೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಇನ್ನೂರು ವರ್ಷಗಳ ಪರಕೀಯರ ಆಡಳಿತದಿಂದ ಮುಕ್ತಗೊಳಿಸಲು ಹೋರಾಟ ಮಾಡಿದ ಗಾಂಧಿಜೀಯವರ ಭಾವಚಿತ್ರವನ್ನು ನೋಟುಗಳ ಮೇಲೆ ಮುದ್ರಿಸಿ ಚಲಾವಣೆ ತರುವುದಾದರೆ, ಸುಮಾರು 1000 ವರ್ಷಗಳಿಗಿಂತಲೂ ಹೆಚ್ಚು ದಿನಗಳಿಂದ ಜೀವನ ಸಾಗಿಸುತ್ತಿದ್ದ ಸಮಾಜವನ್ನು ಜಾತೀಯತೆ ಸಂಕೋಲೆಯಿಂದ ಮುಕ್ತಗೊಳಿಸಿದ ಡಾ.ಬಿ.ಆರ್. ಅಂಬೇಡ್ಕರ್ ಭಾವಚಿತ್ರವಿರುವ ನೋಟುಗಳನ್ನು ಚಲಾವಣೆಗೆ ತರದೇ ಇರುವುದು ವಿಪರ್ಯಾಸ ಎಂದು ಬೇಸರ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಮಹಾಶಿವಶರಣ ಹರಳಯ್ಯ ಗುರು ಪೀಠದ ಬಸವ ಹರಳಯ್ಯ ಮಹಾ ಸ್ವಾಮೀಜಿ, ನಿವೃತ್ತ ಐಎಎಸ್ ಅಧಿಕಾರಿ ಇ.ವೆಂಕಟಯ್ಯ, ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ನಿರ್ದೇಶಕ ಎನ್.ಶಿವಪ್ರಸಾದ್, ರಾಜ್ಯ ಸರಕಾರಿ ಎಸ್ಸಿ, ಎಸ್ಟಿ ನೌಕರರ ಸಮನ್ವಯ ಸಮಿತಿಯ ಅಧ್ಯಕ್ಷ ಡಿ.ಶಿವಶಂಕರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.





