ಮೆಸೂರು ಜಿಪಂ: ಜೆಡಿಎಸ್-ಬಿಜೆಪಿ ಮೈತ್ರಿ ಆಡಳಿತ

ಮೈಸೂರು,ಮೇ7: ಮೈಸೂರು ಜಿಲ್ಲಾ ಪಂಚಾಯತ್ ನೂತನ ಅಧ್ಯಕ್ಷ ರಾಗಿ ಜೆಡಿಎಸ್‌ನ ನಯೀಮಾ ಸುಲ್ತಾನ ಆಯ್ಕೆಯಾಗಿದ್ದಾರೆ. ಆ ಮೂಲಕ ಜಿಲ್ಲಾ ಪಂಚಾಯತ್ ಇತಿಹಾಸದಲ್ಲಿ ಮೊದಲ ಬಾರಿಗೆ ಮುಸ್ಲಿಂ ಮಹಿಳೆಯೋರ್ವರು ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿದ ಕೀರ್ತಿಗೆ ಪಾತ್ರರಾಗಿದ್ದಾರೆ.
ಉಪಾಧ್ಯಕ್ಷರಾಗಿ ಬಿಜೆಪಿಯ ನಟರಾಜ್ ಆಯ್ಕೆಯಾಗಿದ್ದಾರೆ. ಇನ್ನು ಮುಂದೆ ಮೈಸೂರು ಜಿಲ್ಲಾ ಪಂಚಾಯತ್‌ನಲ್ಲಿ ಜೆಡಿಎಸ್-ಬಿಜೆಪಿ ಮೈತ್ರಿ ಆಡಳಿತ ಅಸ್ಥಿತ್ವಕ್ಕೆ ಬಂದಿದ್ದು, ಕಾಂಗ್ರೆಸ್ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದರೂ, ಅಧಿಕಾರ ಹಿಡಿಯುವಲ್ಲಿ ವಿಫಲವಾಗಿದೆ. ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿದ್ದ ಟಿ.ನರಸೀಪುರ ತಾಲೂಕಿನ ಗರ್ಗೇಶ್ವರಿ ಕ್ಷೇತ್ರದ ರಾಜಮ್ಮ ಅವರ ಪರ 22 ಮತಗಳು ಚಲಾವಣೆಗೊಂಡರೆ, ಜೆಡಿಎಸ್ ಅಭ್ಯರ್ಥಿ ನಯೀಮಾ ಸುಲ್ತಾನ ಅವರಿಗೆ 27 ಮತಗಳನ್ನು ಪಡೆದು ಜಯಗಳಿಸಿದರು. ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಶ್ರೀಕೃಷ್ಣ 22 ಮತಗಳನ್ನು ಪಡೆದರೆ, ಬಿಜೆಪಿ ಅಭ್ಯರ್ಥಿ ನಟರಾಜ್ 27 ಮತ ಪಡೆದು ಗೆಲುವು ಸಾಧಿಸಿದರು.
ಶನಿವಾರ ಜಿಲ್ಲಾ ಪಂಚಾಯತ್ ನಝೀರ್ ಸಾಬ್ ಸಭಾಂಗಣದಲ್ಲಿ ನಡೆದ ವಿಶೇಷ ಸಭೆಯಲ್ಲಿ ನೂತನ ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ಆಯ್ಕೆ ನಡೆಯಿತು.ಆ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತವರು ಜಿಲ್ಲೆ ಮೈಸೂರು ಜಿಲ್ಲಾ ಪಂಚಯತ್‌ನಲ್ಲಿ ಜೆಡಿಎಸ್ ಮತ್ತು ಬಿಜೆಪಿ ಮೈತ್ರಿ ಆಡಳಿತ ಅಸ್ಥಿತ್ವಕ್ಕೆ ಬಂದಿದೆ. ಒಲ್ಲದ ಮನಸ್ಸಿನಲ್ಲಿಯೇ ನಯೀಮಾ ಬೆಂಬಲಿಸಿದ ಜೆಡಿಎಸ್ ಮತ್ತು ಬಿಜೆಪಿ ಸದಸ್ಯರು ಮತಗಳಲ್ಲಿ ಗೆದ್ದರೂ ಮಾನಸೀಕವಾಗಿ ಸೋಲು ಅನುಭವಿಸಿದ್ದಾರೆ. ಮತ್ತೊಂದೆಡೆ ಮತಗಳಲ್ಲಿ ಕಾಂಗ್ರೆಸ್ ಸೋತರೂ, ಮುಸ್ಲಿಂ ಮಹಿಳೆಯನ್ನು ಅಧ್ಯಕ್ಷರನ್ನಾಗಿ ಮಾಡುವ ನಿಟ್ಟಿನಲ್ಲಿ ಪರೋಕ್ಷ ಪಾತ್ರ ವಹಿಸಿ ನೈತಿಕ ಗೆಲುವು ಸಾಧಿಸಿತು.





