12 ಎಕರೆ ಸರಕಾರಿ ಭೂಮಿ ಒತ್ತುವರಿ ತೆರವು

ಬೆಂಗಳೂರು, ಮೇ 7: ಬೆಂಗಳೂರು ಪೂರ್ವ ತಾಲೂಕು ವ್ಯಾಪ್ತಿಯ ವಿವಿಧೆಡೆ ಒತ್ತುವರಿಯಾಗಿದ್ದ ಸುಮಾರು 70 ಕೋಟಿ ರೂ.ವೌಲ್ಯದ 12 ಎಕರೆ ಸರಕಾರಿ ಭೂಮಿಯನ್ನು ತೆರವುಗೊಳಿಸಲಾಗಿದೆ.
ಬೆಂಗಳೂರು ಪೂರ್ವ ತಾಲೂಕು ಕೆ.ಆರ್.ಪುರ ಹೋಬಳಿಯ ಕುಂದಲಹಳ್ಳಿ ಗ್ರಾಮದ ಸ.ನಂ.5ರಲ್ಲಿ 1 ಎಕರೆ ಕೆರೆ ಪ್ರದೇಶದಲ್ಲಿ ಅನಧಿಕೃತವಾಗಿ ನಿರ್ಮಿಸಿದ್ದ ಕಾಂಪೌಂಡ್ ಮತ್ತು ವರ್ತೂರು ಹೋಬಳಿಯ ಅಮಾನಿ ಬೆಳ್ಳಂದೂರು ಖಾನೆ ಗ್ರಾಮದ ಸ.ನಂ.1ರಲ್ಲಿ 11 ಎಕರೆ ಕೆರೆ ಜಮೀನಿನ ಕೃಷಿ ಒತ್ತುವರಿ ಸೇರಿ 12 ಎಕರೆ ಸರಕಾರಿ ಭೂಮಿ ಒತ್ತುವರಿಯನ್ನು ತೆರವುಗೊಳಿಸಲಾಗಿದೆ. ಜಿಲ್ಲಾಧಿಕಾರಿ ವಿ.ಶಂಕರ್, ಅಪರ ಜಿಲ್ಲಾಧಿಕಾರಿಗಳಾದ ವಿ.ವೆಂಕಟಾಚಲಪತಿ, ಉಪ ವಿಭಾಗಾಧಿಕಾರಿ ಕೆ.ರಂಗನಾಥ್ ನೇತೃತ್ವದಲ್ಲಿ ಬೆಂಗಳೂರು ಪೂರ್ವ ತಾಲೂಕು ತಹಶೀಲ್ದಾರ್ ಡಾ.ಬಿ.ಆರ್.ಹರೀಶ್‌ನಾಯಕ್ ಒತ್ತುವರಿಯನ್ನು ತೆರವುಗೊಳಿಸಿದರು. ಈ ಸಂದರ್ಭದಲ್ಲಿ ಉಪತಹಶೀಲ್ದಾರ್ ನಾರಾಯಣ ಸ್ವಾಮಿ, ಅನಂತಕುಮಾರಿ, ರಾಜಸ್ವ ನಿರೀಕ್ಷಕರಾದ ಪಶುಪತಿ, ನಾಗೇಶ್, ಗ್ರಾಮಲೆಕ್ಕಾಧಿಕಾರಿ ಚೌಹಾನ್, ರಾಘವೇಂದ್ರ ಬಡಿಗೇರ್, ಸರ್ವೇಯರ್‌ಗಳಾದ ಆನಂದರೆಡ್ಡಿ, ಮಲ್ಲಯ್ಯ ಹಾಗೂ ಅಧೀನ ಸಿಬ್ಬಂದಿ ಮತ್ತು ಕಂದಾಯ ಇಲಾಖೆಯ ನೌಕರರು ಸ್ಥಳದಲ್ಲಿ ಹಾಜರಿದ್ದು ತೆರವು ಕಾರ್ಯಾಚರಣೆ ನಡೆಸಿದರು.
‘587 ಕೋಟಿ ರೂ. ವೌಲ್ಯದ ಸರಕಾರಿ ಭೂಮಿ ವಶ’
ಬೆಂಗಳೂರು, ಮೇ 7: ಬೆಂಗಳೂರು ನಗರ ಜಿಲ್ಲೆಯಲ್ಲಿ ಸರಕಾರಿ ಜಮೀನುಗಳ ಒತ್ತುವರಿ ತೆರವುಗೊಳಿಸುವ ಕಾರ್ಯಾಚರಣೆಯನ್ನು ಕೈಗೊಂಡಿದ್ದು, ನಾಲ್ಕು ತಾಲೂಕುಗಳಲ್ಲಿ ಏಕಕಾಲದಲ್ಲಿ ಕಾರ್ಯಾಚರಣೆ ನಡೆಸಿ ಒಟ್ಟು 587.50 ಕೋಟಿ ರೂ.ವೌಲ್ಯದ 65 ಎಕರೆ 22 ಗುಂಟೆ ಜಮೀನನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ.
