ಯುವಕರಿಗೆ ಉನ್ನತ ಶಿಕ್ಷಣ ಸರಕಾರದ ಜವಾಬ್ದಾರಿ: ಸಚಿವ ಜಯಚಂದ್ರ
‘ಉನ್ನತ ಶಿಕ್ಷಣದಲ್ಲಿ ಅಂತಾರಾಷಿ್ಟ್ರೀಕರಣ’ ಕುರಿತ ವಿಚಾರ ಸಂಕಿರಣ

ಬೆಂಗಳೂರು, ಮೇ 7: ರಾಜ್ಯದಲ್ಲಿ ಅತೀ ಹೆಚ್ಚು ಜನಸಂಖ್ಯೆ ಹೊಂದಿರುವ ಯುವಕರನ್ನು ಉನ್ನತ ಶಿಕ್ಷಣಕ್ಕೆ ಬರುವಂತೆ ಆಸಕ್ತಿ ಮತ್ತು ಪ್ರೋತ್ಸಾಹ ನೀಡುವುದೇ ಸರಕಾರದ ಮುಂದಿರುವ ದೊಡ್ಡ ಜವಾಬ್ದಾರಿ ಎಂದು ಉನ್ನತ ಶಿಕ್ಷಣ ಸಚಿವ ಟಿ.ಬಿ.ಜಯಚಂದ್ರ ತಿಳಿಸಿದ್ದಾರೆ.
ಶನಿವಾರ ಕೆಎಸ್‌ಎಚ್‌ಇಸಿ ನಗರದ ಜ್ಞಾನಜ್ಯೋತಿ ಸಭಾಂಗಣದಲ್ಲಿ ಆಯೋಜಿಸಿದ್ದ ‘ಉನ್ನತ ಶಿಕ್ಷಣದಲ್ಲಿ ಅಂತಾರಾಷ್ಟ್ರೀಕರಣ’ ಕುರಿತ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದ ಅವರು, ಉನ್ನತ ಶಿಕ್ಷಣದತ್ತ ಯುವ ಜನತೆಯನ್ನು ಸೆಳೆಯುವ ನಿಟ್ಟಿನಲ್ಲಿ ಸರಕಾರ ಅನೇಕ ಕಾರ್ಯಕ್ರಮ ಹಾಗೂ ಯೋಜನೆಯನ್ನು ರೂಪಿಸಿದೆ ಎಂದು ತಿಳಿಸಿದರು.
ರಾಜ್ಯದಲ್ಲಿ 70ಲಕ್ಷ ಯುವ ಜನತೆಯಿದ್ದಾರೆ. ಆದರೆ, ಇದರಲ್ಲಿ ಕೇವಲ 20 ಲಕ್ಷ ಮಂದಿ ಮಾತ್ರ ಉನ್ನತ ಶಿಕ್ಷಣ ಪಡೆಯುತ್ತಿದ್ದಾರೆ. ಇದು ರಾಜ್ಯದ ಬೆಳವಣಿಗೆಗೆ ಮಾರಕವಾಗಿದ್ದು, ಯುವ ಜನತೆ ಉನ್ನತ ಶಿಕ್ಷಣ ಪಡೆದರೆ ಮಾತ್ರ ರಾಜ್ಯದ ಸರ್ವತೋಮುಖ ಅಭಿವೃದ್ಧಿಯಾಗಲು ಸಾಧ್ಯ. ಈ ನಿಟ್ಟಿನಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಸಚಿವ ಟಿ.ಬಿ.ಜಯಚಂದ್ರ ತಿಳಿಸಿದರು.
ಇಂದು ವೇಗವಾಗಿ ಬೆಳೆಯುತ್ತಿರುವ ಜಾಗತಿಕ ಯುಗದಲ್ಲಿ ಶಿಕ್ಷಣವನ್ನು ಪರಿಣಾಮಕಾರಿಯಾಗಿ ಬೋಧಿಸುವಂತಾಗಬೇಕು. ಪಠ್ಯಗಳ ಜೊತೆಗೆ ಪ್ರಸ್ತುತ ಸಮಾಜದಲ್ಲಿರುವ ಎಲ್ಲ ರೀತಿಯ ಕ್ಷೇತ್ರದ ಜ್ಞಾನವನ್ನು ಪಡೆಯುಂತೆ ಸಜ್ಜುಗೊಳಿಸಬೇಕು. ಈ ರೀತಿಯ ಶಿಕ್ಷಣಕ್ಕೆ ಅಗತ್ಯವಿರುವ ತಂತ್ರಜ್ಞಾನ ಸೇರಿದಂತೆ ಇತರ ಸೌಲಭ್ಯಗಳನ್ನು ಒದಗಿಸಲು ಸರಕಾರ ಬದ್ಧವಾಗಿದೆ ಎಂದು ಅವರು ತಿಳಿಸಿದರು.
ರಾಜ್ಯದಲ್ಲಿ 60 ದೇಶಗಳ ಸುಮಾರು 13 ಸಾವಿರ ವಿದ್ಯಾರ್ಥಿ ಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಇಡೀ ದೇಶದಲ್ಲಿಯೆ ಕರ್ನಾಟಕ ವಿದೇಶಿ ವಿದ್ಯಾರ್ಥಿಗಳಿಗೆ ಅಚ್ಚುಮೆಚ್ಚಿನ ತಾಣವಾಗಿದೆ. ಇನ್ನು ಹಲವು ರೀತಿಯ ಸೌಲಭ್ಯಗಳನ್ನು ಕೊಡುವುದರ ಮೂಲಕ ವಿದೇಶಿ ವಿದ್ಯಾರ್ಥಿಗಳನ್ನು ರಾಜ್ಯದತ್ತ ಸೆಳೆಯಲಾಗುವುದು ಎಂದು ಅವರು ಹೇಳಿದರು.
ರಾಜ್ಯ ಉನ್ನತ ಶಿಕ್ಷಣದಲ್ಲಿ ಪ್ರಗತಿ ಸಾಧಿಸಬೇಕಾದರೆ ಅಂತಾರಾಷ್ಟ್ರೀಯ ವಿವಿಗಳ ಜೊತೆ ಕೈ ಜೋಡಿಸುವ ಅಗತ್ಯವಿದೆ. ಈಗಾಗಲೇ ಜಗತ್ತಿನಲ್ಲಿ ಹೆಸರು ಗಳಿಸಿರುವ ವಿವಿಗಳನ್ನು ರಾಜ್ಯಕ್ಕೆ ಆಹ್ವಾನಿಸಿ, ಸೃಜನಶೀಲತೆ, ಜ್ಞಾನದ ವಿನಿಮಯ ಮಾಡಿಕೊಳ್ಳುವ ಅಗತ್ಯವಿದೆ. ಆಗ ಮಾತ್ರ ಅಂತಾರಾಷ್ಟ್ರೀಯ ಮಟ್ಟದಲ್ಲಿ ರಾಜ್ಯದ ಯುವಕರು ಸಮರ್ಥವಾಗಿ ಗುರುತಿಸಿಕೊಳ್ಳಲು ಸಾಧ್ಯವೆಂದು ಅವರು ತಿಳಿಸಿದರು.
ಎಐಯು ಕಾರ್ಯದರ್ಶಿ ಫುರ್ಖಾನ್ ಖಮರ್ ಮಾತ ನಾಡಿ, ಅಂತಾರಾಷ್ಟ್ರೀಯ ವಿಶ್ವವಿದ್ಯಾನಿಲಯಗಳು ದೇಶದಲ್ಲಿ ಸ್ಥಾಪನೆಗೊಳ್ಳುವುದರಿಂದ ಆಗುವ ಪ್ರಯೋಜನ ಹಾಗೂ ಸಮಸ್ಯೆಗಳನ್ನು ಚರ್ಚಿಸಬೇಕಾದ ಅಗತ್ಯವಿದೆ. ಜಾಗತೀಕರಣ ಪರಿಣಾಮ ಅಂತಾರಾಷ್ಟ್ರೀಯ ವಿವಿಗಳಿಂದ ದೇಶದ ಶೈಕ್ಷಣಿಕ ಕ್ಷೇತ್ರ ಉತ್ತಮ ದರ್ಜೆಗೇರಲಿದೆ. ದೇಶದ ವಿದ್ಯಾರ್ಥಿಗಳು ವಿಶ್ವ ಮಟ್ಟದಲ್ಲಿ ಗುರುತಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ವಿಶ್ಲೇಷಿಸಿದರು.
ಕಾರ್ಯಕ್ರಮದಲ್ಲಿ ಉನ್ನತ ಶಿಕ್ಷಣ ಇಲಾಖೆಯ ಮುಖ್ಯ ಕಾರ್ಯದರ್ಶಿ ಭರತ್ ಲಾಲ್ ಮೀನಾ, ಕೆಎಸ್‌ಎಚ್‌ಇಸಿ ಉಪ ಕುಲಪತಿ ಎಸ್.ವಿ.ರಂಗನಾಥ್, ಕೆಎಸ್‌ಎಚ್‌ಇಎಸ್ ಸಲಹೆಗಾರ ರಮೇಶ್ ಕುಮಾರ್ ಮತ್ತಿತರರಿದ್ದರು.