ಬೆಂಗಳೂರು ದಕ್ಷಿಣ ತಾಲೂಕು, ಬೇಗೂರು ಹೋಬಳಿಯ ಎಳ್ಳುಕುಂಟೆ ಗ್ರಾಮದ ಸ.ನಂ.18/8 ರಲ್ಲಿ 1ಎಕರೆ ಖರಾಜು ಸೇರಿ ಒಟ್ಟು 4 ಎಕರೆ. ತಾವರೆಕೆರೆ ಹೋಬಳಿ ತಾವರೆಕೆರೆ ಗ್ರಾಮದ ಸ.ನಂ.125 ರಲ್ಲಿ 37 ಎಕರೆ 29 ಗುಂಟೆ ಜಾಗವನ್ನು ಅನಧಿಕೃತವಾಗಿ ಒತ್ತುವರಿ ಮಾಡಿಕೊಂಡಿದ್ದವರಿಗೆ ನೋಟಿಸ್ ನೀಡಿ ಜಮೀನನ್ನು ಜಿಲ್ಲಾಧಿಕಾರಿ ವಿ.ಶಂಕರ್ ನಿರ್ದೇಶನದಂತೆ ತಹಶೀಲ್ದಾರ್ ಎಸ್.ಎಂ.ಶಿವಕುಮಾರ್ ಹಾಗು ಅವರ ಸಿಬ್ಬಂದಿಯೊಡನೆ 330 ಕೋಟಿ ರೂ.ಮೌಲ್ಯದ ಸರಕಾರಿ ಜಮೀನನ್ನು ತೆರವುಗೊಳಿಸಲಾಯಿತು. ಬೆಂಗಳೂರು ಉತ್ತರ ತಾಲೂಕು ಕಸಬಾ ಹೋಬಳಿಯ ಗೆದ್ದಲಹಳ್ಳಿ ಗ್ರಾಮದ ಸ.ನಂ.41ರಲ್ಲಿ 7.50 ಕೋಟಿ ರೂ.ವೌಲ್ಯದ 5 ಗುಂಟೆ ಸರಕಾರಿ ಜಮೀನನ್ನು ತಹಶೀಲ್ದಾರ್ ಶಿವಪ್ಪಎಚ್.ಲಮಾಣಿ ಹಾಗೂ ಅವರ ಸಿಬ್ಬಂದಿ ತೆರವುಗೊಳಿಸಿದರು. ಆನೇಕಲ್ ತಾಲೂಕು ಜಿಗಣಿ ಹೋಬಳಿಯ ತಿರುಪಾಳ್ಯ ಗ್ರಾಮದ ಸ.ನಂ.30, 28, 30, 29, 30, 30, 31ರಲ್ಲಿನ 180 ಕೋಟಿ ರೂ.ವೌಲ್ಯದ ತೋಟಿ ಇನಾಂತಿ ಜಾಗ 7 ಎಕರೆ 28 ಗುಂಟೆ ಜಾಗವನ್ನು ಅನಧಿಕೃತವಾಗಿ ಇತರರು ಮಾರಾಟ ಮಾಡಿದ್ದು, ಸದರಿ ಜಾಗವನ್ನು ಸರಕಾರದ ವಶಕ್ಕೆ ಪಡೆಯಲಾಗಿದೆ. ಜಿಲ್ಲೆಯ 4 ತಾಲೂಕುಗಳಲ್ಲಿ ಏಕ ಕಾಲದಲ್ಲಿ ಸರಕಾರಿ ಜಮೀನನ್ನು ಅನಧಿಕೃತವಾಗಿ ಒತ್ತುವರಿ ಮಾಡಿಕೊಂಡಿ ರುವುದನ್ನು ಜಿಲ್ಲೆಯ ವಿಭಾಗಾಧಿಕಾರಿಗಳು, ಬಿಎಂಟಿಎಫ್ ಅಧಿಕಾರಿಗಳು, ಪೊಲೀಸ್ ಅಧಿಕಾರಿಗಳು, ಸಂಬಂಧಪಟ್ಟ ತಾಲೂಕು ತಹಶೀಲ್ದಾರ್, ರಾಜಸ್ವ ನಿರೀಕ್ಷಕರು ಹಾಗೂ ಅವರ ಸಿಬ್ಬಂದಿ ವರ್ಗದವರ ಸಹಯೋಗದೊಂದಿಗೆ ಕಾರ್ಯಾಚರಣೆ ನಡೆಸಿ ತೆರವುಗೊಳಿಸಿ ಸರ್ಕಾರದ ವಶಕ್ಕೆ ಪಡೆಯಲಾಗಿದೆ.







